ನ್ಯೂಸ್

ಪತ್ನಿ ಜತೆ ಮಲಗುವಾಗಲೆಲ್ಲ ಜತೆಯಲ್ಲಿ ಮಚ್ಚು ಇಟ್ಟುಕೊಳ್ತಿದ್ದ ಗಂಡನಿಂದ ನಡದೇ ಹೋಯಿತು ಘೋರ ಕೃತ್ಯ!

ಮೈಸೂರು: ಗಂಡನ ಜತೆ ಮನಸ್ತಾಪ ಹಿನ್ನೆಲೆಯಲ್ಲಿ ಮುನಿಸಿಕೊಂಡು ತವರು ಮನೆ ಸೇರಿದ್ದ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಪತಿರಾಯ, ಅಡ್ಡ ಬಂದ ಅತ್ತೆಯ ಕೊಲೆಗೆ ಯತ್ನಿಸಿರುವ ಅಮಾನುಷ ಘಟನೆ ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ನಡೆದಿದೆ.

ವರ್ಷದ ಹಿಂದಷ್ಟೇ ಮದುವೆ

ಹರ್ಷಿತಾ (21) ಮೃತ ದುರ್ದೈವಿ. ಮಾದೇಶ್ (30) ಕೊಲೆ ಆರೋಪಿ. ಈತ ಗುಂಡ್ಲುಪೇಟೆ ತಾಲ್ಲೂಕಿನ ಬೇರಂಬಳ್ಳಿ ಗ್ರಾಮದ ನಿವಾಸಿ. ಒಂದು ವರ್ಷದ ಹಿಂದಷ್ಟೇ ಇಬ್ಬರು ಮದುವೆಯಾಗಿದ್ದರು. ಪ್ರಾರಂಭದ ದಿನಗಳಲ್ಲಿ ಈ ಜೋಡಿ ಅನ್ಯೋನ್ಯತೆಯಿಂದ ಇದ್ದರು. ಆದರೆ, ದಿನಗಳು ಕಳೆದಂತೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ವಿರಸ ಉಂಟಾಗಿತ್ತು.

ಮಲಗುವಾಗಲೆಲ್ಲ ಜತೆಯಲ್ಲಿ ಮಚ್ಚು

ಆಗಾಗ ಕಿರಿಕ್ ಮಾಡುತ್ತಿದ್ದ ಮಾದೇಶ್, ಕೊಲೆ ಮಾಡುವುದಾಗಿ ಹರ್ಷಿತಾಳನ್ನು ಬೆದರಿಸುತ್ತಿದ್ದ. ಪತ್ನಿಯ ಜೊತೆ ಮಲಗುವಾಗಲೆಲ್ಲ ಮಚ್ಚು ಇಟ್ಟುಕೊಂಡು ಮಲಗುತ್ತಿದ್ದ. ಇದಕ್ಕೆ ಹೆದರಿದ್ದ ಹರ್ಷಿತಾ ತವರು ಮನೆಗೆ ಸೇರಿದ್ದಳು. ಹರ್ಷಿತಾಳನ್ನು ಮನೆಗೆ ಕರೆದುಕೊಂಡು ಹೋಗಲು ಕುಂಬಾರಕೊಪ್ಪಲಿಗೆ ಮಾದೇಶ್​ ಬಂದಿದ್ದ.

ಬರಲು ಒಪ್ಪದಿದ್ದಾಗ ದಾಳಿ

ಮನೆಗೆ ಬರಲು ಹರ್ಷಿತಾ ಒಪ್ಪದಿದ್ದಾಗ, ಸ್ಥಳದಲ್ಲೇ ಭಾರಿ ವಾಗ್ವಾದ ನಡೆದು, ತಾಳ್ಮೆ ಕಳೆದುಕೊಂಡ ಮಾದೇಶ್​, ಚಾಕುವಿನಿಂದ ಹರ್ಷಿತಾ ಮೇಲೆ ದಾಳಿ ಮಾಡಿ, ಮನಬಂದಂತೆ ಚುಚ್ಚಿ ಕೊಲೆ ಮಾಡಿದ್ದಾನೆ. ಈ ವೇಳೆ ಅಡ್ಡಬಂದ ಅತ್ತೆಯನ್ನು ಕೊಲ್ಲಲು ಯತ್ನಿಸಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮೇಟಗಳ್ಳಿ ಪೋಲೀಸರು ಕೊಲೆ ಮಾಡಿದ ಆರೋಪಿ ಮಾದೇಶ್​ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. (ದಿಗ್ವಿಜಯ ನ್ಯೂಸ್​)