ನ್ಯೂಸ್

ಅತ್ತ ಕದನವಿರಾಮ ಉಲ್ಲಂಘನೆ- ಇತ್ತ ಹಿಂದೂಗಳಿಗೆ ದೀಪಾವಳಿ ಶುಭಾಶಯ!

ಇಸ್ಲಾಮಾಬಾದ್‌: ಕದನ ವಿರಾಮ ಉಲ್ಲಂಘನೆ ಮಾಡಿ ಭಾರತದ ಗಡಿ ಪ್ರದೇಶದಲ್ಲಿ ಗುಂಡಿನ ದಾಳಿ ಮಾಡುತ್ತ ಒಂದೆಡೆ ಪಾಕಿಸ್ತಾನದ ಸೈನಿಕರು ಭಾರತದ ಮೇಲೆ ದಾಳಿ ನಡೆಸುತ್ತಿದ್ದರೆ, ಇನ್ನೊಂದೆಡೆ, ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಪ್ರಧಾನಿ ಇಮ್ರಾನ್ ಖಾನ್ ಅವರು ಶನಿವಾರ ದೀಪಾವಳಿಯ ಶುಭಾಶಯ ಕೋರಿದ್ದಾರೆ!

ಟ್ವಿಟರ್‌ ಮೂಲಕ ಇಮ್ರಾನ್‌ ಖಾನ್‌ ಶುಭ ಕೋರಿದ್ದಾರೆ. 'ದೇಶದ ಹಿಂದೂಗಳಿಗೆಲ್ಲ ದೀಪಾವಳಿಯ ಶುಭಾಶಯಗಳು' ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಪಾಕಿಸ್ತಾನದಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಬಲವಂತವಾಗಿ ಮತಾಂತರಿಸುವ, ವಿವಾಹವಾಗುವ, ಒಪ್ಪದವರವನ್ನು ಹತ್ಯೆ ಮಾಡುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ. ಇತ್ತೀಚೆಗೆ ಅಲ್ಲಿನ ಸಂಸತ್ತಿನಲ್ಲೂ ಈ ಬಗ್ಗೆ ಸಂಸದರೊಬ್ಬರು ಧ್ವನಿ ಎತ್ತಿದ್ದಾರೆ. ಸಂಸದೀಯ ಸಮಿತಿಯೊಂದು ವರದಿಯನ್ನೂ ಸಲ್ಲಿಸಿದೆ. ಪರಿಸ್ಥಿತಿ ಹೀಗಿರುವಾಗಹಿಂದೂಗಳಿಗೆ ದೀಪಾವಳಿ ಶುಭಾಶಯ ಕೋರಿರುವ ಇಮ್ರಾನ್‌ ಖಾನ್‌ ವಿರುದ್ಧ ಭಾರಿ ಆಕ್ರೋಶವೂ ವ್ಯಕ್ತವಾಗಿದೆ. 

ಪಾಕಿಸ್ತಾನದ ಟಿ.ವಿಗಳಲ್ಲಿಯೂ ದೀಪಾವಳಿ ಸುದ್ದಿ ಬಿತ್ತರಗೊಳ್ಳುತ್ತಿದೆ. 'ಹಿಂದೂಗಳು  ದೇಶಾದ್ಯಂತ ದೀಪಾವಳಿಯನ್ನು ಉತ್ಸಾಹದಿಂದ ಆಚರಿಸುತ್ತಿದ್ದಾರೆ. ಮನೆಗಳು ಮತ್ತು ದೇವಾಲಯಗಳನ್ನು ವರ್ಣರಂಜಿತ ದೀಪಗಳಿಂದ ಅಲಂಕರಿಸಲಾಗಿದೆ. ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯಲಿದ್ದು, ಜನ ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಲಿದ್ದಾರೆ,' ಎಂದು ವರದಿ ಮಾಡಿವೆ.

ಪಾಕಿಸ್ತಾನದ ಹಿಂದೂಗಳು ಕೂಡ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಪಾಕಿಸ್ತಾನದ ಬಹುಪಾಲು ಹಿಂದೂಗಳು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದ್ದಾರೆ. ಅಲ್ಲಿಯ ಹಿಂದೂಗಳು ದೀಪಾವಳಿ ಹಬ್ಬ ಅಚರಿಸುತ್ತಿರುವ ಬಗ್ಗೆ ಪಾಕಿಸ್ತಾನದ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಸಾರ ಆಗುತ್ತಿವೆ. 

ಕರಾಚಿ, ಲಾಹೋರ್ ಮಾತ್ರವಲ್ಲದೇ, ಮಾಟಿಯಾರಿ, ಟ್ಯಾಂಡೋ ಅಲ್ಲಾಹಾರ್, ತಾಂಡೋ ಮುಹಮ್ಮದ್ ಖಾನ್, ಜಮ್‌ಶೊರೊ, ಬಾದಿನ್, ಸಂಘರ್, ಹಾಲಾ, ತಾಂಡೋ ಆಡಮ್ ಮತ್ತು ಶಹಾದ್‌ಪುರಗಳಲ್ಲಿ ದೀಪಾವಳಿ ಉತ್ಸವಗಳು ವಿಜೃಂಭಣೆಯಿಂದ ನಡೆಯುತ್ತಿವೆ.

ಅಧಿಕೃತ ಅಂದಾಜಿನ ಪ್ರಕಾರ, 75 ಲಕ್ಷ ಹಿಂದೂಗಳು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಆದರೆ, 90 ಲಕ್ಷಕ್ಕೂ ಹೆಚ್ಚು ಹಿಂದೂಗಳು ಪಾಕಿಸ್ತಾನದಲ್ಲಿ ಇದ್ದಾರೆ.