More

    ದಲಿತರ ಭೂಮಿಗೆ ಕಾಯ್ದೆ ಕವಚ: ಎಸ್​ಸಿ, ಎಸ್​ಟಿ ಪಿಟಿಸಿಎಲ್​ಗೆ ತಿದ್ದುಪಡಿ ತರಲು ಮುಂದಾದ ಸರ್ಕಾರ

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ರಾಜ್ಯದಲ್ಲಿನ ಬಡ ದಲಿತರ ಭೂಮಿಯನ್ನು ಕಸಿದುಕೊಳ್ಳುವ ಪ್ರವೃತ್ತಿಗೆ ಕಡಿವಾಣ ಹಾಕುವುದಕ್ಕೆ ಮುಂದಾಗಿರುವ ಸರ್ಕಾರ, ಬಹು ವರ್ಷಗಳ ಬೇಡಿಕೆಯಾದ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದೆ.

    ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸರ್ಕಾರದಿಂದ ಮಂಜೂರಾಗಿರುವ ಭೂಮಿ ಅವರ ಬಳಿಯಲ್ಲಿ ಉಳಿಯುತ್ತಿಲ್ಲ. ದಮನಿತ ವರ್ಗಗಳ ಬಳಿಯಲ್ಲಿಯೇ ಭೂಮಿ ಉಳಿಯಬೇಕು ಎಂಬ ನಿಲುವು ಸರ್ಕಾರದ್ದು. ಹೀಗಾಗಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲ ಭೂಮಿಗಳ ಪರಭಾರೆ ನಿಷೇಧ) ಅಧಿನಿಯಮ 1978ಕ್ಕೆ ತಿದ್ದುಪಡಿ ತರಲಾಗುತ್ತಿದೆ.

    ಕೃಷಿ ಸುಧಾರಣೆ, ಭೂಮಿತಿ ಮತ್ತು ಇನಾಂ ರದ್ದತಿಯ ಕಾರಣದಿಂದ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಸರ್ಕಾರದಿಂದ ಮಂಜೂರಾಗಿರುವ ಭೂಮಿಯನ್ನು ಬೇರೆ ಬೇರೆ ಕಾರಣದಿಂದ ಸರ್ಕಾರದಿಂದ ಅನುಮತಿ ಪಡೆಯದೇ ವರ್ಗಾವಣೆ ಮಾಡಿರುವ ಪ್ರಕರಣಗಳು ಸಾಕಷ್ಟಿವೆ. ಇದು ದೇಶಾದ್ಯಂತ ಇರುವ ಸಮಸ್ಯೆಯಾದರೂ ರಾಜ್ಯ ಸರ್ಕಾರ ದಲಿತರ ಪರವಾಗಿ ಕಾನೂನು ತಿದ್ದುಪಡಿಗೆ ತೀರ್ಮಾನ ಮಾಡಿದೆ.

    ಹೇಗೆ ಪರಭಾರೆ?: ಸರ್ಕಾರ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಮಂಜೂರು ಮಾಡಿರುವ ಭೂಮಿಯನ್ನು ಬಡತನ, ಮುಗ್ಧತೆ ಮತ್ತು ಮೌಢ್ಯವನ್ನು ಬಂಡವಾಳ ಮಾಡಿಕೊಂಡು ಸಾಮಾನ್ಯ ದರ, ದರ ರಹಿತ ಅಥವಾ ಅಡಮಾನದ ಮೂಲಕ ಸರ್ಕಾರದ ಅನುಮತಿ ಇಲ್ಲದೇ ಕಬಳಿಸಿದ್ದಾರೆ. ಮೂಲ ಮಂಜೂರಾತಿದಾರ ಅಥವಾ ಅವರ ಉತ್ತರಾಧಿಕಾರಿ ಸರ್ಕಾರದ ಮುಂದೆ ಅರ್ಜಿ ಹಾಕಿಕೊಂಡು ಹಕ್ಕು ಮರುಸ್ಥಾಪನೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಕುರಿತು ಸರ್ಕಾರ ಕಾಯ್ದೆಗೆ ತಿದ್ದುಪಡಿ ಮಾಡುತ್ತಿದೆ.

    ನ್ಯಾಯಾಲಯ ಹೇಳಿದ್ದೇನು?: ಕರ್ನಾಟಕ ಹಾಗೂ ಆಂಧ್ರಪ್ರದೇಶದ ಎರಡು ಪಿಟಿಸಿಎಲ್ ಪ್ರಕರಣಗಳು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದವು. ಭೂಮಿ ಕಳೆದುಕೊಂಡವರು ಮತ್ತೆ ಭೂಮಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ಕಾಲಮಿತಿ ಇರಬೇಕೆಂದು ತೀರ್ಪು ಹೊರಬಂದಿದೆ. ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಮಂಜೂರಾದ ಜಮೀನು ಪುನರ್ ಸ್ಥಾಪನೆಗೆ ಅರ್ಜಿಯನ್ನು ಕಾಯ್ದೆ ಜಾರಿಗೊಂಡ 25 ವರ್ಷಗಳ ನಂತರ ಸಲ್ಲಿಸಿರುವುದರಿಂದ ಹಾಗೂ ಕಾಯ್ದೆಯಲ್ಲಿ ಯಾವ ಕಾಲಮಿತಿಯಲ್ಲಿ ಅರ್ಜಿ ಸಲ್ಲಿಸಬೇಕೆಂದು ಇಲ್ಲದೇ ಇರುವುದರಿಂದ ಪ್ರಕರಣ ಇತ್ಯರ್ಥವಾಗಿದೆ. ದಲಿತರಿಗೆ ಮಂಜೂರಾದ ಭೂಮಿಯನ್ನು ಪರಭಾರೆ ಮಾಡಲು ಸರ್ಕಾರದ ಅನುಮತಿ ಕಡ್ಡಾಯವಿದೆ. ಆದರೆ, ಅದನ್ನು ಪಡೆಯದೇ ಪರಭಾರೆ ಆಗುತ್ತಿದೆ. ಅದರಿಂದಾಗಿ ಕೆಳಹಂತದ ನ್ಯಾಯಾಲಯಗಳಲ್ಲಿ ಸಾವಿರಾರು ಪ್ರಕರಣಗಳು ವಜಾ ಆಗುತ್ತಿವೆ. ದಲಿತರಿಗೆ ಕಳೆದುಕೊಂಡ ಭೂಮಿ ಮತ್ತೆ ಸಿಗುತ್ತಿಲ್ಲ. ಆದ್ದರಿಂದ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಭೂಮಿಯನ್ನು ಉಳಿಸಿಕೊಡಲು ಮುಂದಾಗಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

    ತಿದ್ದುಪಡಿ ಕಾಯ್ದೆ ಸಿದ್ಧ: ಕಾನೂನು ಇಲಾಖೆಯ ಅಭಿಪ್ರಾಯದೊಂದಿಗೆ ಪಿಟಿಸಿಎಲ್ ತಿದ್ದುಪಡಿ ಕಾಯ್ದೆ ಸಿದ್ಧವಾಗಿದೆ. ಕಳೆದ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚೆಯಾಗಿದೆ. ಕಾನೂನು ಇಲಾಖೆ ಒಂದೆರಡು ಸಲಹೆಯನ್ನು ನೀಡಿದೆ. ಆದ್ದರಿಂದ ಮತ್ತಷ್ಟು ಚರ್ಚೆಯೊಂದಿಗೆ ಇದೇ ಅಧಿವೇಶನದಲ್ಲಿಯೇ ತಿದ್ದುಪಡಿ ಮಾಡಲಾಗುತ್ತದೆ. ರಾಜ್ಯಪಾಲರ ಭಾಷಣ ಹಾಗೂ ಬಜೆಟ್​ಗಳಲ್ಲಿ ಸರ್ಕಾರ ತನ್ನ ಬದ್ಧತೆಯನ್ನು ತೋರಿಸಿದೆ ಎಂದು ಸಿಎಂ ಕಚೇರಿಯ ಮೂಲಗಳು ಹೇಳುತ್ತವೆ.

    ಸೋಮವಾರ ಸಭೆ: ಕಾನೂನು ಇಲಾಖೆ ನೀಡಿರುವ ಅಭಿಪ್ರಾಯವನ್ನು ಆಧರಿಸಿ ಸಿದ್ದಪಡಿಸಿರುವ ತಿದ್ದುಪಡಿ ಕಾಯ್ದೆಯ ಬಗ್ಗೆ ಚರ್ಚೆ ನಡೆಸಲು ದಲಿತ ಸಂಘಟನೆಗಳ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಕರೆದಿದ್ದಾರೆ. ಆ ಸಭೆಯಲ್ಲಿ ಹೊರ ಹೊಮ್ಮುವ ಅಭಿಪ್ರಾಯ ಆಧರಿಸಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡು ವಿಧಾನಮಂಡಲದಲ್ಲಿ ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ ಪಡೆಯಲಾಗುತ್ತದೆ.

    ದಲಿತರ ಭೂಮಿಯ ರಕ್ಷಣೆಗೆ ಹಲವು ದಶಕಗಳ ಹೋರಾಟ ನಡೆದಿದೆ. ಸರ್ಕಾರ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿಗೆ ಮುಂದಾಗಿದೆ. ಯಾವುದೇ ಕಾಲಮಿತಿಯನ್ನು ವಿಧಿಸದೇ ಕಾಯ್ದೆಯ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ತಿದ್ದುಪಡಿ ಮಾಡುವಂತೆ ಮುಖ್ಯಮಂತ್ರಿ ಬಳಿಯಲ್ಲಿ ಹಕ್ಕೊತ್ತಾಯ ಮಂಡಿಸುತ್ತೇವೆ.

    | ಮಾವಳ್ಳಿ ಶಂಕರ್, ದಲಿತಪರ ಹೋರಾಟಗಾರ

    ಕಾನೂನು ಇಲಾಖೆ ನೀಡಿದ್ದ ಅಭಿಪ್ರಾಯಗಳು

    • ಪಿಟಿಸಿಎಲ್ ಕಾಯ್ದೆಯ ಕಲಂ 5(1)ರಲ್ಲಿ ಪುನರ್ ಸ್ಥಾಪನೆ ಕೋರಿ ಅರ್ಜಿ ಸಲ್ಲಿಸಲು ಅಥವಾ ಸಕ್ಷಮ ಪ್ರಾಧಿಕಾರವು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಕಾಲಮಿತಿ ನಿಗದಿ ಪಡಿಸುವುದು.
    • ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದ 1965 ಅಕ್ಟೋಬರ್ 2 ರಿಂದ ಪುನರ್ ಸ್ಥಾಪನೆ ಕೋರಿ ಅರ್ಜಿ ಸಲ್ಲಿಸಲು ಅವಕಾಶ
    • ಯಾವುದೇ ಕಾಲಮಿತಿ ಇಲ್ಲವೆಂದು ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಹಾಗೂ ಸಹಾಯಕ ಆಯುಕ್ತರ ನ್ಯಾಯಾಲಯಗಳ ಮುಂದಿರುವ ಪ್ರಕರಣಗಳಿಗೆ ಅನ್ವಯವೆಂದು ತಿದ್ದುಪಡಿ.

    ಬಡ ದಲಿತರ ಭೂಮಿ ಅಕ್ರಮವಾಗಿ ಪರಭಾರೆ ಆಗಬಾರದು, ಅವರಲ್ಲಿಯೇ ಭೂಮಿ ಉಳಿಯಬೇಕು ಎಂಬುದು ಸರ್ಕಾರದ ಉದ್ದೇಶ. ಅದಕ್ಕಾಗಿಯೇ ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಮಾಡುವ ಅನಿವಾರ್ಯತೆ ಇದೆ.

    | ಎಚ್.ಕೆ. ಪಾಟೀಲ, ಕಾನೂನು ಸಚಿವ

    ಸರ್ಕಾರದಿಂದ ಮಾಹಿತಿ ಕೋರಿಕೆ: ದಲಿತ ಸಂಘಟನೆಗಳ ಜತೆಗಿನ ಸಭೆಗೂ ಮುನ್ನ ಎಲ್ಲ ಜಿಲ್ಲೆಗಳಿಂದ ಸಹಾಯಕ ಆಯುಕ್ತರ ನ್ಯಾಯಾಲಯ ಸೇರಿ ಬೇರೆ ಬೇರೆ ನ್ಯಾಯಾಲಯಗಳಲ್ಲಿ ಇನ್ನೂ ಎಷ್ಟು ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಹಾಗೂ ಎಷ್ಟು ಪ್ರಕರಣಗಳು ಈಗಾಗಲೇ ವಜಾ ಆಗಿವೆ ಎಂಬ ಮಾಹಿತಿಯನ್ನು ಸಿಎಂ ಸಚಿವಾಲಯ ಕೋರಿದೆ. ಸೋಮವಾರ ಬೆಳಗ್ಗೆಯೊಳಗೆ ವಿವರ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ಸಹ ನೀಡಿದೆ.

    ವಿಧಾನಮಂಡಲ ಸಮಿತಿಯ ಮನವಿ: ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಪಂಗಡಗಳ ಸಮಿತಿ ಕಳೆದ ಹಲವು ವರ್ಷಗಳಿಂದ ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಾಕಷ್ಟು ಶಿಫಾರಸು ಮಾಡಿದೆ.

    ಎಷ್ಟಿದೆ ಜಮೀನು?: ದಲಿತರಿಗೆ ಮಂಜೂರಾಗಿರುವ ಜಮೀನಿನಲ್ಲಿ ಅಂದಾಜು 4 ಲಕ್ಷ ಎಕರೆಯಷ್ಟು ಭೂಮಿ ಪರಭಾರೆಯಾಗಿದೆ ಎಂಬ ಮಾಹಿತಿ ಇದೆ. 50 ಸಾವಿರ ಪ್ರಕರಣಗಳು ವಜಾ ಆಗಿವೆ ಎಂಬ ಅಂದಾಜಿದೆ. ಅದರಲ್ಲಿ ಬೆಂಗಳೂರಿನಲ್ಲಿಯೇ 25 ಸಾವಿರ ಪ್ರಕರಣಗಳು ಸೇರಿವೆ ಎಂದು ಹೇಳಲಾಗುತ್ತಿದೆ. ಇನ್ನೂ 50 ಸಾವಿರ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂದು ಮಾಹಿತಿ ಇದೆ. ಇದರ ಜತೆಗೆ, ಬಗರ್​ಹುಕುಂ ಸಕ್ರಮ ಸಮಿತಿಯ ಮುಂದೆ ಇನ್ನೂ 9 ರಿಂದ 10 ಲಕ್ಷ ಎಕರೆ ಭೂಮಿ ಮಂಜೂರಿಗೆ ಅರ್ಜಿಗಳು ವಿಲೇವಾರಿ ಆಗುವುದು ಬಾಕಿ ಇದೆ. ಬಗರ್​ಹುಕುಂ ಸಮಿತಿಗಳೇ ರಚನೆಯಾಗಿಲ್ಲ.

    ಯಂಗ್​ ಆಗಿಯೇ ಇರಲು ಕೋಟ್ಯಂತರ ರೂ. ಖರ್ಚು ಮಾಡಿದ, ಮಗನ ರಕ್ತ ತನ್ನ ದೇಹಕ್ಕೆ ಸೇರಿಸಿಕೊಂಡ: ಕೊನೆಗೆ ಆಗಿದ್ದೇನು?

    ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣ ಸಂಬಂಧ ಬಿ-ರಿಪೋರ್ಟ್ ಅಂಗೀಕೃತ: ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ನಿರಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts