ಬೆಳಗಾವಿ: ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ಠಾಕಳೆ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಪೊಲೀಸರು ಬಿ-ರಿಪೋರ್ಟ್ ಸಲ್ಲಿಸಿದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರ್. ರಾವ್, ತಮ್ಮನ್ನು ನಿರ್ದೋಷಿ ಎಂದು ಘೋಷಿಸಿದ ತಮ್ಮ ಕಾನೂನು ಹೋರಾಟವನ್ನು ಮುಂದುವರಿಸಲಿರುವುದಾಗಿ ಹೇಳಿದ್ದಾರೆ.
ಇಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅವರು, ನವ್ಯಶ್ರೀ ನಿರ್ದೋಷಿ ಎಂದು ತಿಳಿಯಲು 11 ತಿಂಗಳುಗಳು ಬೇಕಾದವು ಎಂದಿದ್ದಾರೆ. ಅಲ್ಲದೆ ಘಟನೆ ಕುರಿತು ಹೆಚ್ಚಿನ ವಿವರ ನೀಡಿದ ಆಕೆ, 2022ರ ಜುಲೈ 18ರಂದು ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ನನ್ನ ವಿರುದ್ಧ ಹನಿಟ್ರ್ಯಾಪ್ ಕೇಸ್ ದಾಖಲಾಗಿತ್ತು ಎಂದರು.
ಇದನ್ನೂ ಓದಿ: ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!
ನನ್ನ ಆಪ್ತ ಹಾಗೂ ನನ್ನ ಮೇಲೆ ರಾತ್ರೋರಾತ್ರಿ ಎಫ್ಐಆರ್ ದಾಖಲು ಮಾಡಿದ್ದರು. ನಾನು ಕೂಡ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ, ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಅತ್ಯಾಚಾರ, ವಂಚನೆ, ಖಾಸಗಿ ವಿಡಿಯೋ ಹರಿಬಿಟ್ಟಿದ್ದು ಸೇರಿ ಗುರುತರ ಆರೋಪ ಮಾಡಿ ಕೇಸ್ ದಾಖಲಿಸಿದ್ದೆ. ಪೊಲೀಸರು ಎರಡೂ ಪ್ರಕರಣ ತನಿಖೆ ಮಾಡಿದ್ದಾರೆ. ಪೊಲೀಸರು 11 ತಿಂಗಳು ಸುದೀರ್ಘ ತನಿಖೆ ಮಾಡಿ ಕೋರ್ಟ್‌ಗೆ ಬಿ-ರಿಪೋರ್ಟ್ ಸಲ್ಲಿಸಿದ್ದಾರೆ. ಸಾಕ್ಷ್ಯಾಧಾರ ಕೊರತೆ, ತಪ್ಪು ತಿಳುವಳಿಕೆಯಿಂದ ದೂರು ಅಂತ ಪರಿಗಣಿಸಿ ಪೊಲೀಸರು ಫೈಲ್ ಕ್ಲೋಸ್ ಮಾಡಿದ್ದಾರೆ. ಕೊನೆಗೂ ನವ್ಯಶ್ರೀ ನಿರ್ದೋಷಿ ಎಂದು ಸಾಬೀತಾಗಿದೆ ಎಂದರು.
ನಾನು ದುಬೈನಲ್ಲಿ ಇದ್ದಾಗ ನನ್ನ ಖಾಸಗಿ ವಿಡಿಯೋವನ್ನು ಬೇರೆ ಬೇರೆ ವೆಬ್‌ಸೈಟ್‌ನಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಠಾಕಳೆ ಅಪ್ಲೋಡ್ ಮಾಡಿದ್ದ. ಒಂದೋ ಅವನು ವಿಡಿಯೋ ಮಾಡಬೇಕು, ಇಲ್ಲವೇ ನಾನು ಮಾಡಬೇಕು. ಆ ವಿಡಿಯೋದಲ್ಲಿ ಆತನ ಮುಖ ಎಡಿಟ್ ಮಾಡಲಾಗಿತ್ತು, ಖಾಸಗಿ ಬದುಕಿಗೂ ವೃತ್ತಿ ಬದುಕಿಗೂ ವ್ಯತ್ಯಾಸ ಇದೆ. ನನ್ನ ಮೇಲೆ ಹನಿಟ್ರ್ಯಾಪ್ ಆರೋಪ ಬಂದ ಮೇಲೆ ನಾನು ಓಡಿ ಹೋಗಲಿಲ್ಲ ಎಂದು ನವ್ಯಶ್ರೀ ಹೇಳಿದ್ದಾರೆ.
ನವ್ಯಶ್ರೀ ನಿರ್ದೋಷಿ ಅಂತ ಎಪಿಎಂಸಿ ಪೊಲೀಸರು ಹೇಳಿದ್ದಾರೆ. ನಾನು ಮಾಡಿದ ಆರೋಪಗಳು ನಿಜ ಅಂತ ಹೈಗ್ರೌಂಡ್ಸ್ ಠಾಣೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಊರು ಯಾವುದೇ ಇರಬಹುದು, ರಾಜ್ಯ ಯಾವುದೇ ಇರಬಹುದು, ಕಾನೂನು ಎಲ್ಲರಿಗೂ ಒಂದೇ.. ನಾನು ತಪ್ಪು ಮಾಡದಿದ್ದಾಗ ಹಿಂದೆ ತಿರುಗಿ ನೋಡುವ ಪ್ರಶ್ನೆಯೇ ಇಲ್ಲ. ಕಾನೂನು ಪ್ರಕಾರ ಠಾಕಳೆಗೆ ಶಿಕ್ಷೆಯಾಗಬೇಕು. ಆತ ಈಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾನೆ. ನಾನು ಸಹ ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡುವೆ. ನನ್ನ ಪರ ವಾದ ಮಂಡಿಸಲು ಹಿರಿಯ ವಕೀಲರಾದ ಕಪಿಲ್ ಸಿಬಲ್‌ಗೆ ಮನವಿ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಪ್ರಕರಣದಿಂದ ಹಿಂದೆ ಸರಿಯಲ್ಲ ಎಂದು ನವ್ಯಶ್ರೀ ತಿಳಿಸಿದರು.