ಮಾಜಿ ಸಿಎಂ ಸಿದ್ದು ತವರಲ್ಲಿ ಬಿಜೆಪಿ ಪ್ರಚಾರ ರಥದ ಮೇಲೆ ಕಲ್ಲು ತೂರಾಟ: ಕಾರ್ಯಕರ್ತನ ಮೇಲೆ ಹಲ್ಲೆ

BJP Activist
Published on

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ಬಿಜೆಪಿ ಪ್ರಚಾರ ರಥದ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಕಲ್ಲು ತೂರಾಟ ನಡೆದಿದೆ.

ಕಲ್ಲು ತೂರಾಟ ಮಾತ್ರವಲ್ಲದೆ, ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆಯಾಗಿದೆ. ಕಾರ್ಯಕರ್ತ ನಾಗೇಶ್ ಎಂಬುವರ ಕಾಲಿಗೆ ಪೆಟ್ಟಾಗಿದ್ದು, ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ವಲ್ಪದರಲ್ಲೇ ಇಬ್ಬರು ಪಾರು

ಸಿದ್ದರಾಮಯ್ಯ ಅವರ ಅಣ್ಣನ ಮನೆ ಮುಂದೆ ಪ್ರಚಾರ ಮಾಡುವಾಗ ಕಲ್ಲು ತೂರಾಟ ನಡೆದಿದೆ. ಪ್ರಚಾರ ರಥದಲ್ಲಿ ಅಭ್ಯರ್ಥಿ ವಿ. ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಇದ್ದರು. ಸ್ವಲ್ಪದರಲ್ಲೇ ಇಬ್ಬರು ಪಾರಾಗಿದ್ದಾರೆ.

ದೊಣ್ಣೆಯಿಂದ ಹಲ್ಲೆ ಮಾಡಿದರು

ದಿಗ್ವಿಜಯ ನ್ಯೂಸ್ ಜತೆ ಬಿಜೆಪಿ ಕಾರ್ಯಕರ್ತ ಹಾಗೂ ಘಟನೆ ಸ್ಥಳದಲ್ಲಿದ್ದ ರವಿಶಂಕರ್ ಮಾತನಾಡಿದ್ದು, ಸಿದ್ದು ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇಂದು ಸಂಜೆ ಸಿದ್ದರಾಮನಹುಂಡಿಯಲ್ಲಿ ಸೋಮಣ್ಣ ಪ್ರಚಾರ ನಡೆಸುತ್ತಿದ್ದರು. ಏಕಾಏಕಿ ಸಿದ್ದರಾಮಯ್ಯಗೆ ಜೈ, ಸೋಮಣ್ಣಗೆ ಧಿಕ್ಕಾರ ಎಂದು ಕೂಗಿದರು. ಕಲ್ಲು ತೂರಾಟ ನಡೆಸಿ ಕಾರುಗಳನ್ನು ಜಖಂಗೊಳಿಸಿದರು. ದೊಣ್ಣೆಯಿಂದ ಹಲ್ಲೆ ಮಾಡಿದರು. ಈ ವೇಳೆ ಬಿಜೆಪಿ ಕಾರ್ಯಕರ್ತ ನಾಗೇಶ್​ಗೆ ಕಾಲು ಮತ್ತು ಕೈಗೆ ಪೆಟ್ಟಾಗಿದೆ. ಈ ಘಟನೆ ಸಂಬಂಧ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ಆಪ್ತ ಕುಮಾರ್ ಪೊಲೀಸರಿಗೆ ಕರೆ ಮಾಡಿ ಪ್ರಭಾವ ಬೆಳೆಸಿ ಮೂವರನ್ನು ಬಿಡುಗಡೆಗೊಳಿಸಿದ್ದಾರೆ. ಘಟನೆ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುತ್ತೇವೆ ಎಂದಿದ್ದಾರೆ.

ಸದ್ಯ ಘಟನೆ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net