

ನವದೆಹಲಿ: ಫುಡ್ ಡೆಲಿವರಿ ಕ್ಷೇತ್ರದ ಮುಂಚೂಣಿ ಸಂಸ್ಥೆಗಳ ಪೈಕಿ ಒಂದಾದ ಸ್ವಿಗ್ಗಿ ಗುರುವಾರದಿಂದ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಮನೆ ಬಾಗಿಲಿಗೇ ಮದ್ಯ ಪೂರೈಸುವ ಕೆಲಸ ಆರಂಭಿಸಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಮದ್ಯದ ಆರ್ಡರ್ ತೆಗೆದುಕೊಂಡು ಗ್ರಾಹಕರ ಮನೆಬಾಗಿಲಿಗೆ ತಲುಪಿಸುವ ವಿಚಾರವಾಗಿ ಸರ್ಕಾರದ ಜತೆಗೆ ಮಾತುಕತೆಯನ್ನು ಸ್ವಿಗ್ಗಿ ನಡೆಸುತ್ತಿದೆ.
ಜಾರ್ಖಂಡ್ನಲ್ಲಿ ರಾಂಚಿಯಲ್ಲಿ ಇಂದು ಮನೆ ಬಾಗಿಲಿಗೆ ಮದ್ಯ ತಲುಪಿಸುವ ವ್ಯವಸ್ಥೆ ಶುರುಮಾಡಲಾಗಿದ್ದು, ರಾಜ್ಯದ ಉಳಿದ ಕಡೆಗಳಲ್ಲೂ ಈ ಸೇವೆ ಶೀಘ್ರವೇ ಲಭ್ಯವಾಗಲಿದೆ. ಸದ್ಯ ಚಾಲ್ತಿಯಲ್ಲಿರುವ ನಿಯಮಗಳನ್ನು ಪಾಲಿಸಿಕೊಂಡು ಸುರಕ್ಷಿತವಾಗಿ ಮದ್ಯ ಸರಬರಾಜು ಮಾಡುವ ಕೆಲಸವನ್ನು ಕಂಪನಿಯು ಖಾತರಿಗಪಡಿಸುತ್ತದೆ ಎಂದು ಸ್ವಿಗ್ಗಿ ತಿಳಿಸಿದೆ. ಇದಲ್ಲದೆ, ಮದ್ಯ ಸರಬರಾಜು ಮಾಡುವಾಗ ಗ್ರಾಹಕರ ವಯಸ್ಸು ಮತ್ತು ಇತರೆ ಕಾನೂನುಗಳು ಏನೇನಿವೆಯೋ ಅದನ್ನೂ ಪಾಲಿಸಲಿದ್ದು ಈ ಸೇವೆ ದುರುಪಯೋಗ ಆಗದ ರೀತಿಯಲ್ಲಿ ಮುಂಜಾಗ್ರತಾ ಕ್ರಮವನ್ನೂ ತೆಗೆದುಕೊಳ್ಳುವುದಾಗಿ ಭರವಸೆಯನ್ನು ನೀಡಿದೆ.
ಇದನ್ನೂ ಓದಿ: ಸ್ವಿಗ್ಗಿಯಲ್ಲಿ 1,100 ಸಿಬ್ಬಂದಿಗೆ ಕತ್ತರಿ
ಈ ಸಂಬಂಧ ಪ್ರತಿಕ್ರಿಯಿಸಿರುವ ಕಂಪನಿಯ ಉತ್ಪನ್ನ ವಿಭಾಗದ ಉಪಾಧ್ಯಕ್ಷ ಅನುಜ್ ರಾಥಿ, ಸುರಕ್ಷಿತವಾಗಿ ಮತ್ತು ಹೊಣೆಗಾರಿಕೆಯೊಂದಿಗೆ ಮದ್ಯವನ್ನು ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆಗೆ ಚಾಲನೆ ಕೊಡುವುದರೊಂದಿಗೆ ನಾವು ಚಿಲ್ಲರೆ ಮಾರಾಟಗಾರರಿಗೆ ಹಚ್ಚುವರಿ ವ್ಯಾಪಾರ ಒದಗಿಸುತ್ತಿದ್ದೇವೆ. ಅವರು ಎದುರಿಸುತ್ತಿದ್ದ ಜನದಟ್ಟಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಮಸ್ಯೆಗೂ ಪರಿಹಾರ ಒದಗಿಸಿದ್ದೇವೆ ಎಂದು ತಿಳಿಸಿದ್ದಾರೆ.
ಸದ್ಯ ಲಭ್ಯವಿರುವ ಟೆಕ್ನಾಲಜಿ ಮತ್ತು ಕಂಪನಿಯ ಮೂಲಸೌಕರ್ಯವನ್ನು ಬಳಸಿಕೊಂಡು ಹೈಪರ್ ಲೋಕಲ್ ಲೆವೆಲ್ಗೂ ಡೆಲಿವರಿ ಕೊಡುವ ಕೆಲಸಕ್ಕೆ ಕಂಪನಿ ಮುಂದಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳ ಜತೆಗೂ ಕೆಲಸ ಮಾಡುತ್ತಿದ್ದು ಅವರ ಮಾರ್ಗದರ್ಶನದಂತೆ ಕೋವಿಡ್ 19 ಪರಿಹಾರ ಮತ್ತು ದಿನಸಿ ಸಾಮಗ್ರಿ ಮನೆಮನೆಗೆ ತಲುಪಿಸುವ ನಿಟ್ಟಿನಲ್ಲೂ ಕೆಲಸ ಮಾಡುತ್ತಿದ್ದೇವೆ ಎಂದು ರಾಥಿ ತಿಳಿಸಿದ್ದಾರೆ. (ಏಜೆನ್ಸೀಸ್)