

ಶ್ರೀನಗರ: ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೈನಿಕರು ನಡೆಸಿದ ಕದನ ವಿರಾಮ ಉಲ್ಲಂಘನೆಯಲ್ಲಿ ಗಡಿ ಭದ್ರತಾ ಪಡೆ(ಬಿಎಸ್ ಎಫ್) ಸಬ್ ಇನ್ಸ್ಪೆಕ್ಟರ್ ರಾಕೇಶ್ ದೋವಲ್ ಸೇರಿದಂತೆ ನಾಲ್ವರು ಯೋಧರು ನಿನ್ನೆ ಹುತಾತ್ಮರಾಗಿದ್ದರು. ಮಾತ್ರವಲ್ಲದೇ ಪಾಕಿಸ್ತಾನ ನಡೆಸಿದ್ದ ಶೆಲ್ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ.
ಹೀಗೆ ಪದೇ ಪದೇ ಭಾರತೀಯ ಯೋಧರ ತಾಳ್ಮೆಯನ್ನು ಪರೀಕ್ಷಿಸುತ್ತಿರುವ ಪಾಕಿಗಳನ್ನು ಸುಮ್ಮನೆ ಬಿಟ್ಟರೆ ಆಗುವುದಿಲ್ಲ ಎಂಬ ಕಾರಣದಿಂದ ಭಾರತೀಯ ಯೋಧರು ಉಗ್ರವಾಗಿ ತಿರುಗಿಬಿದ್ದಿದ್ದು, ಪಾಕಿಸ್ತಾನಕ್ಕೆ ಎದೆ ನಡುಗಿಸುವಂಥ ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ದೊಡ್ಡಮಟ್ಟದಲ್ಲೇ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನದ ಬಂಕರ್ಗಳ ಮೇಲೆ ಸಾಲು ಸಾಲು ದಾಳಿ ನಡೆಸುವ ಮೂಲಕ ಪಾಕಿಗಳು ಮತ್ತೆ ಹೀನಾಯ ಬುದ್ಧಿ ತೋರುವ ಮುನ್ನ ನೂರು ಬಾರಿ ಯೋಚಿಸುವಂತೆ ಮಾಡಿದೆ.
ಬಾರಾಮುಲ್ಲಾ ಜಿಲ್ಲೆಯ ಉರಿ ಪ್ರದೇಶದ ಕಮಲ್ಕೋಟ್ ಸೆಕ್ಟರ್ ಹಾಗೂ ಉರಿಯ ಹಾಜಿ ಪೀರ್ಸೆಕ್ಟರ್ ನ ಬಾಲ್ಕೋಟ್ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘಿಸಿದ್ದ ಪಾಕಿಸ್ತಾನದ ದಾಳಿಗೆ ಯೋಧರು ಹುತಾತ್ಮರಾಗಿರುವ ಬೆನ್ನಲ್ಲೇ ಭಾರತೀಯ ಯೋಧರು ಇಂಥದ್ದೊಂದು ದಿಟ್ಟ ಉತ್ತರ ನೀಡಿದ್ದಾರೆ.
ಅನೇಕ ಪಾಕಿಸ್ತಾನಿ ಬಂಕರ್ಗಳನ್ನು ಸಹ ನಾಶಪಡಿಸಿರುವ ಯೋಧರ ವಿಡಿಯೋ ಇದೀಗ ವೈರಲ್ ಆಗಿದೆ. ಇದಲ್ಲದೆ ಇಂಧನ ಡಂಪ್ಗಳು ಮತ್ತು ಲಾಂಚ್ ಪ್ಯಾಡ್ಗಳು ಸಹ ನಾಶವಾಗಿವೆ. ಪಾಕಿಸ್ತಾನದ ಮೂರು ಕಮಾಂಡೋಗಳು ಹಾಗೂ ಐವರು ಸೈನಿಕರನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆಯ ಮೂಲಗಳು ಹೇಳಿವೆ. 12 ಪಾಕಿಸ್ತಾನಿ ಸೈನಿಕರು ಗಾಯಗೊಂಡಿದ್ದಾರೆ.