ಗೋವಿಂದನಗರ (ಉತ್ತರ ಪ್ರದೇಶ): ‘ಲೈಂಗಿಕ ದೌರ್ಜನ್ಯದ ವಿರುದ್ಧ ದೂರು ದಾಖಲು ಮಾಡಿಕೊಳ್ಳಲು ಹೋದರೆ ನನಗೆ ನೃತ್ಯ ಮಾಡುವಂತೆ ಪೊಲೀಸರು ಹೇಳಿದರು. ತಡರಾತ್ರಿಯವರೆಗೆ ನನ್ನನ್ನು ಕುಳ್ಳರಿಸಿಕೊಂಡರು. ಹೊತ್ತಲ್ಲದ ಹೊತ್ತಲ್ಲಿ ನನ್ನನ್ನು ಠಾಣೆಗೆ ಕರೆದರು...’
ಹೀಗೆಂದು ಪೊಲೀಸರ ದೌರ್ಜನ್ಯದ ವಿರುದ್ಧ 16 ವರ್ಷದ ಬಾಲಕಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ತನ್ನ ನೋವನ್ನು ತೋಡಿಕೊಂಡಿದ್ದು ಅದೀಗ ವೈರಲ್ ಆಗಿದೆ.
ಉತ್ತರ ಪ್ರದೇಶದ ಗೋವಿಂದನಗರದ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿರುದ್ಧ ಈ ರೀತಿ ಬಾಲಕಿ ಈ ರೀತಿ ದೂರಿದ್ದಾಳೆ.
ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಮನೆ ಮಾಲೀಕನ ಸೋದರಳಿಯ ವಿರುದ್ಧ ಎಫ್‌ಐಆರ್ ದಾಖಲಿಸುವ ಬದಲು ಅದನ್ನು ದಾಖಲು ಮಾಡಬೇಕೆಂದರೆ ಡಾನ್ಸ್ ಮಾಡುವಂತೆ ಇನ್ಸ್‌ಪೆಕ್ಟರ್ ಹೇಳಿ ವಿಕೃತಿ ಮೆರೆದಿದ್ದಾರೆ ಎಂದು ಬಾಲಕಿ ಅವಲತ್ತುಕೊಂಡಿದ್ದಾಳೆ.
ಬಾಲಕಿ ತನ್ನ ಕುಟುಂಬದೊಂದಿಗೆ ಗೋವಿಂದ್ ನಗರದ ದಬೌಲಿ ವೆಸ್ಟ್ ಪ್ರದೇಶದಲ್ಲಿ ಬಾಡಿಗೆ ವಸತಿ ಸೌಕರ್ಯದಲ್ಲಿ ವಾಸಿಸುತ್ತಿದ್ದಾಳೆ. ಅದರ ಮಾಲೀಕನ ಸಹೋದರಳಿಯ ಅನುಪ್ ಯಾದವ್ ಬಾಲಕಿಯ ಮೇಲೆ ಕೆಲವು ಬಾರಿ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಈ ಕುರಿತು ಮಾಲೀಕನನ್ನು ದೂರಿದರೆ, ಅಲ್ಲಿಂದ ಮನೆ ಖಾಲಿ ಮಾಡಿಸಿದ್ದಾರೆ.
ಇದನ್ನೂ ಓದಿ: ವಿಡಿಯೋ: ಸೈಕಲ್ ಮೇಲೆ ಶಂಕಿತನ ಶವ ಸಾಗಣೆ; ಅಂಬುಲೆನ್ಸ್ ನೀಡದ ಆರೋಗ್ಯ ಇಲಾಖೆ; ಎಂ.ಕೆ. ಹುಬ್ಬಳ್ಳಿಯಲ್ಲಿ ಮನಕಲಕುವ ಘಟನೆ
ಕುಟುಂಬಸ್ಥರು ಬೇರೆ ಕಡೆ ಬಂದಿದ್ದರೂ, ಆತನ ದೌರ್ಜನ್ಯ ಮುಂದುವರೆದಿದೆ ಎನ್ನುವುದು ಬಾಲಕಿಯ ಆರೋಪ. ರಸ್ತೆಯ ಮೇಲೆ ಅಡ್ಡಗಟ್ಟಿ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾನೆ.
ಗೋವಿಂದ್ ನಗರದ ಇನ್ಸ್‌ಪೆಕ್ಟರ್ ಅನುರಾಗ್ ಮಿಶ್ರಾ ಅವರನ್ನು ಮಗಳು ಸಂಪರ್ಕಿಸಿದಾಗ, ಆರೋಪಿ ವಿರುದ್ಧ ಎಫ್‌ಐಆರ್ ದಾಖಲು ಮಾಡಿಕೊಳ್ಳುವ ಬದಲು ಮಗಳಿಗೆ ನೃತ್ಯ ಮಾಡುವಂತೆ ಹೇಳಿದ್ದಾರೆ ಎಂದು ಬಾಲಕಿಯ ತಾಯಿಯೂ ದುಃಖ ತೋಡಿಕೊಂಡಿದ್ದಾರೆ.
ಆದರೆ ಈ ಆರೋಪವನ್ನು ಇನ್ಸ್‌ಪೆಕ್ಟರ್ ತಳ್ಳಿಹಾಕಿದ್ದಾರೆ. ಈ ಎರಡೂ ಕುಟುಂಬದವರ ವಿರುದ್ಧ ಅನೇಕ ದಿನಗಳಿಂದ ವಿವಾದ ನಡೆಯುತ್ತಿದೆ. ಪೊಲೀಸರ ಮೇಲೆ ಒತ್ತಡ ಹೇರುವ ಸಲುವಾಗಿ ಇಂಥದ್ದೊಂದು ಆರೋಪ ಮಾಡಿದ್ದಾಳೆ ಎಂದು ಹೇಳಿದ್ದಾರೆ.
ಈ ಬಗ್ಗೆ ಇನ್ನಷ್ಟೇ ಸತ್ಯಾಂಶ ಬೆಳಕಿಗೆ ಬರಬೇಕಿದೆ.