ಬೆಂಗಳೂರು: ಮತದಾನ ಜಾಗೃತಿ ಹಾಗೂ ಮತ ಚಲಾಯಿಸುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಹೋಟೆಲ್ನವರು ಮತದಾರರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ತಿಂಡಿ ನೀಡಲು ಮುಂದಾಗಿದ್ದಕ್ಕೆ ಚುನಾವಣಾಧಿಕಾರಿ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ವಿರುದ್ಧ ಹೋಟೆಲ್ ಮಾಲೀಕರ ಸಂಘಟನೆ ಹೈಕೋರ್ಟ್ ಮೆಟ್ಟಿಲೇರಿದ್ದು, ಕೊನೆಗೂ ಹೋಟೆಲ್ ಮಾಲೀಕರ ಉಚಿತ/ರಿಯಾಯಿತಿ ದರದ ತಿಂಡಿ ನೀಡಲು ಅವಕಾಶ ಸಿಕ್ಕಿದೆ.
ನಾಳೆ ನಡೆಯಲಿರುವ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಆಗಬೇಕು ಎಂಬ ಸದುದ್ದೇಶದಿಂದ ಬೆಂಗಳೂರಿನ ಎರಡು ಹೋಟೆಲ್ನವರು ಮತದಾರರಿಗೆ ಪ್ರೋತ್ಸಾಹಕರವಾಗಿ ಉಚಿತ ಹಾಗೂ ರಿಯಾಯಿತಿ ದರದಲ್ಲಿ ತಿಂಡಿತಿನಿಸು ನೀಡುವ ಘೋಷಣೆ ಮಾಡಿದ್ದರು. ಆದರೆ ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ. ಒಂದು ವೇಳೆ ಉಚಿತ ಇಲ್ಲವೇ ರಿಯಾಯಿತಿ ದರದಲ್ಲಿ ಮತದಾರರಿಗೆ ತಿಂಡಿತಿನಿಸು ನೀಡಿದರೆ ಕಾನೂನುಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದರು. ಹಾಗೆಯೇ ಬಿಬಿಎಂಪಿ ಕೂಡ ಕಾನೂನುಕ್ರಮದ ಎಚ್ಚರಿಕೆ ನೀಡಿತ್ತು.
ಇದನ್ನು ಪ್ರಶ್ನಿಸಿ ಬೃಹತ್ ಬೆಂಗಳೂರು ಹೋಟೆಲುಗಳ ಸಂಘದವರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ಹೈಕೋರ್ಟ್ ಹೋಟೆಲ್ ಮಾಲೀಕರ ಪರವಾಗಿ ನಿಂತಿದೆ. ಮಾತ್ರವಲ್ಲ, ಮತದಾನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರೋತ್ಸಾಹಕರವಾಗಿ ಉಚಿತ ಇಲ್ಲವೇ ರಿಯಾಯಿತಿ ದರದಲ್ಲಿ ತಿಂಡಿತಿನಿಸು ನೀಡಲು ಅವಕಾಶ ಮಾಡಿಕೊಟ್ಟಿದೆ. ಎಚ್ಚರಿಕೆ ಕ್ರಮದ ಬಿಬಿಎಂಪಿ ಆದೇಶವನ್ನು ನ್ಯಾ.ಶಿವಶಂಕರೇಗೌಡ ಅವರು ರದ್ದು ಮಾಡಿ ಈ ಮೇಲಿನ ಆದೇಶ ನೀಡಿದ್ದಾರೆ.