More

    ನಾಯಕತ್ವವಿಲ್ಲದೆ ಕಳಾಹೀನ: 18ರ ಬಳಿಕ ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ಗಾಳಿ ಸಾಧ್ಯತೆ

    | ಮೃತ್ಯುಂಜಯ ಕಪಗಲ್ ಬೆಂಗಳೂರು 
    ವಿಧಾನಸಭಾ ಚುನಾವಣೆ ಸೋಲಿನ ಆಘಾತದಿಂದ ಚೇತರಿಸಿಕೊಳ್ಳಲು ಬಯಸಿರುವ ಬಿಜೆಪಿ ರಾಜ್ಯ ನಾಯಕರಿಗೆ ಪಕ್ಷದ ವರಿಷ್ಠರ ಉಪೇಕ್ಷೆ ಮತ್ತೊಂದು ಹೊಡೆತ ನೀಡಿದೆ.

    ವಿಧಾನ ಮಂಡಲದ ಬಜೆಟ್ ಅಧಿವೇಶನ ಕೊನೆಯ ವಾರಕ್ಕೆ ಕಾಲಿಟ್ಟಿದ್ದು, ಉಭಯ ಸದನಗಳ ಪ್ರತಿಪಕ್ಷ ನಾಯಕ ಆಯ್ಕೆ ವಿಳಂಬವು ರಾಜ್ಯ ನಾಯಕರಿಗೆ ತಲೆಬಿಸಿಯಾಗಿದೆ. ಅತ್ತ ಆಡಳಿತ ಪಕ್ಷದ ಟೀಕೆ, ಲೇವಡಿ ಮಾಡುತ್ತಿದ್ದರೆ, ಇತ್ತ ಕಾರ್ಯಕರ್ತರಲ್ಲಿ ಉತ್ಸಾಹ ಉಡುಗಿ ಹೋಗಿದೆ. ಪ್ರತಿಪಕ್ಷ ನಾಯಕರ ಆಯ್ಕೆ ವಿಷಯದಲ್ಲಿ ಒಮ್ಮತವಿಲ್ಲ, ಗೊಂದಲವಿದೆ ಎಂದುಕೊಂಡರೂ ದೆಹಲಿ ವರಿಷ್ಠರು ನಿಷ್ಠುರ ನಿರ್ಧಾರ ತೆಗೆದುಕೊಳ್ಳಲಾಗದಷ್ಟು ದುರ್ಬಲರೇನಲ್ಲ. ಆಯ್ಕೆ ವಿಳಂಬದಿಂದ ತಪು್ಪ ಸಂದೇಶ ರವಾನೆಯಾಗಲಿದೆ ಎಂದೂ ಗೊತ್ತಿದೆ. ಆದರೆ, ವರಿಷ್ಠರು ತಳೆದ ನಿಗೂಢ ನಿಲುವು ಬೇಧಿಸಲಾಗದೆ ಹಲವು ಹಿರಿಯರು ‘ಅವರಿಚ್ಛೆ’ಗೆ ಬಿಟ್ಟದ್ದು ಎಂದು ಮೌನಕ್ಕೆ ಶರಣಾಗಿದ್ದಾರೆ.

    ಕಳಾಹೀನ: ಸದನದೊಳಗೆ ಪ್ರತಿಪಕ್ಷ ನಾಯಕನಿಲ್ಲದ ಬಿಜೆಪಿ ಹೋರಾಟ ಸಪ್ಪೆ ಎಂಬ ಭಾವನೆ ಜನರಲ್ಲಿ ಮೂಡಿದ್ದು, ಕೇಂದ್ರ ಸರ್ಕಾರದ ವಿರುದ್ಧದ ಟೀಕೆಗೆ ನೀಡುತ್ತಿರುವ ತಿರುಗೇಟು ಸಾಲದು ಎಂಬ ಬೇಸರ ಪಕ್ಷದ ಕಾರ್ಯಕರ್ತರಲ್ಲಿ ಮನೆ ಮಾಡಿದೆ. ಸಂಘಟನಾತ್ಮಕವಾಗಿ ಬಲಿಷ್ಠ ಕಾರ್ಯಕರ್ತರ ಬಲವನ್ನು ಕಮಲಪಡೆ ಹೊಂದಿದ್ದರೂ ತಳದಿಂದ ರಾಜ್ಯಮಟ್ಟದವರೆಗೂ ಕಳಾಹೀನವಾಗಿದೆ. ಪ್ರತಿಪಕ್ಷ ನಾಯಕ ಮತ್ತು ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ಒಂದಕ್ಕೊಂದು ತಳುಕು ಹಾಕಲಾಗಿದ್ದು, ನನೆಗುದಿ ಧೋರಣೆ ನಿರುತ್ಸಾಹದ ತಿರುವು ನೀಡಿದೆ. ಹೊಸದಾಗಿ ರಾಜ್ಯಾಧ್ಯಕ್ಷರ ನೇಮಕವಾದರೆ ರಾಜ್ಯ ಮತ್ತು ಜಿಲ್ಲಾ ಸಮಿತಿಗಳು ಪುನರ್ ಸಂಘಟನೆ ನಿಶ್ಚಿತವಾದ್ದರಿಂದ ಹಾಲಿ ಪದಾಧಿಕಾರಿಗಳು ಆಸಕ್ತಿ ಕಳೆದುಕೊಂಡಿದ್ದಾರೆ.

    ಬದಲಾವಣೆ ಸಾಧ್ಯತೆ: ಮುಂಬರುವ ಲೋಕಸಭಾ ಚುನಾವಣೆಗಾಗಿ ವರಿಷ್ಠರು ತಮ್ಮದೇ ಆದ ಕಾರ್ಯತಂತ್ರ, ರಣತಂತ್ರ ಹೆಣೆಯಲಾರಂಭಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ವಿಷಯದಲ್ಲಿ ವಿಳಂಬವಾಗಿದೆ ಎನ್ನುವುದು ಪಕ್ಷದ ಮೂಲಗಳ ಅಭಿಮತ. ರಾಷ್ಟ್ರಮಟ್ಟದಲ್ಲಿ ಚುನಾವಣೆ ಪೂರ್ವ ಚಟುವಟಿಕೆಗಳು ಬಿರುಸಾಗಲಿವೆ. ಜು.18ರಂದು ಸಮನ್ವಯ ಬೈಠಕ್, ಎನ್​ಡಿಎ ಮೈತ್ರಿಕೂಟದ ಸಭೆಗಳು ನಡೆಯಲಿದ್ದು, ನಂತರ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುವ ಸಾಧ್ಯತೆಗಳಿವೆ.

    ವಿಸ್ತರಣೆ: ಪಕ್ಷದ ಸೋಲಿನ ಬಗ್ಗೆ ಆತ್ಮಾವಲೋಕನ ಸಭೆಗಳ ಮೂಲಕ ಮುಖಂಡರಲ್ಲಿ ಹೊಸ ವಿಶ್ವಾಸ, ಕಾರ್ಯಕರ್ತರಲ್ಲಿ ಚೈತನ್ಯ ತುಂಬಬೇಕೆಂಬ ಪ್ರಯತ್ನಗಳಿಗೆ ನಿರೀಕ್ಷಿತ ಫಲ ಲಭಿಸಲಿಲ್ಲ. ನರೇಂದ್ರ ಮೋದಿ ಪ್ರಧಾನಿಯಾಗಿ ಒಂಬತ್ತು ವರ್ಷಗಳು ಪೂರೈಸಿದ್ದರ ಕಾರ್ಯಕ್ರಮಗಳಲ್ಲೂ ಲವಲವಿಕೆ ಕಾಣುತ್ತಿಲ್ಲ. ಹೊಸ ನಾಯಕತ್ವ ಲಭಿಸಿದ ನಂತರ ಸಂಘಟನೆ ಚುರುಕಾಗುವ ನಿರೀಕ್ಷೆಯೊಂದಿಗೆ ಚಾಲ್ತಿ ಮನೆ ಮನೆ ಸಂಪರ್ಕ, ಕಾರ್ಯಕ್ರಮಗಳ ಅವಧಿ ಆಗಸ್ಟ್ ಅಂತ್ಯದವರೆಗೆ ವಿಸ್ತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ದಕ್ಷಿಣ ತಳಮಳ: ಪಕ್ಷದ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿಸೂರ್ಯ ಪ್ರತಿನಿಧಿಸುತ್ತಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕುರಿತು ನಡೆಯುತ್ತಿರುವ ಚರ್ಚೆ ಬಿಜೆಪಿಯೊಳಗೆ ತಳಮಳ ಹುಟ್ಟಿಹಾಕಿದೆ. ಪಕ್ಷದ ಹಿರಿಯ ನಾಯಕರಾಗಿದ್ದ ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಕಾಂಗ್ರೆಸ್ ಸೇರಲು ಆಹ್ವಾನ ನೀಡಲಾಗಿದೆ ಎಂಬ ಸಂದೇಶ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಹಿರಿಯ ನಾಯಕರೊಬ್ಬರು ಈ ಆಹ್ವಾನ ನೀಡಿದ್ದು, ದಕ್ಷಿಣಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆಗೆ ಇಳಿಸಲು ಕಾಂಗ್ರೆಸ್ ಬಯಸಿದೆ ಎಂಬ ಕಾರಣಕ್ಕೆ ಸಂದೇಶ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಈ ನಡುವೆ ದಕ್ಷಿಣಲೋಕಸಭೆ ಕ್ಷೇತ್ರದ ಮೇಲೆ ಮತ್ತೊಬ್ಬ ಹಿರಿಯ ನಾಯಕ, ಮಾಜಿ ಸಚಿವ ವಿ.ಸೋಮಣ್ಣ ಕಣ್ಣಿಟ್ಟಿದ್ದಾರೆ ಎಂಬ ಮಾತು ಪಕ್ಷದಲ್ಲಿ ಗುಸುಗುಸು ಚರ್ಚೆಗೆ ಎಡೆಮಾಡಿದೆ.

    ಅಯೋಮಯ ಸ್ಥಿತಿಯಲ್ಲಿ ಶಾಸಕರು: ಜೆಡಿಎಸ್​ನಲ್ಲಿ ಅಯೋಮಯ ಸ್ಥಿತಿ ಇದೆ. ಅನೇಕ ಶಾಸಕರಿಗೆ ಪಕ್ಷದಲ್ಲಿ ಏನು ಬೆಳವಣಿಗೆ ಆಗುತ್ತಿದೆ ಎಂಬ ಸ್ಪಷ್ಟ ಮಾಹಿತಿಯೇ ಇಲ್ಲ. ಕೆಲವು ಶಾಸಕರಿಗೆ ತಾವು ಚುನಾವಣೆಯಲ್ಲಿ ಬಲವಾಗಿ ವಿರೋಧಿಸಿದ್ದ ಬಿಜೆಪಿ ಜತೆ ಕೈಜೋಡಿಸಲು ಸುತಾರಾಂ ಇಷ್ಟವಿಲ್ಲ. ಇತ್ತ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವನ್ನು ವಿರೋಧಿಸುವ ಶಕ್ತಿಯೂ ಅವರಿಗಿಲ್ಲ. ಕುಮಾರಸ್ವಾಮಿ ಯಾವ ನಿಲುವು ತಳೆದರೂ ತಲೆದೂಗುವುದು ನಿಶ್ಚಿತ. ಹಾಗಾಗಿ ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಯಾವ ಹೆಜ್ಜೆ ಇಡುತ್ತಾರೆ ಎಂಬುದು ರಾಜ್ಯ ರಾಜಕೀಯದಲ್ಲಿಷ್ಟೇ ಅಲ್ಲ, ಸ್ವಂತ ಪಕ್ಷದಲ್ಲೂ ಜಿಜ್ಞಾಸೆಗೆ ಕಾರಣವಾಗಿದೆ.

    ಕಮಲಪಡೆಯತ್ತ ಜೆಡಿಎಸ್ ನಡೆ?: ಬೆಂಗಳೂರು: ಅನೇಕ ಅಂತೆ ಕಂತೆಗಳ ನಡುವೆಯೂ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ವಿಚಾರ ಮೂರ್ನಾಲ್ಕು ದಿನಗಳಲ್ಲಿ ಸ್ಪಷ್ಟ ಸ್ವರೂಪ ಪಡೆಯಲಿದೆ. ಆ ಬಳಿಕ ರಾಜ್ಯ ರಾಜಕೀಯದಲ್ಲಿ ಬಹು ದೊಡ್ಡ ಬದಲಾವಣೆ ನಿರೀಕ್ಷೆ ಇದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮಣಿಸಲೇಬೇಕೆಂಬ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಒಡಂಬಡಿಕೆ ನಡೆಯಲಿದೆ ಎನ್ನಲಾಗಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಡೆ, ಅವರು ಬಿಜೆಪಿ ಬೆಂಬಲಿಸುತ್ತಿರುವ ರೀತಿ, ಅದಕ್ಕೆ ಪೂರಕವಾಗಿ ಬಿಜೆಪಿ ನಾಯಕರು ಸ್ಪಂದಿಸುವ ಬಗೆ ಉಭಯ ಪಕ್ಷಗಳ ನಡುವಿನ ಮೈತ್ರಿ/ವಿಲೀನ ವಿಚಾರಕ್ಕೆ ಬಲತಂದುಕೊಟ್ಟಿದೆ.

    ಶತ್ರುವಿನ ಶತ್ರು ಮಿತ್ರ ಎಂಬಂತೆ ಜೆಡಿಎಸ್ ಈಗ ಕಾಂಗ್ರೆಸ್ ಕಟ್ಟಾ ವಿರೋಧಿ ಬಿಜೆಪಿ ಜತೆ ಮೈತ್ರಿಗೆ ಮುಂದಾಗಿದೆ. ಈ ಬಗ್ಗೆ ಉಭಯ ಪಕ್ಷಗಳಲ್ಲೂ ಭಿನ್ನಾಭಿಪ್ರಾಯಗಳಿವೆ. ಆ ಭಿನ್ನಾಭಿಪ್ರಾಯಗಳಿಗೆ ಈ ಹಂತದಲ್ಲಿ ವರಿಷ್ಠರು ಸೊಪ್ಪು ಹಾಕುವ ಸ್ಥಿತಿ ಇಲ್ಲ. ಆದರೂ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ಜೆಡಿಎಸ್ ಜತೆಗಿನ ಬಿಜೆಪಿ ಮೈತ್ರಿಗೆ ಅಪಸ್ವರ ಎತ್ತಿದ್ದಾರೆ. ನಾಯಕರ ಮಟ್ಟದಲ್ಲಿ ಮಾತ್ರ ಮೈತ್ರಿಯಾದರೆ ಪ್ರಯೋಜನವಿಲ್ಲ. ಮುಂದೆ ತಾಪಂ., ಜಿಪಂ.ಚುನಾವಣೆಗಳಿವೆ. ಇದನ್ನು ಗಮನದಲ್ಲಿಟ್ಟು ಕೊಳ್ಳಬೇಕು ಎಂದು ಸ್ಪಷ್ಟ ಸಂದೇಶವನ್ನು ಬಿಜೆಪಿ ಹೈಕಮಾಂಡ್​ಗೆ ರವಾನಿಸಿದ್ದಾರೆ.

    ಬೆಂಗಳೂರಿನ ಎಲ್ಲ ಆಸ್ತಿಗಳ ದಾಖಲೆ ಸಂಗ್ರಹಿಸಿ ಸ್ಕ್ಯಾನ್​ ಮಾಡಲಿದೆ ಸರ್ಕಾರ: ಉದ್ದೇಶ ಏನೆಂದು ತಿಳಿಸಿದ ಡಿಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts