ಬೆಂಗಳೂರು: ಜಿ9 ಕಮ್ಯೂನಿಕೇಷನ್ಸ್ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಹಾಗೂ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ದ ಜಡ್ಜ್ಮೆಂಟ್' ಚಿತ್ರದ ಚಿತ್ರೀಕರಣ ಇದೀಗ ಮುಕ್ತಾಯ ಹಂತ ತಲುಪಿದ್ದು, ತಂತ್ರಜ್ಞರಿಗಾಗಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿನಿಮಾ ಕುರಿತಂತೆ ತಂತ್ರಜ್ಞರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Success Story: ಕ್ರಿಕೆಟಿಗನಾಗಲು ಬಯಸಿದ್ದ ಹೃದಯ್ ಕುಮಾರ್ ದಾಶ್ ಅಪ್ಪನ ಆಸೆಯಂತೆ ಕಂದಾಯ ಇಲಾಖೆ ಅಧಿಕಾರಿಯಾದ್ರು
ಮೊದಲಿಗೆ ಮಾತನಾಡಿದ ನಿರ್ದೇಶಕ ಗುರುರಾಜ ಕುಲಕರ್ಣಿ(ನಾಡಗೌಡ), "ನಮ್ಮ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಸಂಕಲನ ಕಾರ್ಯ ನಡೆಯುತ್ತಿದೆ. ನಮ್ಮ ಚಿತ್ರದ ತಂತ್ರಜ್ಞರನ್ನು ಪರಿಚಯಿಸುವ ಸಲುವಾಗಿ ಈ ಪತ್ರಿಕಾಗೋಷ್ಠಿ ಆಯೋಜಿಸಲಾಗಿದೆ. ನಾನು ಈ ಹಿಂದೆ ನಿರ್ಮಾಪಕನಾಗಿ ಬಂದಾಗ ಯಾರು ಕೂಡ ನನ್ನನ್ನು ಪರಿಚಯಿಸಿರಲಿಲ್ಲ. ಆಗ ನನಗೆ ತುಂಬಾ ಬೇಸರವಾಗಿತ್ತು" ಎಂದರು.
"ನಿರ್ಮಾಪಕರಿಗೆ ಸಲುವ ಗೌರವ ಸಲ್ಲಲ್ಲೇ ಬೇಕು. ಹಾಗಾಗಿ ನಾನು ಮೊದಲು ನಿರ್ಮಾಪಕರನ್ನು ಪರಿಚಯಿಸುತ್ತಿದ್ದೇನೆ. ಶರದ್ ನಾಡಗೌಡ, ವಿಶ್ವನಾಥ್ ಗುಪ್ತ, ರಾಮು ರಾಯಚೂರು, ರಾಜಶೇಖರ ಪಾಟೀಲ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಿದರೆ, ಪ್ರಮೋದ್ ಮರವಂತೆ ಹಾಡನ್ನು ಬರೆದಿದ್ದಾರೆ. ವಾಸುದೇವ ಅವರ ಚಿತ್ರಕಥೆಗೆ, ಎಂ.ಎಸ್ ರಮೇಶ್ ಸಂಭಾಷಣೆ ಇದೆ. ಕೆಂಪರಾಜ್ ಸಂಕಲನ ಹಾಗೂ ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ ಈ ಚಿತ್ರಕ್ಕಿದೆ" ಎಂದರು.
"ನಾವು ಗೆಳೆಯರೆಲ್ಲಾ ಸೇರಿಕೊಂಡು ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಈಗಾಗಲೇ ಚಿತ್ರೀಕರಣ ಪೂರ್ಣವಾಗಿ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ನಮ್ಮ ಸಿನಿಮಾ ಈಗಾಗಲೇ ಮುಂಬೈವರೆಗೂ ತಲುಪಿದೆ. ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡುವ ಯೋಜನೆಯಿದೆ. ಅಲ್ಲಿನ ಪ್ರಸಿದ್ದ ನಟರೊಬ್ಬರ ಜತೆ ಸದ್ಯದಲ್ಲೇ ಈ ಕುರಿತು ಚರ್ಚಿಸಲಿದ್ದೇವೆ" ಎಂದು ಹೇಳಿದರು.
"ನನ್ನ ಮೂವತ್ತೆರಡು ವರ್ಷಗಳ ಸಿನಿ ಜರ್ನಿಯಲ್ಲಿ ತಂತ್ರಜ್ಞರಿಗಾಗಿ ಪತ್ರಿಕಾಗೋಷ್ಠಿ ಆಯೋಜಿಸಿರುವುದು ಇದೇ ಮೊದಲು. ಈ ಚಿತ್ರದ ಸಂಭಾಷಣೆ ಮಾಮೂಲಿ ತರಹ ಇಲ್ಲ. ಸ್ವಲ್ಪ ಭಿನ್ನವಾಗಿದೆ" ಎಂದು ಸಂಭಾಷಣೆ ಬರೆದಿರುವ ಎಂ. ಎಸ್ ರಮೇಶ್ ಹೇಳಿದರು.
ಚಿತ್ರದಲ್ಲಿ ಕ್ರೇಜಿಸ್ಟಾರ್ ವಿ. ರವಿಚಂದ್ರನ್, ನಾಗಾಭರಣ, ದಿಗಂತ್, ಧನ್ಯ ರಾಮಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ಪ್ರಕಾಶ್ ಬೆಳವಾಡಿ ಮುಂತಾದವರ ತಾರಾಗಣವಿದೆ.