cm siddaramaiah request 
ನ್ಯೂಸ್

ಮಾಜಿ ಸಿಎಂ ಕುಮಾರಸ್ವಾಮಿ ಪೆನ್​ಡ್ರೈವ್​ಗೆ ಬೆಚ್ಚಿಬಿತ್ತಾ ಕಾಂಗ್ರೆಸ್? ಶಾಸಕರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ಕೊಟ್ಟ ಸಿಎಂ!

ಬೆಂಗಳೂರು: ಕಾಂಗ್ರೆಸ್ ‌ಶಾಸಕಾಂಗ‌ ಪಕ್ಷದ ಸಭೆಯಲ್ಲಿ ಸ್ಟಿಂಗ್ ಆಪರೇಷನ್ ಬಗ್ಗೆ ಚರ್ಚೆ ನಡೆದಿದ್ದು ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಪಾಠ ಮಾಡಿದ್ದಾರೆ.

ಜೂ.5ರಂದು ವಿಧಾನಸಭಾ ಕಲಾಪಕ್ಕೆ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಪೆನ್​ಡ್ರೈವ್​ ಹಿಡಿದು ಬಂದು, ಎಲ್ಲರ ಗಮನ ಸೆಳೆದಿದ್ದರು. ಅವರು ತೋರಿಸಿದ್ದ ಪೆನ್​ಡ್ರೈವ್​ನಲ್ಲಿ ಸರ್ಕಾರದ ವರ್ಗಾವಣೆ ದಂಧೆಯ ಬಗ್ಗೆ ಮಹತ್ವದ ಮಾಹಿತಿ ಇದೆ ಎಂದು ಹೇಳಲಾಗುತ್ತಿದೆ.

ಕಲಾಪಕ್ಕೆ ಹಾಜರಾಗುವ ಮುನ್ನ ವಿಧಾನಸೌಧದ ಮುಂದೆ ಎಚ್​ಡಿಕೆ ಪೆನ್​ಡ್ರೈವ್ ಪ್ರದರ್ಶನ ಮಾಡಿದ್ದು ಅದರಲ್ಲಿ ಸಚಿವರೊಬ್ಬರ ಭ್ರಷ್ಟಾಚಾರ ವಿಚಾರ ಅಡಗಿದೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿದ ಎಚ್​ಡಿಕೆ, ಸಾಕ್ಷಿ ಬೇಕು ಅಂತ ಹೇಳಿದ್ರಲ್ಲ ಅದಕ್ಕೆ ರೆಡಿ ಮಾಡಿ ಇಟ್ಟುಕೊಂಡಿದ್ದೀನಿ. ನಮ್ಮಿಂದ ಬೆಳೆದವರು ನಮ್ಮ ಬಗ್ಗೆಯೇ ಮಾತನಾಡುತ್ತಾರೆ. ಇದು ವರ್ಗಾವಣೆ ದಂಧೆಯ ಪೆನ್ ಡ್ರೈವ್ ಎಂದು ಹೇಳಿದ್ದರು.

ಈ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷ ಬೆಚ್ಚಿಬಿದ್ದಿದೆಯಾ ಎನ್ನುವ ಅನುಮಾನ ಎದುರಾಗಿದ್ದು ಇದೀಗ ಸಿಎಂ ಸಿದ್ದರಾಮಯ್ಯ, ಶಾಸಕರಿಗೆ ಕಿವಿಮಾತು ಹೇಳಿದ್ದಾರೆ. ಕಾಂಗ್ರೆಸ್​ ಪಕ್ಷದ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಸಿಎಂ, "ವಿಪಕ್ಷಗಳಿಂದ ಸ್ಟಿಂಗ್ ಆಪರೇಷನ್‌ಗಳು ನಡೆಯುತ್ತಿರುತ್ತವೆ. ಎಲ್ಲರೂ ಎಚ್ಚರಿಕೆ ಇಂದ ಇರಿ.

ಸರ್ಕಾರದ ಆರಂಭದಲ್ಲಿ ಈಸಿಯಾಗಿ ಟ್ರ್ಯಾಪ್ ಆಗುತ್ತೀರಿ. ಹೀಗಾಗಿ ಟ್ರ್ಯಾಪ್ ಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಿ" ಎಂದು ನೂತನ ಶಾಸಕರೂ, ಸಚಿವರು ಸೇರಿದಂತೆ ಎಲ್ಲರಿಗೂ ಸಲಹೆ ನೀಡಿದ್ದಾರೆ.