ನ್ಯೂಸ್

ಪ್ರೆಸ್​ನಿಂದ ಬ್ಯಾಂಕ್​ ತಲುಪುವ ನಡುವೆ ನೋಟು ಮಿಸ್ಸಿಂಗ್? RBI ಹೇಳಿದ್ದಿಷ್ಟು!

Webdesk - Athul Damale

ನವದೆಹಲಿ: ಭಾರತೀಯ ಆರ್ಥಿಕತೆಯಲ್ಲಿ ಭಾರೀ ಪ್ರಮಾಣದ ಹಣ 'ನಾಪತ್ತೆಯಾಗಿದೆ' ಎಂದು ಆರ್‌ಟಿಐ ಮೂಲಕ ಮಾಹಿತಿ ಸಿಕ್ಕಿದ ನಂತರ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈ ವದಂತಿಗಳಿಗೆ ತೆರೆ ಎಳೆಯಲು ಮುಂದಾಗಿದೆ. "500 ರೂ. ನೋಟುಗಳ ಬೃಹತ್ ಸಂಗ್ರಹವೇ ಕಾಣೆಯಾಗಿದೆ ಎಂದು ವರದಿಗಳು ಬಂದಿದ್ದು ಇದು ಸಂಪೂರ್ಣವಾಗಿ ಸುಳ್ಳು" ಎಂದು ಆರ್​ಬಿಐ ಸ್ಪಷ್ಟನೆ ನೀಡಿದೆ.

ಈ ಹಿಂದೆ, ಭಾರತೀಯ ಆರ್ಥಿಕತೆಯಿಂದ ಸಾವಿರಾರು 500 ರೂ ನೋಟುಗಳು 'ಕಾಣೆಯಾಗಿದೆ' ಎಂದು ಕಾರ್ಯಕರ್ತರೊಬ್ಬರು ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಈ 500 ರೂ ನೋಟುಗಳು ಸುಮಾರು 88,035 ಕೋಟಿ ರೂ. ಮೌಲ್ಯದ್ದು ಎಂದು ಕಾರ್ಯಕರ್ತರೊಬ್ಬರು ಸಲ್ಲಿಸಿದ ಆರ್‌ಟಿಐ ವರದಿಯಲ್ಲಿ ತಿಳಿಸಲಾಗಿದೆ.

ಈ ವದಂತಿಗಳನ್ನು ತಳ್ಳಿಹಾಕಿರುವ ಆರ್‌ಬಿಐ ಸ್ಪಷ್ಟನೆ ನೀಡಿದ್ದು, 500 ರೂಪಾಯಿ ನೋಟುಗಳು ನಾಪತ್ತೆಯಾಗಿರುವ ವರದಿಗಳು ಸಂಪೂರ್ಣ ಸುಳ್ಳು ಎಂದು ಹೇಳಿದೆ. ಭಾರತದಲ್ಲಿ ಮುದ್ರಿಸಿದ ಎಲ್ಲಾ ನೋಟುಗಳು ಇವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಇದೆ ಎಂದು ಆರ್‌ಬಿಐ ಹೇಳಿದೆ.

ಏನು ಈ ಪ್ರಕರಣ?

ಈ ಹಿಂದೆ, ಫ್ರೀ ಪ್ರೆಸ್ ಜರ್ನಲ್ ಪ್ರಕಟಿಸಿದ ವರದಿಯಲ್ಲಿ ಮನೋರಂಜನ್ ರಾಯ್ ಎಂಬ ಕಾರ್ಯಕರ್ತರಿಗೆ ಲಭಿಸಿದ್ದ ಆರ್‌ಟಿಐ ವರದಿಯನ್ನು ಉಲ್ಲೇಖಿಸಿ, ಭಾರತೀಯ ಆರ್ಥಿಕತೆಯಿಂದ 88,000 ಕೋಟಿ ರೂಪಾಯಿ ಮೌಲ್ಯದ 500 ರೂಪಾಯಿ ನೋಟುಗಳು ನಾಪತ್ತೆಯಾಗಿವೆ ಎಂದು ತಿಳಿದುಬಂದಿತ್ತು.

RTI ವರದಿಯ ಪ್ರಕಾರ ಮೂರು ಮುದ್ರಣಾಲಯಗಳ ದತ್ತಾಂಶವು ಹೊಸದಾಗಿ ವಿನ್ಯಾಸಗೊಳಿಸಲಾದ 500ರ 8810.65 ಮಿಲಿಯನ್ ನೋಟುಗಳನ್ನು ಮುದ್ರಿಸಲಾಗಿದೆ ಎಂದು ತೋರಿಸಿದ್ದು ಆದರೆ RBI ಕೇವಲ 7260 ಮಿಲಿಯನ್ ನೋಟುಗಳನ್ನು ಮಾತ್ರ ಹೊಂದಿದೆ ಎಂದು ತಿಳಿದುಬಂದಿತ್ತು.

ಲೆಕ್ಕ ಇಡಲು ಆರ್​ಬಿಐ ಬಳಿ ಇರುವ ಸಾಧನ ಏನು?

ಆರ್​ಬಿಐ, ತನ್ನ ಸ್ಪಷ್ಟಿಕರಣದಲ್ಲಿ, “ಈ ವರದಿಗಳು ಪ್ರಿಂಟಿಂಗ್ ಪ್ರೆಸ್‌ಗಳಿಂದ ಮಾಹಿತಿ ಹಕ್ಕು ಕಾಯ್ದೆ 2005 ರ ಅಡಿಯಲ್ಲಿ ಸಂಗ್ರಹಿಸಿದ ಮಾಹಿತಿಯ ತಪ್ಪಾದ ವ್ಯಾಖ್ಯಾನವನ್ನು ಆಧರಿಸಿವೆ. ಪ್ರಿಂಟಿಂಗ್ ಪ್ರೆಸ್‌ಗಳಿಂದ ಆರ್‌ಬಿಐಗೆ ಸರಬರಾಜು ಮಾಡಲಾದ ಎಲ್ಲಾ ನೋಟುಗಳನ್ನು ಸರಿಯಾಗಿ ಲೆಕ್ಕ ಹಾಕಲಾಗಿದೆ ಎಂದು ಗಮನಿಸಬಹುದು. ಆರ್‌ಬಿಐ ತನ್ನ ನೋಟಿಸ್‌ನಲ್ಲಿ, "ಪ್ರೆಸ್‌ಗಳಲ್ಲಿ ಮುದ್ರಿಸಲಾದ ಮತ್ತು ಬ್ಯಾಂಕ್‌ನೋಟುಗಳ ಉತ್ಪಾದನೆ, ಸಂಗ್ರಹಣೆ ಮತ್ತು ವಿತರಣೆಯನ್ನು ಮೇಲ್ವಿಚಾರಣೆ ಮಾಡಲು ಪ್ರೋಟೋಕಾಲ್‌ಗಳನ್ನು ಒಳಗೊಂಡಿರುವ ದೃಢವಾದ ವ್ಯವಸ್ಥೆಗಳಿವೆ ಎಂದು ತಿಳಿಸಲಾಗಿದೆ.

ಯಾವುದೇ ಪರಿಶೀಲಿಸದ ವರದಿಗಳನ್ನು ನಂಬದಿರಿ. ಅಂತಹ ವಿಷಯಗಳ ಬಗ್ಗೆ ಕಾಲಕಾಲಕ್ಕೆ ಆರ್‌ಬಿಐ ಪ್ರಕಟಿಸುವ ಮಾಹಿತಿಯನ್ನು ಅವಲಂಬಿಸಿ" ಎಂದು ಬರೆದಿದೆ.(ಏಜೆನ್ಸೀಸ್)