ನ್ಯೂಸ್

'ದಿವ್ಯಾ ನನ್ನ ಜತೆ ಎಷ್ಟು ಖುಷಿಯಾಗಿದ್ಲು ಗೊತ್ತಾ?' ಮೃತ ನಟಿಯ ಬಗ್ಗೆ ಗಂಡ ಹೇಳಿದ್ದೇನು?

ಮುಂಬೈ: ಹಿಂದಿ ಕಿರುತೆರೆ ನಟಿ ದಿವ್ಯಾ ಭಟ್ನಾಗರ್ ಕೊನೆಯುಸಿರೆಳೆದು ನಾಲ್ಕು ದಿನಗಳೇ ಕಳೆದಿವೆ. ಆದರೆ ಅವರ ಸಾವಿನ ಬಗ್ಗೆ, ಅದಕ್ಕೆ ಕಾರಣವಾದ ವ್ಯಕ್ತಿಯ ಬಗ್ಗೆ ಮಾತ್ರ ಇನ್ನೂ ಸುದ್ದಿಗಳು ಹರಿದಾಡುತ್ತಲೇ ಇವೆ. ದಿವ್ಯಾ ಸಾವಿಗೆ ಆಕೆಯ ಗಂಡ ಗಗನ್​ ಗಬ್ರೂನೇ ಕಾರಣ ಎಂದು ಆಕೆಯ ಆಪ್ತ ಗೆಳತಿ ಹಾಗೂ ಸಹೋದರ ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಗಗನ್​ ಗಬ್ರೂ ತಾನು ದಿವ್ಯಾ ಜತೆಗಿದ್ದ ಸಂತಸದ ಕ್ಷಣಗಳ ವಿಡಿಯೋ ಶೇರ್​ ಮಾಡಿದ್ದಾರೆ. ನನ್ನ ದಿವ್ಯಾ ನನ್ನೊಂದಿಗೆ ಎಷ್ಟು ಸಂತೋಷದಿಂದ್ದಳು ನೋಡಿ ಎಂದು ಹೇಳಿಕೊಂಡಿದ್ದಾರೆ.

ದಿವ್ಯಾ ಗಗನ್​ ಜತೆ ನೃತ್ಯ ಮಾಡುವುದು, ಒಬ್ಬರೇ ನೃತ್ಯ ಮಾಡುತ್ತಿರುವುದು ಸೇರಿ ಒಟ್ಟು ಐದು ವಿಡಿಯೋವನ್ನು ಗಗನ್​ ತಮ್ಮ ಇನ್​ಸ್ಟ್ರಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ನನ್ನ ದಿವ್ಯಾ. ಕೆಲವೊಂದಿಷ್ಟು ಜನರು ಹೇಳುತ್ತಾರೆ, ನಾನು ಅವಳನ್ನು ಒತ್ತಾಯದಿಂದ ಮದುವೆಯಾದೆಯೆಂದು, ಮದುವೆಯಾದ ಮೇಲೆ ಕೋಣೆಯಲ್ಲಿ ಕೂಡಿ ಹಾಕಿ, ಹೊಡೆದೆ, ಚಿತ್ರಹಿಂಸೆ ಕೊಟ್ಟೆ ಎಂದು. ಆದರೆ ಅವಳು ನನ್ನೊಂದಿಗೆ ಹೇಗಿದ್ದಳು ನೋಡಿ ಎಂದು ಅವರು ಹೇಳಿಕೊಂಡಿದ್ದಾರೆ.

ಈ ಹಿಂದೆ ದಿವ್ಯಾ ಅವರ ಸಹೋದರ ದೇವಾಶಿಶ್​ ದಿವ್ಯಾ ಜತೆಗಿನ ಮೆಸೇಜ್​ಗಳ ಸ್ಕ್ರೀನ್​ಶಾಟ್​ ಹಂಚಿಕೊಂಡಿದ್ದರು. ಅದರಲ್ಲಿ 'ಗಗನ್​ ನನಗೆ ಬೆಲ್ಟ್‌ನಿಂದ ಹೊಡೆದು ಹಿಂಸಿಸುತ್ತಿದ್ದರು. ಅವರು ನನ್ನನ್ನು ಬೆದರಿಸಿ ಮದುವೆಯಾಗಿದ್ದಾರೆ. ಮದುವೆಯಾದಂದಿನಿಂದಲೂ ತುಂಬಾ ಕಿರುಕುಳ ಕೊಡುತ್ತಿದ್ದಾರೆ. ಅನೇಕ ಬಾರಿ ನನ್ನ ಬೆರಳನ್ನು ಮುರಿದಿದ್ದಾರೆ. ಗಗನ್​ ಮಾತ್ರವಲ್ಲದೇ ಅವರ ತಾಯಿ ಕೂಡ ನನಗೆ ಕೊಡಬಾರದ ಚಿತ್ರಹಿಂಸೆ ಕೊಡುತ್ತಿದ್ದಾರೆ' ಎಂದು ದಿವ್ಯಾ ಬರೆದಿದ್ದಾರೆ.

ಇದೇ ರೀತಿಯ ಆರೋಪವನ್ನು ದಿವ್ಯಾ ಅವರ ಆಪ್ತ ಗೆಳತಿ ದೇವೊಲೀನಾ ಭಟ್ಟಾಚಾರ್ಜಿ ಕೂಡ ಮಾಡಿದ್ದರು. ಭಾವನಾತ್ಮಕ ವಿಡಿಯೋ ಒಂದರಲ್ಲಿ ಗಗನ್​ ಬಗ್ಗೆ ಸಾಲು ಸಾಲು ಆರೋಪ ಮಾಡಿದ್ದರು. (ಏಜೆನ್ಸೀಸ್​)