More

    23 ಲಕ್ಷ ಕಾರ್ಡ್​ದಾರರಿಗೆ ಸಿಗುವುದಿಲ್ಲ ಧನಭಾಗ್ಯ: 3 ತಿಂಗಳಿಂದ ರೇಷನ್ ಪಡೆಯದಿದ್ದರೆ ಯೋಜನೆಯಿಂದ ಹೊರಗೆ

    | ಹರೀಶ್ ಬೇಲೂರು ಬೆಂಗಳೂರು 
    ಅನ್ನಭಾಗ್ಯ ಯೋಜನೆಗೆ ರಾಜ್ಯ ಸರ್ಕಾರ ವಿಧಿಸಿರುವ ಕೆಲ ನಿಬಂಧನೆಗಳಿಂದ ಲಕ್ಷಾಂತರ ಬಿಪಿಎಲ್, ಅಂತ್ಯೋದಯ ಕಾರ್ಡ್​ದಾರರು ಅಕ್ಕಿ ಬದಲು ನಗದು ಪಡೆಯುವ ಸೌಲಭ್ಯದಿಂದ ವಂಚಿತವಾಗಿವೆ. ರಾಜ್ಯದಲ್ಲಿರುವ ಒಟ್ಟು 1.28 ಕೋಟಿ ಬಿಪಿಎಲ್ ಕಾರ್ಡ್​ಗಳ ಪೈಕಿ ಅಂದಾಜು 8 ಲಕ್ಷ ಕಾರ್ಡ್​ದಾರರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಪಡೆಯುತ್ತಿಲ್ಲ. ಅಂಥವರನ್ನು ಈ ಸೌಲಭ್ಯದಿಂದ ಹೊರಗಿಡಲು ಸರ್ಕಾರ ನಿರ್ಧರಿಸಿದೆ. ಕಳೆದ ಮೂರು ತಿಂಗಳಿಂದ ರೇಷನ್ ತೆಗೆದುಕೊಳ್ಳದ ಕಾರ್ಡ್​ದಾರರು, ನಗದು ವರ್ಗಾವಣೆಗೆ ಅನರ್ಹರು ಎಂದು ಈಗಾಗಲೆ ಆಹಾರ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.

    ಇದಲ್ಲದೆ, ಬ್ಯಾಂಕ್ ಖಾತೆ ಇಲ್ಲದಿರುವುದು, ಖಾತೆ ನಿಷ್ಕಿ›ಯ, ತಪ್ಪಾಗಿ ಆಧಾರ್ ಸಂಖ್ಯೆ ನೀಡಿರುವುದು, ರೇಷನ್ ಕಾರ್ಡ್​ಗೆ ಆಧಾರ್ ಜೋಡಣೆ ಆಗದಿರುವುದು, ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್​ಐಸಿ) ದತ್ತಾಂಶ ಇಲ್ಲದಿರುವುದು ಸೇರಿ ವಿವಿಧ ತಾಂತ್ರಿಕ ಕಾರಣಗಳಿಂದ 15.73 ಲಕ್ಷ ಬಿಪಿಎಲ್ ಕಾರ್ಡ್​ಗಳು ಅನ್ನಭಾಗ್ಯದ ಹಣ ಸೌಲಭ್ಯದಿಂದ ದೂರವುಳಿದಿವೆ. ಒಟ್ಟಾರೆ 23.73 ಲಕ್ಷ ಕಾರ್ಡ್​ದಾರರಿಗೆ ನಗದು ಸಿಗದಂತಾಗಿದೆ.

    ಅರ್ಹತೆಯೇನು?: ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳು ಕಳೆದ ಮೂರು ತಿಂಗಳ ಪೈಕಿ ಒಂದು ತಿಂಗಳಾದರೂ ರೇಷನ್ ಪಡೆದಿರಬೇಕು. ಇಲ್ಲದಿದ್ದರೆ, ನಗದು ನೀಡಲಾಗುವುದಿಲ್ಲ. ಆಸ್ಪತ್ರೆಗಳಲ್ಲಿ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು, ಪಿಂಚಣಿ, ಶಿಕ್ಷಣ ಸೇರಿ ಇತರ ಸರ್ಕಾರಿ ಸೌಕರ್ಯ ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿರುತ್ತಾರೆ. ಅಂಥವರಿಗೆ ರೇಷನ್ ಅಗತ್ಯವಿರುವುದಿಲ್ಲ ಎಂಬ ಗ್ರಹಿಕೆ ನಗದು ಸೌಲಭ್ಯದಿಂದ ಹೊರಗಿಡುವಂತೆ ಮಾಡಿದೆ. ಆದರೆ, ರೇಷನ್ ಪಡೆಯದಿರುವವರಿಗೆ ಹಣದ ಅವಶ್ಯಕತೆಯಂತೂ ಇದ್ದೇ ಇರುತ್ತದೆ. ಇವರನ್ನು ನಗದು ಸೌಲಭ್ಯಕ್ಕೆ ಸೇರ್ಪಡೆ ಮಾಡಿದರೆ ಸರ್ಕಾರದಿಂದ ಸಿಗುವ ಹಣದಲ್ಲಿ ದಿನಬಳಕೆ ವಸ್ತುಗಳ ಖರೀದಿಗೆ ಅನುಕೂಲವಾಗುತ್ತದೆ. ಪ್ರತಿ ತಿಂಗಳು ರೇಷನ್ ತೆಗೆದುಕೊಳ್ಳದ ಕಾರಣದಿಂದ ಬೊಕ್ಕಸಕ್ಕೆ ಮಾಸಿಕ 50 ಲಕ್ಷ ರೂ. ನಂತೆ ವರ್ಷಕ್ಕೆ 60 ಕೋಟಿ ರೂ. ಉಳಿತಾಯವಾಗುತ್ತದೆ. ಈ ಕಾರಣಕ್ಕಾದರೂ ನಗದು ಸೌಲಭ್ಯಕ್ಕೆ ಪರಿಗಣಿಸಬೇಕೆಂಬ ಆಗ್ರಹ ಕೇಳಿಬಂದಿದೆ.

    ಅಂತ್ಯೋದಯಕ್ಕೂ ಅನ್ಯಾಯ: ರಾಜ್ಯದಲ್ಲಿ 10 ಲಕ್ಷಕ್ಕೂ ಅಧಿಕ ಅಂತ್ಯೋದಯ ಕಾರ್ಡ್​ಗಳಿವೆ. ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿದ್ದರೂ ಪ್ರತಿ ತಿಂಗಳು 35 ಕೆಜಿ ಅಕ್ಕಿ ಸಿಗುತ್ತಿದೆ. ಅಲ್ಲದೆ, ಮೂರಕ್ಕಿಂತ ಹೆಚ್ಚು ಸದಸ್ಯರಿದ್ದರೂ 35 ಕೆಜಿ ಅಕ್ಕಿ ಪಡೆಯುತ್ತಾರೆ. ಆದರೆ, ಸರ್ಕಾರ ಹೊರಡಿಸಿರುವ ನಿಯಮದಿಂದ ಅಂತ್ಯೋದಯ ಕಾರ್ಡ್​ಗಳಲ್ಲಿರುವ ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕಾರ್ಡ್​ಗಳನ್ನು ನಗದು ಸೌಲಭ್ಯದಿಂದ ಹೊರಗಿಡಲಾಗಿದೆ. ಆದರೆ, ನಾಲ್ಕು ಸದಸ್ಯರಿದ್ದರೆ ಕುಟುಂಬಕ್ಕೆ 170 ರೂ, ಐದು ಸದಸ್ಯರಿದ್ದರೆ 510 ರೂ, ಆರು ಸದಸ್ಯರಿದ್ದರೆ 850 ರೂ. ಸಿಗಲಿದೆ. ಹೆಚ್ಚಿನ ಸದಸ್ಯರಿದ್ದಲ್ಲಿ ಇದೇ ಅನುಪಾತದಲ್ಲಿ ಹಣ ನೀಡಲಾಗುತ್ತದೆ.

    700 ಕೋಟಿ ರೂ. ವೆಚ್ಚ

    ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ವರ್ಗಾವಣೆ ವ್ಯವಸ್ಥೆ ಜು.10 ರಿಂದ ಜಾರಿಗೆ ಬಂದಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ (ಎನ್​ಐಸಿ) ಫಲಾನುಭವಿಗಳ ಮಾಹಿತಿಯನ್ನು ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ಡಿಬಿಟಿ ಪೋರ್ಟಲ್, ಖಜಾನೆ ಇಲಾಖೆಯ ಕೆ2 ಪೋರ್ಟಲ್ ಮೂಲಕ ಬಿಪಿಎಲ್ ಕಾರ್ಡ್​ನಲ್ಲಿರುವ ಪ್ರತಿ ಸದಸ್ಯನಿಗೆ ಕೆ.ಜಿ.ಗೆ 34 ರೂ. ನಂತೆ 5 ಕೆ.ಜಿ. ಅಕ್ಕಿಗೆ 170 ರೂ. ಕುಟುಂಬದ ಮುಖ್ಯಸ್ಥರ ಖಾತೆಗೆ ಹಾಕಲಾಗುತ್ತಿದೆ. ಬಿಪಿಎಲ್, ಅಂತ್ಯೋದಯ ಕಾರ್ಡ್​ದಾರರಿಗೆ ಹಣ ವರ್ಗಾವಣೆಗೆ ವರ್ಷಕ್ಕೆ 700 ಕೋಟಿ ರೂ. ಬೇಕು ಎಂದು ಅಂದಾಜಿಸಲಾಗಿದೆ. ರೇಷನ್ ಕಾರ್ಡ್​ಗೆ ಇ-ಕೆವೈಸಿ ಮಾಡಿಸುವುದಕ್ಕಾಗಿ ಈಗಾಗಲೆ 15 ಲಕ್ಷ ಕಾರ್ಡ್​ಗಳ ಪಟ್ಟಿಯನ್ನು ನ್ಯಾಯಬೆಲೆ ಅಂಗಡಿಗಳಿಗೆ ಕಳುಹಿಸಲಾಗಿದೆ. ಆದರೆ, ಇವರು ನಗದು ಸೌಲಭ್ಯಕ್ಕೆ ಅರ್ಹತೆ ಹೊಂದಲು ಇನ್ನಷ್ಟು ಸಮಯ ಬೇಕಾಗಲಿದೆ.

    ಯಂಗ್​ ಆಗಿಯೇ ಇರಲು ಕೋಟ್ಯಂತರ ರೂ. ಖರ್ಚು ಮಾಡಿದ, ಮಗನ ರಕ್ತ ತನ್ನ ದೇಹಕ್ಕೆ ಸೇರಿಸಿಕೊಂಡ: ಕೊನೆಗೆ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts