More

    ಬೆಳೆ ನಷ್ಟ ಹೆಚ್ಚಾದರೂ ಸಿಗುವ ಪರಿಹಾರ ಮಾತ್ರ ಕಡಿಮೆ: ದಶಕದಿಂದ ಬದಲಾಗದ ಎನ್‌ಡಿಆರ್‌ಎಫ್ ನಿಯಮ

    ಮಂಡ್ಯ: ದಿನಬಳಕೆ ವಸ್ತು ಸೇರಿದಂತೆ ಅನೇಕ ಬೆಲೆಗಳು ಪ್ರತಿನಿತ್ಯ ಏರಿಕೆಯಾಗುತ್ತಲೇ ಇದೆ. ಆದರೆ ಕಷ್ಟಪಟ್ಟು ಬೆಳೆ ಬೆಳೆದು ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದಾಗಿ ನಷ್ಟ ಅನುಭವಿಸುವ ರೈತರಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ನೀಡಲಾಗುವ ಹಣದ ಮೊತ್ತ ಹೆಚ್ಚಾಗುತ್ತಲೇ ಇಲ್ಲ. ಪರಿಣಾಮ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಕಡಿಮೆ ಮೊತ್ತದ ಪರಿಹಾರವನ್ನು ಕೊಟ್ಟು ಕೈ ತೊಳೆದುಕೊಳ್ಳಲಾಗುತ್ತಿದೆ.
    ಭರಣಿ ಮಳೆಯಿಂದಾಗಿ ಉಂಟಾದ ಪರಿಣಾಮ ಆಲಿಕಲ್ಲು ಸಹಿತ ಜೋರು ಮಳೆಯಿಂದಾಗಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ತೋಟಗಾರಿಕೆ ಬೆಳೆಗಳಿಗೆ ಹಾನಿ ಸಂಭವಿಸಿದೆ. ಆದರೆ ಸರ್ಕಾರದಿಂದ ನೀಡುವ ಪರಿಹಾರದ ಮೊತ್ತವನ್ನು ಕೇಳಿ ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕಾರಣ ಜಿಲ್ಲೆಯಲ್ಲಿ ಅಂದಾಜು ಒಂದು ಕೋಟಿ ರೂನಷ್ಟ ಬೆಳೆ ನಷ್ಟವಾಗಿದೆ. ಆದರೆ ಇದಕ್ಕೆ ನೀಡಲಾಗುವ ಪರಿಹಾರದ ಮೊತ್ತ ಲಕ್ಷ ರೂ ದಾಟಿಲ್ಲ. ಎಷ್ಟೋ ವರ್ಷದ ಹಿಂದೆ ಸಣ್ಣ ಪ್ರಮಾಣದಲ್ಲಿ ಪರಿಹಾರದ ಮೊತ್ತವನ್ನು ತುಸು ಏರಿಕೆ ಮಾಡಿದ್ದನ್ನು ಬಿಟ್ಟರೆ ಮತ್ತೆ ಅದರ ಬಗ್ಗೆ ಯಾರೊಬ್ಬರೂ ಗಮನಹರಿಸಿಲ್ಲ.
    ಮಳೆ ಜತೆಗೆ ಬಿರುಗಾಳಿ ಜೋರಾದ ಕಾರಣ ಇಳುವರಿ ಕೊಡಬೇಕಿದ್ದ ಬೆಳೆಗಳು ಮಣ್ಣು ಪಾಲಾಗಿವೆ. ಜಿಲ್ಲೆಯ ಐದು ತಾಲೂಕಿನಲ್ಲಿ ಬೆಳೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಸಿದ್ಧಪಡಿಸಿರುವ ವರದಿಯನ್ನು ಜಿಲ್ಲಾಡಳಿತಕ್ಕೆ ತಲುಪಿಸಿದ್ದಾರೆ. ಆದರೆ ಈ ಪರಿಹಾರದ ಮೊತ್ತ ಸಿಗುವುದು ಯಾವಾಗ ಎನ್ನುವ ಪ್ರಶ್ನೆ ಒಂದೆಡೆಯಾದರೆ, ಎಷ್ಟೋ ವರ್ಷದಿಂದ ಪರಿಹಾರದ ಮೊತ್ತವನ್ನು ಏರಿಕೆ ಮಾಡುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
    ಕೋಟ್ಯಂತರ ರೂ ನಷ್ಟ: ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳು ಹೆಚ್ಚು ಹಾನಿಗೊಳಗಾಗಿವೆ. ತೆಂಗು ಆರೂವರೆ ಹೆಕ್ಟೇರ್, ಬಾಳೆ 77 ಹೆಕ್ಟೇರ್, ಮಾವು 1.7 ಹೆಕ್ಟೇರ್, ಪಪ್ಪಾಯ 3.67 ಹೆಕ್ಟೇರ್, ವೀಳ್ಯೆದೆಲೆ 21 ಹೆಕ್ಟೇರ್, ಟೊಮೋಟೋ 1.8 ಹೆಕ್ಟೇರ್, ಬೀನ್ಸ್ 1.45 ಹೆಕ್ಟೇರ್, ಮಲ್ಲಿಗೆ ಹೂ 0.10 ಹೆಕ್ಟೇರ್ ಪ್ರದೇಶದಲ್ಲಿ ನಾಶವಾಗಿದೆ. ಕಳೆದ ಒಂದೂವರೆ ವರ್ಷದಿಂದ ತೀವ್ರ ಬರಗಾಲ ಎದುರಿಸಿರುವುದರ ನಡುವೆಯೂ ರೈತರು ಕಷ್ಟಪಟ್ಟು ಬೆಳೆ ಬೆಳೆದಿದ್ದರು. ಅಂತೆಯೇ ಕಟಾವಿಗೂ ಸಜ್ಜಾಗಿದ್ದರು. ಆದರೆ ಬಿರುಗಾಳಿ ಸಹಿತ ಜೋರು ಮಳೆ ರೈತರ ಬದುಕನ್ನು ನಾಶ ಮಾಡಿದೆ.

    ಬೆಳೆ ನಷ್ಟ ಹೆಚ್ಚಾದರೂ ಸಿಗುವ ಪರಿಹಾರ ಮಾತ್ರ ಕಡಿಮೆ: ದಶಕದಿಂದ ಬದಲಾಗದ ಎನ್‌ಡಿಆರ್‌ಎಫ್ ನಿಯಮ

    ಇನ್ನು ಬೆಳೆ ಹಾನಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯನ್ವಯ ನೀರಾವರಿ ಪ್ರದೇಶದಲ್ಲಿರುವ ಬೆಳೆಗೆ ಅಂದರೆ ತರಕಾರಿಗೆ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂ ಹಾಗೂ ತೆಂಗು ಬೆಳೆಗೆ 28 ಸಾವಿರ ರೂ ನೀಡುತ್ತದೆ. ಆದರೆ ವಾಸ್ತವವಾಗಿ ನೋಡಿದರೆ ಒಟ್ಟಾರೆ ಬೆಳೆ ಹಾನಿಯ ಮೊತ್ತ ಒಂದು ಕೋಟಿ ರೂ ದಾಟಲಿದೆ. ಆದರೆ ಇದರಲ್ಲಿ ಸಿಗುವ ಪರಿಹಾರದ 20 ಲಕ್ಷ ರೂಗಳನ್ನು ಸಮೀಪದಲ್ಲಿದೆ ಎನ್ನುವುದು ದುರಂತ.
    ಕಷ್ಟಪಟ್ಟು ಹಗಲು ರಾತ್ರಿ ಕಾದು ಬೆಳೆ ಬೆಳೆಯುವ ರೈತರ ಪಾಡು ಹೇಳತೀರದು. ಒಮ್ಮೆ ಬರುವ ಮಳೆ ಎಲ್ಲವನ್ನೂ ಹಾಳು ಮಾಡುತ್ತದೆ. ಇತ್ತ ಪರಿಹಾರವೂ ಸರಿಯಾದ ರೀತಿ ಸಿಗದ ಇರುವುದರಿಂದ ಕೃಷಿಯೇ ಬೇಡ ಎನ್ನಿಸುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಇದಲ್ಲದೆ ಪರಿಹಾರವೂ ಅಂದುಕೊಂಡಂತೆ ಬೇಗ ಸಿಗುವುದಿಲ್ಲ. ಇದಕ್ಕಾಗಿ ಹಲವು ದಿನ ಕಾಯಬೇಕಾದ ಸ್ಥಿತಿ ಬರುತ್ತದೆ. ಇನ್ನಾದರೂ ಬೆಲೆ ಏರಿಕೆಯ ನಡುವೆಯೂ ಕೃಷಿಯನ್ನು ಅಲವಂಬಿಸಿಕೊಂಡಿರುವ ಅನ್ನದಾತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಸರ್ಕಾರ ಪರಿಹಾರ ನೀಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts