ನ್ಯೂಸ್

ಫೇಸ್​ಬುಕ್​ ಸ್ನೇಹಿತನ ಸಿಗಲು ಭಾರತಕ್ಕೆ ಬಂದ ನೇಪಾಳ ಬಾಲಕಿ- ಮುಂದೇನಾಯ್ತು ನೋಡಿ...

ಸೆಹೋರ್ (ಮಧ್ಯಪ್ರದೇಶ): ಫೇಸ್​ಬುಕ್​ ಸೇರಿದಂತೆ ಸಾಮಾಜಿಕ ಜಾಲತಾಣಗಳಿಂದ ಇಂದಿನ ಮಕ್ಕಳು ಹಾಳಾಗುತ್ತಿದ್ದಾರೆ, ಇಂಟರ್​ನೆಟ್​ ಗೀಳಿನಿಂದಾಗಿ ಮಕ್ಕಳ ಭವಿಷ್ಯವೇ ನಾಶವಾಗುತ್ತಿದೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿರುವ ಮಧ್ಯೆಯೇ 16 ವರ್ಷದ ಬಾಲಕಿಯೊಬ್ಬಳು ಫೇಸ್​ಬುಕ್​ ಸ್ನೇಹಿತನ ಹುಡುಕಿಕೊಂಡು ನೇಪಾಳದಿಂದ ಭಾರತಕ್ಕೆ ಒಂಟಿಯಾಗಿ ಪ್ರಯಾಣ ಬೆಳೆಸಿರುವ ಆತಂಕದ ಘಟನೆ ನಡೆದಿದೆ.

ನೇಪಾಳದ ಕಠ್ಮಂಡುವಿನ ನಿವಾಸಿಯಾಗಿರುವ ಬಾಲಕಿ ಎರಡು ವರ್ಷಗಳ ಹಿಂದೆಯೇ ಫೇಸ್​ಬುಕ್​ ಖಾತೆ ತೆರೆದಿದ್ದಾಳೆ. ಆಗಲೇ ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಅಷ್ಟಪಟ್ಟಣದ ನಿವಾಸಿ ಎಂದು ಹೇಳಿಕೊಂಡಿರುವ 20 ವರ್ಷದ ಯುವಕನ ಪರಿಚಯವಾಗಿದೆ. ಇಬ್ಬರ ನಡುವೆ ಮಾತುಕತೆ, ಸಲುಗೆ ಎಲ್ಲವೂ ಸಂದೇಶಗಳ ಮೂಲಕವೇ ರವಾನೆಯಾಗಿದೆ.

ನಂತರ ಇಬ್ಬರ ನಡುವೆ ಎರಡು ವರ್ಷಗಳಿಂದ ಫೇಸ್​ಬುಕ್​, ಚಾಟ್​, ಕರೆ ಮೂಲಕವೇ ಗಾಢವಾದ ಸ್ನೇಹವೂ ಆಗಿಬಿಟ್ಟಿದೆ.

ಇವರಿಬ್ಬರ ನಡುವೆ ಏನು ಮಾತುಕತೆಯಾಗಿದೆಯೋ ಸದ್ಯಕ್ಕೆ ಪೊಲೀಸರು ಬಹಿರಂಗಪಡಿಸಲಿಲ್ಲ. ಆದರೆ ಬಾಲಕಿ ಮಾತ್ರ ಈ ಯುವಕನನ್ನು ಭೇಟಿಯಾಗಲು ಮಧ್ಯಪ್ರದೇಶಕ್ಕೆ ಬರುವ ತೀರ್ಮಾನ ಮಾಡಿಬಿಟ್ಟಿದ್ದಾಳೆ. ಕಠ್ಮಂಡುವಿನಿಂದ ಭಾರತಕ್ಕೆ ವಿಮಾನದ ಮೂಲಕ ಬಂದ ಆಕೆ, ನಂತರ ಯಾರ್ಯಾರನ್ನೋ ಕೇಳಿ ಹಲವಾರು ಬಸ್​ಗಳನ್ನು ಬದಲಾಯಿಸಿ ಭೋಪಾಲ್​ವರೆಗೆ ಬಂದಿದ್ದಾಳೆ.

ಅಷ್ಟರಲ್ಲಿಯೇ ಈಕೆ ಬರುತ್ತಿರುವ ವಿಷಯ ತಿಳಿದ ಯುವಕ ಹೆದರಿ ಪೊಲೀಸರಿಗೆ ದೂರು ದಾಖಲು ಮಾಡಿದ್ದಾನೆ! ದೂರಿನ ಅನ್ವಯ ಬಾಲಕಿಯನ್ನು ಪತ್ತೆ ಹಚ್ಚಿದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಭೋಪಾಲ್‌ನಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರ ಮಾಡಿದ್ದಾರೆ.

ನಾನು ಯುವಕನನ್ನು ನೋಡಬೇಕು, ಅದಕ್ಕಾಗಿ ಇಷ್ಟೆಲ್ಲಾ ಕಷ್ಟಪಟ್ಟು ಬಂದಿದ್ದೇನೆ. ನನ್ನನ್ನು ಯುವಕನ ಬಳಿ ಬಿಡಿ,. ಎರಡು ವರ್ಷಗಳಿಂದ ನಾವಿಬ್ಬರೂ ಸ್ನೇಹಿತರು ಎಂದೆಲ್ಲಾ ಬಾಲಕಿ ಪೊಲೀಸರ ಮುಂದೆ ಗೋಳೋ ಎಂದಿದ್ದಾಳೆ. ಆದರೆ ಸದ್ಯ ಬಾಲಕಿಯನ್ನು ಸಮಿತಿಯ ಮುಂದೆ ಬಿಟ್ಟಿದ್ದು, ಸಮಿತಿಯವರು ಆಕೆಯನ್ನು ವಾಪಸ್​ ಕಳುಹಿಸಲು ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಒಪಿ) ಮೋಹನ್ ಸರ್ವಾನ್ ತಿಳಿಸಿದ್ದಾರೆ.

ಆಕೆಯನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ವೈದ್ಯಕೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಯುವಕನನ್ನು ನೋಡುವ ಪಟ್ಟು ಹಿಡಿದಿದ್ದಾಳೆ. ಸದ್ಯ ಆಕೆಯನ್ನು ವಿಚಾರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಆಕೆಯನ್ನು ಸುರಕ್ಷಿತವಾಗಿ ಊರಿಗೆ ವಾಪಸ್​ ಕಳುಹಿಸುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಮೋಹನ್​ ಸರ್ವಾನ್​ ಮಾಹಿತಿ ನೀಡಿದ್ದಾರೆ.