ಜೆ.ಸಿ. ರಸ್ತೆಯ ವಾಣಿಜ್ಯ ಕಟ್ಟಡದ ಲಿಫ್ಟ್‌ನಲ್ಲಿ ಸಿಲುಕಿ ಉತ್ತರ ಪ್ರದೇಶದ ಯುವಕ ಸಾವು

Lift
Published on

ಬೆಂಗಳೂರು: ಜೆ.ಸಿ. ರಸ್ತೆಯ ವಾಣಿಜ್ಯ ಕಟ್ಟಡದ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಉತ್ತರ ಪ್ರದೇಶ ಮೂಲದ ಯುವಕ ಮೃತಪಟ್ಟಿದ್ದಾನೆ.

ಉತ್ತರ ಪ್ರದೇಶ ಮೂಲದ ವಿಕಾಸ್ ಕುಮಾರ್ ಗೌರ್ (25) ಮೃತ ಯುವಕ. 6 ತಿಂಗಳ ಹಿಂದೆ ನೌಕರಿ ಅರಸಿ ಬೆಂಗಳೂರಿಗೆ ಬಂದಿದ್ದ ವಿಕಾಸ್, ಜೆ.ಸಿ.ರಸ್ತೆ ಭರತ್ ಸರ್ಕಲ್ ಸಂಜಯ್ ಆಟೋ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ.

4 ಮಹಡಿಯ ಮೊದಲ ಮಹಡಿಯಲ್ಲಿ ಅಂಗಡಿ ಇದ್ದರೇ ಉಳಿದ ಮಹಡಿಗಳಲ್ಲಿ ಗೋದಾಮು ಮಾಡಲಾಗಿತ್ತು. ಮೇಲಿಂದ ಸರಕು ತರಲು ಲಿಫ್ಟ್​ ಅಳವಡಿಸಲಾಗಿದೆ. ಎಂದಿನಂತೆ ಬುಧವಾರ ಸಂಜೆ 6.30ರಲ್ಲಿ ವಿಕಾಸ್, ಲಿಫ್ಟ್​ನಲ್ಲಿ ಸರಕು ತೆಗೆದುಕೊಂಡು ಕೆಳಗೆ ಇಳಿಯಬೇಕಾದರೆ ಲಿಫ್ಟ್​ ಮತ್ತು ಗೋಡೆ ನಡುವೆ ಸಿಲುಕಿಕೊಂಡಿದ್ದಾನೆ. ಎಚ್ಚೆತ್ತ ಅಂಗಡಿ ಮಾಲೀಕ ಸಂಜಯ್ ಮತ್ತು ಮೇಲ್ವಿಚಾರಕ ಬಿನಯ್ ಹರಸಾಹಸ ಪಟ್ಟು ವಿಕಾಸ್‌ನನ್ನು ಹೊರಗೆ ತೆಗೆಯುವ ವೇಳೆಗೆ ಆತ ಮೃತಪಟ್ಟಿದ್ದ.

ವಿಷಯ ತಿಳಿದ ಪೊಲೀಸರು, ಸ್ಥಳಕ್ಕೆ ದೌಡಾಯಿಸಿ ಶವವನ್ನು ವಿಕ್ಟೋರಿಯಾ ಆಸ್ಪತ್ರಗೆ ಸ್ಥಳಾಂತರ ಮಾಡಿದ್ದರು. ಯುವಕನ ತಂದೆ ಲಲ್ಲು ಕುಮಾರ್ ಗೌರ್ ಕೊಟ್ಟ ದೂರಿನ ಮೇರೆಗೆ ಅಂಗಡಿ ಮಾಲೀಕ ಸಂಜಯ್ ಮತ್ತು ಮೇಲ್ವಿಚಾರಕ ಬಿನಾಯ್ ವಿರುದ್ಧ ಕಲಾಸಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net