ಭಾರತದಿಂದ ರಫ್ತಾಗುವ ಸ್ಮಾರ್ಟ್ಫೋನ್ ಪ್ರಮಾಣ ಒಂದೇ ವರ್ಷದಲ್ಲಿ ದ್ವಿಗುಣಗೊಂಡಿದೆ. ಇದೇ ಮಾರ್ಚ್ನಲ್ಲಿ ಕೊನೆಗೊಂಡ ಹಣಕಾಸು (2022-23) ವರ್ಷದಲ್ಲಿ ಭಾರತದಿಂದ ರಫ್ತು ಮಾಡಲಾದ ಸ್ಮಾರ್ಟ್ಫೋನ್ಗಳ ಒಟ್ಟು ಮೊತ್ತವು 11.2 ಶತಕೋಟಿ ಡಾಲರ್ (91,883 ಕೋಟಿ ರೂಪಾಯಿ) ತಲುಪಿದೆ. ಸ್ಮಾರ್ಟ್ಫೋನ್ ಸೇರಿದಂತೆ ಒಟ್ಟಾರೆ ಎಲೆಕ್ಟ್ರಾನಿಕ್ಸ್ ಸರಕುಗಳ ರಫ್ತು ಕೂಡ ಶೇಕಡಾ 58ರಷ್ಟು ವೃದ್ಧಿಯಾಗಿ 1,85,000 ಕೋಟಿ ರೂಪಾಯಿಗಳಿಗೆ ತಲುಪಿದೆ. 2021-22ನೇ ಹಣಕಾಸು ವರ್ಷದಲ್ಲಿ 45 ಸಾವಿರ ಕೋಟಿ ರೂಪಾಯಿ ಮೊತ್ತದ ಸ್ಮಾರ್ಟ್ಫೋನ್ಗಳನ್ನು ರಫ್ತು ಮಾಡಲಾಗಿತ್ತು.
ಕೇವಲ ಎರಡು ವರ್ಷಗಳ ಹಿಂದೆ ಭಾರತದ ಮೊಬೈಲ್ಫೋನ್ ಮಾರುಕಟ್ಟೆಯ ಮೂರನೇ ಎರಡರಷ್ಟು ಭಾಗದಷ್ಟು ಪಾಲನ್ನು ಹೊಂದಿದ್ದ ಚೀನಾದ ಸ್ಮಾರ್ಟ್ಫೋನ್ ತಯಾರಕ ಕಂಪನಿಗಳು ರಫ್ತಿಗೆ ಮಾತ್ರ ಕೊಡುಗೆ ನೀಡಿದ್ದು ನಗಣ್ಯವೇ ಆಗಿತ್ತು. ಆದರೆ, 2022-23ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿದ್ದ 9-10 ಶತಕೋಟಿ ಡಾಲರ್ನಷ್ಟು ರಫ್ತು ಗುರಿಯನ್ನು ಮೀರಿ ಸಾಧನೆ ಮಾಡಲಾಗಿದೆ. ಈ ರಫ್ತು ಸಾಧನೆಯಲ್ಲಿ ಬಹುದೊಡ್ಡ ಕೊಡುಗೆ ನೀಡಿರುವುದು ಆಪಲ್ ಕಂಪನಿ. ಒಟ್ಟು ರಫ್ತಿನ ಅರ್ಧದಷ್ಟು ಭಾಗವು ಈ ಸಂಸ್ಥೆಯೊಂದರಿಂದಲೇ ಬಂದಿದ್ದು, 5.5 ಶತಕೋಟಿ ಡಾಲರ್ (ಅಂದಾಜು 45 ಸಾವಿರ ಕೋಟಿ ರೂಪಾಯಿ) ಮೊತ್ತದ ಐಫೋನ್ಗಳನ್ನು ಭಾರತದಿಂದ ರಫ್ತು ಮಾಡಿದೆ. ಭಾರತದಲ್ಲಿ ಆಪಲ್ನ ಐಫೋನ್ಗಳನ್ನು ಫಾಕ್ಸ್ಕಾನ್ ಟೆಕ್ನಾಲಜಿ ಗ್ರೂಪ್, ವಿಸ್ಟ್ರಾನ್ ಗ್ರೂಪ್ ಮತ್ತು ಪೆಗಟ್ರಾನ್ ಕಾರ್ಪ್ ಸಂಸ್ಥೆಗಳು ತಯಾರಿಸುತ್ತವೆ. ಇದರ ನಂತರದ ಸ್ಥಾನ ದಕ್ಷಿಣ ಕೊರಿಯಾದ ಸ್ಯಾಮ್ಂಗ್ ಎಲೆಕ್ಟ್ರಾನಿಕ್ಸ್ನದ್ದಾಗಿದೆ. ಈ ಸಂಸ್ಥೆ 4 ಶತಕೋಟಿ ಡಾಲರ್ (ಅಂದಾಜು 33 ಸಾವಿರ ಕೋಟಿ ರೂಪಾಯಿ) ಮೊತ್ತದ ಫೋನ್ಗಳನ್ನು ರಫ್ತು ಮಾಡಿ ರಫ್ತಿನಲ್ಲಿ ಶೇ. 40 ಪಾಲು ಪಡೆದಿದೆ.
ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್ಫೋನ್ ಮಾರುಕಟ್ಟೆಯಾದ ಭಾರತ ಈಗ ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ಫೋನ್ ಉತ್ಪಾದಕ ರಾಷ್ಟ್ರವೂ ಆಗಿದೆ. ಜಗತ್ತಿನಲ್ಲಿ ಎಲೆಕ್ಟ್ರಾನಿಕ್ಸ್ ಸರಕುಗಳ ಪ್ರಮುಖ ಉತ್ಪಾದಕ ದೇಶವಾಗಲು ಮತ್ತು ಚೀನಾಕ್ಕೆ ಸಮರ್ಥ ಪರ್ಯಾಯವಾಗಲು ಭಾರತ ರೂಪಿಸಿರುವ ಕಾರ್ಯಯೋಜನೆ ಯಶಸ್ಸು ಗಳಿಸುವ ನಿಟ್ಟಿನಲ್ಲಿ ಈ ರಫ್ತು ಸಾಧನೆ ಮಹತ್ವದ ಹೆಜ್ಜೆಯಾಗಿದೆ.
2025-26ರ ವೇಳೆಗೆ 300 ಶತಕೋಟಿ ಡಾಲರ್ (24,61,139 ಕೋಟಿ ರೂಪಾಯಿ) ಮೌಲ್ಯದ ಎಲೆಕ್ಟ್ರಾನಿಕ್ಸ್ ಸಾಮಗ್ರಿ ಉತ್ಪಾದನೆ ಗುರಿಯನ್ನು ಸರ್ಕಾರ ಹೊಂದಿದೆ. ಅಲ್ಲದೆ, 120 ಶತಕೋಟಿ ಡಾಲರ್ (9,84,455 ಕೋಟಿ ರೂಪಾಯಿ) ಮೊತ್ತದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ರಫ್ತು ಮಾಡುವ ಉದ್ದೇಶ ಹೊಂದಲಾಗಿದೆ. ಈ ಪೈಕಿ ಮೊಬೈಲ್ಫೋನ್ ರಫ್ತಿನಿಂದಲೇ 4,10,190 ಕೋಟಿ ರೂಪಾಯಿ ಗಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಅಂದರೆ, ಈಗಿನ ನಾಲ್ಕು ಪಟ್ಟು ಹೆಚ್ಚು ರಫ್ತು ಗುರಿ ಸಾಧಿಸಲು ಉದ್ದೇಶಿಸಲಾಗಿದೆ.
ವಿಶ್ವದಲ್ಲಿ ಅತಿಹೆಚ್ಚು ಐಫೋನ್ಗಳನ್ನು ತಯಾರಿಸುವ ಸಂಸ್ಥೆ ಫಾಕ್ಸ್ಕಾನ್ ಕಳೆದ ವರ್ಷ ಭಾರತದಲ್ಲಿ ಐಫೋನ್ 14 ಉತ್ಪಾದನೆ ಪ್ರಾರಂಭಿಸುವ ಮೂಲಕ ಆಪಲ್ ಫೋನ್ನ ಉನ್ನತ ಮಾದರಿಯ ಜೋಡಣೆ ಕಾರ್ಯ ಭಾರತದಲ್ಲಿ ಶುರುವಾಯಿತು. ಚೀನಾದ ಆಚೆಗೆ ತನ್ನ ಪೂರೈಕೆ ಸರಪಳಿ ಜಾಲ ವಿಸ್ತರಿಸುವ ಆಪಲ್ನ ಆಕ್ರಮಣಕಾರಿ ಕಾರ್ಯತಂತ್ರದ ಭಾಗವಾಗಿ ಭಾರತದಲ್ಲಿ ಉತ್ಪಾದನೆಗೆ ಒತ್ತು ನೀಡಲಾಗಿದೆ. ಚೀನಾದಲ್ಲಿ ಕೋವಿಡ್ ನಿರ್ಬಂಧಗಳು ಮತ್ತು ಇತರ ಕಾರಣಗಳಿಂದಾಗಿ ಉತ್ಪಾದನೆ ಹಾಗೂ ಪೂರೈಕೆಗೆ ತೊಂದರೆಯಾಗುವ ಆತಂಕ ಸೃಷ್ಟಿಯಾಯಿತು. ಕಳೆದ ವರ್ಷ ಚೀನಾದ ಝೆಂಗ್ರkೌನಲ್ಲಿರುವ ಫಾಕ್ಸ್ಕಾನ್ ಮುಖ್ಯ ‘ಐಫೋನ್ ಸಿಟಿ’ ಸಂಕಿರಣದಲ್ಲಿ ತಲೆದೋರಿದ ಗೊಂದಲ ಆಪಲ್ನ ಪೂರೈಕೆ ಸರಪಳಿಯಲ್ಲಿ ಭಾರಿ ಸಮಸ್ಯೆಗಳಿಗೆ ಕಾರಣವಾಯಿತು. ಇದರಿಂದ ಉತ್ಪಾದನೆ ಕೂಡ ಕಡಿತವಾಯಿತು. ಇದೇ ಸಮಯದಲ್ಲಿ, ಸ್ಥಳೀಯವಾಗಿ ಮೊಬೈಲ್ಫೋನ್ಗಳ ಉತ್ಪಾದನೆ ಹೆಚ್ಚಿಸಲು ಭಾರತವು ಹಲವಾರು ಪೋ›ತ್ಸಾಹಗಳನ್ನು ಘೋಷಿತು. ಇದು ಆಪಲ್ ಮತ್ತು ಅದರ ಗುತ್ತಿಗೆ ತಯಾರಕರನ್ನು ಸೆಳೆಯಿತು. ಒಂದೇ ರಾಷ್ಟ್ರದ ಮೇಲೆ ಹೆಚ್ಚು ಅವಲಂಬಿಸುವ ಅಪಾಯ ನಿವಾರಿಸುವ ನಿಟ್ಟಿನಲ್ಲಿ ಭಾರತದಲ್ಲಿ ಉತ್ಪಾದನೆ ವಿಸ್ತರಿಸಲು ಆಪಲ್ ಕ್ರಮ ಕೈಗೊಂಡಿತು. ಜೆಪಿ ಮೋರ್ಗಾನ್ನ ವಿಶ್ಲೇಷಕರ ಪ್ರಕಾರ, 2025ರ ವೇಳೆಗೆ ಎಲ್ಲಾ ಮಾದರಿಯ ಐಫೋನ್ಗಳ ಪೈಕಿ ಶೇ. 25ರಷ್ಟನ್ನು ಭಾರತದಲ್ಲಿ ಉತ್ಪಾದಿಸಲು ಯೋಜಿಸಲಾಗಿದೆ.
ಭಾರತದ ದೇಶೀಯ ಮಾರುಕಟ್ಟೆಯಲ್ಲಿ ಹಿಂದೆ ಚೀನೀ ಕಂಪನಿಗಳ ಫೋನ್ ಹೆಚ್ಚು ಮಾರಾಟವಾಗುತ್ತಿದ್ದವು. ಈಗ ಸ್ಯಾಮ್ಂಗ್ ಕಂಪನಿ ಅಗ್ರಸ್ಥಾನಕ್ಕೇರಿದೆ. 2022-23ನೇ ಹಣಕಾಸು ವರ್ಷದ ಮೂರನೇ ತ್ರೖೆಮಾಸಿಕದಲ್ಲಿ (2022ರ ಅಕ್ಟೋಬರ್ನಿಂದ 2022ರ ಡಿಸೆಂಬರ್ ಅವಧಿಯಲ್ಲಿ) ಸ್ಯಾಮ್ಂಗ್ ಈ ಸಾಧನೆ ಮಾಡಿದೆ. ಕಂಪನಿಯು 2022ರ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ 67 ಲಕ್ಷ ಮೊಬೈಲ್ಫೋನ್ ಮಾರಾಟ ಮಾಡಿ ಶೇ. 21 ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಚೀನಾದ ವಿವೋ 64 ಲಕ್ಷ ಫೋನ್ಗಳನ್ನು ಮಾರಾಟ ಮಾಡಿ ಎರಡನೇ ಸ್ಥಾನದಲ್ಲಿದೆ. ಈ ಹಿಂದಿನ 20 ತ್ರೖೆಮಾಸಿಕಗಳಲ್ಲಿ ಮುಂಚೂಣಿ ಸ್ಥಾನದಲ್ಲಿದ್ದ ಕ್ಸಿಯೊಮಿ, 55 ಲಕ್ಷ ಫೋನ್ಗಳನ್ನು ಮಾರಾಟ ಮಾಡಿ ಕುಸಿತ ಕಂಡಿದೆ. ಒಪ್ಪೊ 57 ಲಕ್ಷ ಹಾಗೂ ರಿಯಲ್ವಿುೕ 27 ಲಕ್ಷ ಫೋನ್ ಮಾರಾಟ ಮಾಡಿವೆ.
ಭಾರತವು ಪ್ರಸ್ತುತ ಮೊಬೈಲ್ಫೋನ್ಗಳನ್ನು ರಫ್ತು ಮಾಡುವ ಪ್ರಮುಖ ಐದು ದೇಶಗಳೆಂದರೆ- ಯುಎಇ, ಅಮೆರಿಕ, ನೆದರ್ಲೆಂಡ್, ಬ್ರಿಟನ್ ಮತ್ತು ಇಟಲಿ. ಚೀನಾದಿಂದ ಸ್ಮಾರ್ಟ್ಫೋನ್ ಉತ್ಪಾದನೆ ಹಾಗೂ ಪೂರೈಕೆ ಸರಪಳಿಯ ವಲಸೆಯ ದೊಡ್ಡ ಫಲಾನುಭವಿಗಳು ಭಾರತ ಮತ್ತು ವಿಯೆಟ್ನಾಂ ಆಗಿವೆ.
2022-23 ಹಣಕಾಸು ವರ್ಷದ ನಾಲ್ಕನೇ ತ್ರೖೆಮಾಸಿಕದಲ್ಲಿ (ಜನವರಿಯಿಂದ ಮಾರ್ಚ್ವರೆಗೆ) ಭಾರತದಿಂದ ರಫ್ತಾದ ಮೊಬೈಲ್ಫೋನ್ಗಳ ಸಂಖ್ಯೆ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 3.1 ಕೋಟಿಯಷ್ಟು ಕಡಿಮೆ (ಶೇ. 19ರಷ್ಟು ಕುಸಿತ) ಇದೆ. 30 ಸಾವಿರ ರೂಪಾಯಿಗಿಂತ ಕಡಿಮೆ ಇರುವ ಫೋನ್ಗಳ ರಫ್ತು ಸಂಖ್ಯೆ ಕಡಿಮೆಯಾಗಿದೆ. ಆದರೆ, ಹೆಚ್ಚು ಬೆಲೆ ಇರುವ ಸ್ಮಾರ್ಟ್ ಫೋನ್ಗಳ ರಫ್ತು ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 45 ಸಾವಿರ ರೂಪಾಯಿಗಿಂತ ಹೆಚ್ಚು ಬೆಲೆಬಾಳುವ ಸ್ಯಾಮ್ಂಗ್ ಫೋನ್ಗಳ ರಫ್ತು ಶೇ. 247ರಷ್ಟು ಹಾಗೂ ಆಪಲ್ ಫೋನ್ಗಳ ರಫ್ತು ಶೇ. 50ರಷ್ಟು ಅಧಿಕವಾಗಿದೆ. 2021-22ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ರಫ್ತು ಮಾಡಲಾದ ಒಟ್ಟು ಫೋನ್ಗಳ ಸಂಖ್ಯೆ 2022-23ರಲ್ಲಿ ಕಡಿಮೆ ಇದ್ದರೂ ಹೆಚ್ಚು ಬೆಲೆ ಇರುವ ಫೋನ್ಗಳು ಅಧಿಕ ಸಂಖ್ಯೆಯಲ್ಲಿ ರಫ್ತಾಗಿವೆ. ಹೀಗಾಗಿ, ಒಟ್ಟಾರೆ ರಫ್ತು ಮೊತ್ತದಲ್ಲಿ ಹೆಚ್ಚಳವಾಗಿದೆ.
* ಭಾರತ ಈಗ ವಿಶ್ವದ ಎರಡನೇ ಅತಿ ದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರವಾಗಿದೆ.
* ಮೊಬೈಲ್ಫೋನ್ ರಫ್ತು ಈಗ ಒಟ್ಟಾರೆ ಎಲೆಕ್ಟ್ರಾನಿಕ್ಸ್ ಸರಕುಗಳ ರಫ್ತಿನ ಶೇಕಡಾ 46ರಷ್ಟಿದೆ.
* ಭಾರತದಲ್ಲಿ ಮಾರಾಟವಾಗುವ ಶೇಕಡಾ 97ಕ್ಕಿಂತ ಹೆಚ್ಚು ಸ್ಮಾರ್ಟ್ಫೋನ್ಗಳನ್ನು ಈಗ ಸ್ಥಳೀಯವಾಗಿ ಉತ್ಪಾದಿಸಲಾಗುತ್ತಿದೆ.
* ಭಾರತದಲ್ಲಿ ಪ್ರಸ್ತುತ ಐಫೋನ್ 12, 13, 14 ಮತ್ತು 14 ಪ್ಲಸ್ ತಯಾರಾಗುತ್ತವೆ.
* ಜಾಗತಿಕವಾಗಿ ಒಟ್ಟಾರೆ ಐಫೋನ್ ಉತ್ಪಾದನೆಗಳ ಪೈಕಿ ಭಾರತದಲ್ಲಿ ಸದ್ಯ ಶೇ. 10-15ರಷ್ಟು ಉತ್ಪಾದನೆ.
* 2027ರ ವೇಳೆಗೆ ಆಪಲ್ ಸ್ಮಾರ್ಟ್ಫೋನ್ಗಳ ಪೈಕಿ ಶೇ.45-50ರಷ್ಟು ಭಾರತದಲ್ಲಿಯೇ ತಯಾರಾಗುವ ಸಾಧ್ಯತೆ.