ಬೆಂಗಳೂರು: ಈ ಚುನಾವಣೆಯಲ್ಲಿ ಬಹಳಷ್ಟು ಮಂದಿಯ ಬಳಿ ವೋಟರ್ ಐಡಿ ಇದ್ದರೂ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಡಿಲೀಟ್ ಆಗಿತ್ತು. ಹೀಗಾಗಿ ಎಷ್ಟೋ ಮಂದಿ ವೋಟರ್ ಐಡಿ ಇದ್ದರೂ ಮತ ಚಲಾವಣೆಯಿಂದ ವಂಚಿತರಾಗಿದ್ದರು. ಆದರೆ ಇಲ್ಲೊಬ್ಬರ ಬಳಿ ವೋಟರ್ ಐಡಿ, ವೋಟರ್ ಸ್ಲಿಪ್ ಕೈಯಲ್ಲಿದ್ದರೂ ಅದಾಗಲೇ ಅವರ ಮತ ಇನ್ಯಾರೋ ಚಲಾಯಿಸಿದ್ದರು.
ಬೆಂಗಳೂರಿನ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಸಯ್ಯದ್ ಪಹಾದ್ ಮತ ಚಲಾವಣೆಯಿಂದ ವಂಚಿತನಾದ ಮತದಾರ. ವಾರ್ಡ್ 48ರ 144ನೇ ಬೂತ್ನ ಕ್ರಮಸಂಖ್ಯೆ 885ರ ಮತದಾರ ಆಗಿರುವ ಇವರು, ತನಗೆ ಮತ ಚಲಾಯಿಸಲು ಅವಕಾಶ ಸಿಗದ್ದಕ್ಕೆ ಮತದಾನ ಕೇಂದ್ರದಲ್ಲಿ ಸಯ್ಯದ್ ಆಕ್ರೋಶ ವ್ಯಕ್ತಪಡಿಸಿದ್ದೂ ನಡೆಯಿತು.
ಸಯ್ಯದ್ ಪಹಾದ್ ತಮ್ಮ ವೋಟರ್ ಐಡಿ ಹಾಗೂ ವೋಟರ್ ಸ್ಲಿಪ್ನೊಂದಿಗೆ ಮತದಾನ ಮಾಡಲು ಬಂದಿದ್ದಾಗ, ನಿಮ್ಮ ವೋಟ್ ಈಗಾಗಲೇ ಚಲಾವಣೆ ಆಗಿದೆ ಎಂದು ಅಧಿಕಾರಿಗಳು ವಾಪಸ್ ಕಳಿಸಿದರು. ನನ್ನ ವೋಟರ್ ಐಡಿ, ವೋಟರ್ ಸ್ಲಿಪ್ ನನ್ನ ಬಳಿಯೇ ಇದ್ದರೂ ನನ್ನ ಹೆಸರಿನಲ್ಲಿ ಈಗಾಗಲೇ ಮತ ಚಲಾವಣೆ ಆಗಿದೆ, ಇವರು ಯಾವ ರೀತಿ ಪರಿಶೀಲನೆ ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ ಎಂದ ಸಯ್ಯದ್, ನನ್ನ ಓಟ್ ನನಗೆ ಬೇಕು, ಇದು ನನ್ನ ಹಕ್ಕು ಎಂದು ಆಕ್ರೋಶ ವ್ಯಕ್ತಪಡಿಸಿದರು.