ನ್ಯೂಸ್

ಲಂಡನ್‌ನಲ್ಲಿ ಆ. 6ರಂದು ನಡೆಯಲಿದೆ ಭಾರತೀಯ ನಾರಿಯರ ಸಾರೀ ವಾಕಥಾನ್

ಲಂಡನ್: ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ಆ. 6ರಂದು ಲಂಡನ್‌ನಲ್ಲಿ ನೆಲೆಸಿರುವ ಭಾರತೀಯ ಮಹಿಳೆಯರು ಸಾರೀ ವಾಕಥಾನ್ (ಸೀರೆ ನಡಿಗೆ) ಆಯೋಜಿಸಿದ್ದಾರೆ. ಕೇಂದ್ರ ಲಂಡನ್‌ನ ಟ್ರಫಲ್ಗಾರ್ ಸ್ಕ್ವೇರ್‌ನಿಂದ ಪಾರ್ಲಿಮೆಂಟ್ ಸ್ಕ್ವೇರ್‌ವರೆಗೆ ನಡೆಯಲಿರುವ ಈ ವಾಕಥಾನ್‌ನಲ್ಲಿ ಭಾರತದ ವಿವಿಧ ರಾಜ್ಯಗಳ ಸುಮಾರು 600 ನಾರಿಯರು ಪಾಲ್ಗೊಳ್ಳಲಿದ್ದಾರೆ.

ಭಾರತದ ಸಂಸ್ಕೃತಿ, ಕಲೆ, ಪರಂಪರೆಯನ್ನು ಬಿಂಬಿಸುವ ಸೀರೆಯ ಮಹತ್ವವನ್ನು ವಿದೇಶದಲ್ಲಿ ಹರಡುವುದು, ಭಾರತೀಯ ಕೈಮಗ್ಗಕ್ಕೆ ಪ್ರೋತ್ಸಾಹ ನೀಡುವುದು ಈ ವಾಕಥಾನ್‌ನ ಮೂಲ ಉದ್ದೇಶ. ಇದರಲ್ಲಿ ಮಹಾರಾಷ್ಟ್ರ, ಗುಜರಾತ್, ಕೇರಳ, ಜಮ್ಮುಕಾಶ್ಮೀರ ಸೇರಿದಂತೆ ಭಾರತದ ಸುಮಾರು 19 ರಾಜ್ಯಗಳ ಮಹಿಳೆಯರು ಭಾಗವಹಿಸಲಿದ್ದಾರೆ. ಕರ್ನಾಟಕ ಮೂಲದ ಶಾರದಾ ಮತ್ತು ಅವರ ತಂಡದವರು ಅಂದು ಉತ್ತರ ಕರ್ನಾಟಕದ ಇಳಕಲ್ ಸೀರೆ ಧರಿಸಿ ಭಾಗವಹಿಸಲಿದ್ದಾರೆ. ದಾರಿಯುದ್ದಕ್ಕೂ ಕನ್ನಡ ಹಾಡು-ನೃತ್ಯವನ್ನೂ ಪ್ರಸ್ತುತಪಡಿಸಲಿದ್ದಾರೆ.

ದೀಪಾ ಹೆಗ್ಡೆ, ಹೇಮಾ ಸಂತೋಷ್ ನೇತೃತ್ವದ ಕೇರಳ ಮಹಿಳೆಯರ ತಂಡ ಅಲ್ಲಿನ ಸಾಂಪ್ರದಾಯಿಕ ಸೆಟ್ಟುಮುಂಡು ಧರಿಸಿ ಪಾಲ್ಗೊಳ್ಳಲಿದ್ದು, ವಾಕಥಾನ್‌ನ ಕೊನೆಯಲ್ಲಿ ಆ ರಾಜ್ಯದ ಪ್ರಾಚೀನ ನೃತ್ಯಕಲೆಯನ್ನು ಪ್ರದರ್ಶಿಸಲಿದೆ.

ಇನ್‌ಸ್ಪೈರಿಂಗ್ ಇಂಡಿಯನ್ ವುಮನ್ (ಐಐಡಬ್ಲ್ಯು) ಹೆಸರಿನಲ್ಲಿ ಈ ವಾಕಥಾನ್ ಅನ್ನು ಬ್ರಿಟಿಷ್ ವಿಮೆನ್ ಇನ್ ಸಾರೀಸ್ ಎಂಬ ಸಂಘಟನೆ ಆಯೋಜಿಸಿದೆ. ಕಳೆದ ವರ್ಷದ ಜೂನ್‌ನಲ್ಲಿ ಇದೇ ಸಂಘಟನೆ ಇಂಗ್ಲೆಂಡ್‌ನ ಬರ್ಕ್‌ಶೈರ್‌ನಲ್ಲಿರುವ ರಾಯಲ್ ಅಸ್ಕಾಟ್ ಹಾರ್ಸ್‌ರೇಸಸ್‌ನಲ್ಲಿ ಲೇಡೀಸ್ ಡೇ ಎಂಬ ಕಲರ್‌ಫುಲ್ ಸಾರೀ ಇವೆಂಟ್ ಸಂಘಟಿಸಿತ್ತು. ಈ ವರ್ಷ ಆ. 7ರಂದು ಕೈಮಗ್ಗ ದಿನವಿದ್ದು, ಅದರ ಮುನ್ನಾದಿನ ಭಾನುವಾರವಾದ್ದರಿಂದ ಆ. 6ರಂದು ಸಾರೀ ವಾಕಥಾನ್ ಆಯೋಜಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷೆ ದೀಪ್ತಿ ಜೈನ್ ತಿಳಿಸಿದ್ದಾರೆ.