ಮುಂಬೈ: ಕರೊನಾ ಬಿಕ್ಕಟ್ಟು ಹಾಗೂ ಅದರ ನಂತರ ಉಂಟಾದ ಲಾಕ್ಡೌನ್ ಹಿನ್ನೆಲೆಯಲ್ಲಿ ಅವೆಷ್ಟೋ ವ್ಯವಹಾರಗಳು ನಿಂತು ಹೋಗಿವೆ. ಇದೇ ಕಾರಣಕ್ಕೆ ಬ್ಯಾಂಕ್ಗಳಿಂದ ತೆಗೆದುಕೊಂಡಿರುವ ಸಾಲದ ಇಐಎಂ ಕಟ್ಟಲಾಗದೇ ತೊಂದರೆ ಅನುಭವಿಸುತ್ತಿದ್ದಾರೆ. ಅಂಥವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಭರ್ಜರಿ ಸುದ್ದಿ ಸಿಕ್ಕಿದೆ.
ಗೃಹಸಾಲ ಸೇರಿದಂತೆ ಇತರ ಸಾಲಗಳನ್ನು ಪಡೆದಿರುವ ಗ್ರಾಹಕರು ಕಟ್ಟಬೇಕಿರುವ ಇಎಂಐ ಅವಧಿಯನ್ನು ಬ್ಯಾಂಕ್ ಎರಡು ವರ್ಷ ಅಂದರೆ 24 ತಿಂಗಳವರೆಗೆ ವಿಸ್ತಾರ ಮಾಡಿದೆ.
ಇದಕ್ಕಾಗಿ ಸ್ಟೇಟ್ ಬ್ಯಾಂಕ್ ವತಿಯಿಂದ ಹೊಸದೊಂದು ಪೋರ್ಟಲ್ ತೆರೆಯಲಾಗಿದ್ದು, ಅಲ್ಲಿ ನೀವು ಈ ಸೌಲಭ್ಯಕ್ಕೆ ಅರ್ಹರೋ ಎಂಬುದನ್ನು ತಿಳಿದುಕೊಳ್ಳಬಹುದು. ಏಕೆಂದರೆ, ಈ ಸೌಲಭ್ಯವನ್ನು ಪಡೆಯಲು ಒಂದು ಷರತ್ತನ್ನು ಎಸ್ಬಿಐ ವಿಧಿಸಿದೆ.
ಇಎಂಐ ಪಡೆಯಲು ಯಾರು ಅರ್ಹರು? ಈ ಲಿಂಕ್ ಕ್ಲಿಕ್ ಮಾಡಿ: ಸಾಲದ ಇಎಂಐಯಿಂದ 2 ವರ್ಷ ಮುಕ್ತಿಗೆ ನೀವೂ ಅರ್ಹರಾ? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಫುಲ್ ಡಿಟೇಲ್ಸ್
ಅದೇನೆಂದರೆ, 2020ರ ಮಾರ್ಚ್ 1ಕ್ಕಿಂತ ಮೊದಲು ಸಾಲ ಪಡೆದ ಹಾಗೂ ಕೋವಿಡ್-19 ಲಾಕ್‌ಡೌನ್‌ವರೆಗೆ ಸಾಲಮರುಪಾವತಿ ಕಂತನ್ನು ನಿಗದಿತ ಅವಧಿಯಲ್ಲಿ ಕಟ್ಟುತ್ತಾ ಬಂದಿರುವ ಗ್ರಾಹಕರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.
ಅಷ್ಟೇ ಅಲ್ಲದೇ, ಇಐಎಂ ಎರಡು ವರ್ಷ ಮುಂದೂಡಿದ ಮಾತ್ರಕ್ಕೆ ಗ್ರಾಹಕರು ತುಂಬಬೇಕಿರುವ ಮೊತ್ತವು ಕಡಿಮೆಯಾಗುತ್ತದೆ ಎಂಬ ಅರ್ಥ ಕಲ್ಪಿಸಕೂಡದು. ಏಕೆಂದರೆ, ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವವರು ಎರಡು ವರ್ಷಗಳವರೆಗೆ ಕಂತನ್ನು ತುಂಬಬೇಕಿಲ್ಲ ಎನ್ನುವುದು ನಿಜವಾದರೂ, ಈ ಅವಧಿ ಮುಗಿದ ಮೇಲೆ 0.35 ರಷ್ಟು ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.