

ಬೆಂಗಳೂರು: ಇಂದಿನ ವಿಧಾನಸಭಾ ಕಲಾಪಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪೆನ್ಡ್ರೈವ್ ಹಿಡಿದು ಬಂದಿದ್ದು, ಎಲ್ಲರ ಗಮನ ಸೆಳೆದಿದೆ. ಪೆನ್ಡ್ರೈವ್ನಲ್ಲಿ ಸರ್ಕಾರದ ವರ್ಗಾವಣೆ ದಂಧೆಯ ಬಗ್ಗೆ ಮಹತ್ವದ ಮಾಹಿತಿ ಇದೆ ಎಂದು ಹೇಳಲಾಗುತ್ತಿದೆ.
ಕಲಾಪಕ್ಕೆ ಹಾಜರಾಗುವ ಮುನ್ನ ವಿಧಾನಸೌಧದ ಮುಂದೆ ಎಚ್ಡಿಕೆ ಪೆನ್ಡ್ರೈವ್ ಪ್ರದರ್ಶನ ಮಾಡಿದರು. ಸಚಿವರೊಬ್ಬರ ಭ್ರಷ್ಟಾಚಾರ ವಿಚಾರ ಅದರಲ್ಲಿ ಅಡಗಿದೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿದ ಎಚ್ಡಿಕೆ, ಸಾಕ್ಷಿ ಬೇಕು ಅಂತ ಹೇಳಿದ್ರಲ್ಲ ಅದಕ್ಕೆ ರೆಡಿ ಮಾಡಿ ಇಟ್ಟುಕೊಂಡಿದ್ದೀನಿ. ನಮ್ಮಿಂದ ಬೆಳೆದವರು ನಮ್ಮ ಬಗ್ಗೆಯೇ ಮಾತನಾಡುತ್ತಾರೆ. ವರ್ಗಾವಣೆ ದಂಧೆಯ ಪೆನ್ ಡ್ರೈವ್ ಎಂದು ಹೇಳಿದರು.
ನಾನು ನನ್ನ ಅವಧಿಯಲ್ಲಿ ಕೆಎಸ್ಟಿ ಟ್ಯಾಕ್ಸ್ ಇಟ್ಟಿರಲಿಲ್ಲ. ತಾಜ್ ವೆಸ್ಟ್ ಎಂಡ್ ಹೋಟೆಲ್ನವರು ದುಡ್ಡು ಕಟ್ಟಿ ಅಂತ ಮೈತ್ರಿ ಸರ್ಕಾರ ಇದ್ದಾಗ ಕಾಂಗ್ರೆಸ್ ಕಚೇರಿಗೆ ಬಿಲ್ ಕಳಿಸಿದ್ರಾ? ಎರಡ್ಮೂರು ಲಕ್ಷ ರೂಪಾಯಿ ಲಕ್ಷ ಖರ್ಚು ಮಾಡುವ ಯೋಗ್ಯತೆ ನಮಗಿಲ್ವಾ? ಯಾವುದೋ ಬ್ಲೂ ಫಿಲ್ಮ್ ಅನ್ನು ಟೆಂಟ್ನಲ್ಲಿ ತೋರಿಸಿಕೊಂಡು ಬಂದಿಲ್ಲ. ನಾನೇನು ರೌಡಿಗಳಿಗೆ ಎಣ್ಣೆ ಪೂರೈಕೆ ಮಾಡಿಕೊಂಡು ಬಂದಿದ್ದೀನಾ? ಇವರಿಂದ ಕಲಿಯುವ ದರಿದ್ರ ನಂಗೆ ಬಂದಿಲ್ಲ ಎಂದು ಪರೋಕ್ಷವಾಗಿ ಡಿಸಿಎಂ ಡಿಕೆಶಿಗೆ ಎಚ್ಡಿಕೆ ಟಾಂಗ್ ನೀಡಿದರು.
ನನ್ನ ಆಸ್ತಿ ಬಗ್ಗೆ ಬೇಕಾದರೆ ತನಿಖೆ ಮಾಡಲಿ. ಸಿಎಂಗೆ ಹೇಳಿ ತನಿಖೆ ಮಾಡಿಸಲಿ, ನಾನೇನು ಅವರನ್ನು ಹಿಡಿದುಕೊಂಡಿದ್ದೀನಾ? ನಿನ್ನೆ ಎರಡು ವರ್ಗಾವಣೆ ಆಗಿದೆ. ಇಂಧನ ಇಲಾಖೆಯಲ್ಲಿ ಹತ್ತತ್ತು ಕೋಟಿಗೆ ವರ್ಗಾವಣೆ ಆಗಿದೆ. ಆ ಅಧಿಕಾರಿ ಒಂದು ದಿನಕ್ಕೆ ಐವತ್ತು ಲಕ್ಷ ಕಮಿಷನ್ ಹೊಡೆಯುತ್ತಾನೆ. ಪೆನ್ಡ್ರೈವ್ ನಲ್ಲಿ ಸಚಿವರೊಬ್ಬರ ಆಡಿಯೋ ಇದೆ. ವರ್ಗಾವಣೆ ದಂಧೆಗೆ ಹಣ ಕೇಳಿರುವ ಆಡಿಯೋ ಇದು ಎಂದು ಎಚ್ಡಿಕೆ ತಿಳಿಸಿದರು.
ಪೆನ್ಡ್ರೈವ್ನಲ್ಲಿ ಸಚಿವರೊಬ್ಬರು ಲಂಚ ಕೇಳಿರುವ ಆಡಿಯೋ ಇದೆ ಎನ್ನಲಾಗಿದೆ. 30 ಲಕ್ಷ ರೂ. ಲಂಚ ಕೇಳಿರುವ ಆಡಿಯೋವಂತೆ. ಸರ್ಕಾರದ ಹಿರಿಯ ಸಚಿವರ ಆಡಿಯೋ ಎನ್ನಲಾಗಿದೆ. ಗ್ಯಾರೆಂಟಿ ಯೋಜನೆಗಳಿಗೆ ಸಂಬಂಧಿಸಿದ ಸಚಿವರೊಬ್ಬರು ಎಂಬ ಮಾಹಿತಿಯೂ ಇದೆ. ಇದೀಗ ಸರ್ಕಾರಕ್ಕೆ ಈ ಪೆನ್ಡ್ರೈವ್ ಸಂಕಷ್ಟ ತರುತ್ತಾ? ಸಚಿವರು ರಾಜೀನಾಮೆ ನೀಡುತ್ತಾರಾ ಅನ್ನೋ ಪ್ರಶ್ನೆ ಆಡಿಯೋ ಬಿಡುಗಡೆ ಬಳಿ ಮುನ್ನೆಲೆಗೆ ಬರಲಿದೆ. (ದಿಗ್ವಿಜಯ ನ್ಯೂಸ್)