ನ್ಯೂಸ್

ವಂದೇ ಭಾರತ್​ಗೂ ಲಗ್ಗೆ ಇಡಲು 'ನಂದಿನಿ' ಲೆಕ್ಕಾಚಾರ!

ಬೆಂಗಳೂರು: ಚುನಾವಣೆಗೂ ಮುನ್ನ ನಂದಿನಿ ವರ್ಸಸ್​ ಅಮುಲ್ ಎನ್ನುವ ವಿಚಾರ ಮುನ್ನೆಲೆಗೆ ಬಂದಿತ್ತು. ನಂದಿನಿಯ ಮಾರುಕಟ್ಟೆಯನ್ನು ತಿಂದು ಹಾಕಲು ಅಮುಲ್ ಬರುತ್ತಿದೆ ಎಂದೇ ಬಿಂಬಿಸಲಾಗುತ್ತಿತ್ತು. ಇದೀಗ ನಂದಿನಿ, ಮೋದಿ ಕನಸಿನ ವಂದೇ ಭಾರತ್​ ರೈಲಿನೊಳಕ್ಕೂ ದಾಪುಗಾಲಿಡಲು ಸಜ್ಜಾಗಿದೆ.

ವಂದೇ ಭಾರತ್ ಟ್ರೈನ್ ನಲ್ಲಿ ನಂದಿನಿ ಪ್ರಾಡಕ್ಟ್​ಗಳನ್ನು ಪೂರೈಸಲು KMF ಚಿಂತನೆ ನಡೆಸುತ್ತಿದ್ದು, ಪ್ರಯಾಣಿಕರಿಗೆ ಲಸ್ಸಿ, ಮಜ್ಜಿಗೆ, ಪೇಡಾ, ನಂದಿನಿ ಕೋಲ್ಡ್ ಹಾಲು, ಪ್ಲೇವರ್ಡ್ ಡ್ರಿಂಕ್ ಸೇರಿದಂತೆ ಇತರ ಅನೇಕ ನಂದಿನಿ ಉತ್ಪನ್ನಗಳ ರುಚಿ ತೋರಿಸಲು ಮುಂದಾಗಿದೆ.

ಹಾಲಿನ ಉತ್ಪಾದನೆ ಇಳಿಕೆ ಇದ್ದರೂ ಸಪ್ಲೈಗೆ ತಯಾರಿ!

ಹಾಲಿನ ಅಭಾವದ ನಡುವೆಯೂ ವಂದೇ ಭಾರತ್ ಟ್ರೈನ್​ಗೆ ನಂದಿನಿ ಉತ್ಪನ್ನ ಪೂರೈಕೆಗೆ ಚಿಂತನೆ ನಡೆಸಲಾಗುತ್ತಿದೆ. ಸದ್ಯ ಪ್ರತಿ ದಿನವೂ 20% ನಷ್ಟು ಹಾಲಿನ ಅಭಾವವನ್ನು ಪ್ರತಿ ದಿನವೂ KMF ಎದುರಿಸುತ್ತಿದೆ.

ಅಭಾವ ನೀಗಿಸುವ ದೃಷ್ಟಿಯಿಂದ ಸದ್ಯ ಉತ್ಪಾದನೆ ಹೆಚ್ಚಳಕ್ಕೆ ಕೆಎಂಎಫ್ ಚಿಂತನೆ ನಡೆಸಿದೆ. ಹಾಲು ಉತ್ಪಾದನೆ ಹೆಚ್ಚಳವಾದಲ್ಲಿ ವಂದೇ ಭಾರತ್​ ರೈಲಿನಲ್ಲೂ ನಂದಿನಿಪ್ರಾಡಕ್ಟ್​ಗಳ ಸಫ್ಲೈಗೆ ಕೇಂದ್ರ ರೈಲ್ವೇ ಇಲಾಖೆಗೆ ಸವಿಸ್ತಾರ ಪ್ರಸ್ತಾವನೆಯನ್ನು ಕೆಎಂಎಫ್ ಸಲ್ಲಿಸಲಿದೆ.

ಕೆಎಂಎಫ್ ಪ್ಲ್ಯಾನ್ ಏನು?

ಸದ್ಯ ರಾಜ್ಯದಲ್ಲಿ ಪ್ರತಿ ದಿನ ಸುಮಾರು 75-85ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು, ಈ ಪೈಕಿ 8ರಿಂದ 9 ಲಕ್ಷ ಲೀಟರ್ ಹಾಲಿನಿಂದ ಇತರೆ ಉತ್ಪನ್ನಗಳ ತಯಾರಿ ನಡೆಸಲಾಗುತ್ತಿದೆ. ಉತ್ಪನ್ನಗಳ ಬಳಕೆಯ ಹಾಲಿನ ಪ್ರಮಾಣ ಏರಿಸಲು ಚಿಂತಿಸಿರುವ ಕೆಎಂಎಫ್ 9 ರಿಂದ 11 ಅಥವಾ 12 ಲಕ್ಷ ಲೀಟರ್ ಹಾಲನ್ನು ಬಳಸಲು ಚಿಂತನೆ ನಡೆಸುತ್ತಿದೆ.

ಇದರಿಂದ ನಂದಿನಿ ಪ್ರಾಡಕ್ಟ್​ಗಳ ಮಾರುಕಟ್ಟೆ ಮತ್ತಷ್ಟು ವಿಸ್ತಾರವಾಗಲಿದೆ. ಈಗಾಗಲೇ ದೇಶದ ಮಾರುಕಟ್ಟೆಯಲ್ಲಿ ನಂದಿನಿ ಬ್ರ್ಯಾಂಡ್​ ಅಜಾನುಬಾಹು ಆಗಿದ್ದು, ವಂದೇ ಭಾರತ್ ರೈಲಿಗೂ ಸಪ್ಲೈ ಮಾಡಿ ಅಧಿಪತ್ಯ ಸ್ಥಾಪಿಸಲು ಕೆಎಂಎಫ್ ಸಿದ್ಧತೆ ನಡೆಸುತ್ತಿದೆ.