ನ್ಯೂಸ್

35 ವರ್ಷಗಳ ಬಳಿಕ ಅಮ್ಮ-ಮಗನನ್ನು ಒಂದುಗೂಡಿಸಿದ ಪ್ರವಾಹ!

ನವದೆಹಲಿ: ಪ್ರವಾಹ ಮುಂತಾದ ಪ್ರಾಕೃತಿಕ ವಿಪತ್ತುಗಳು ಸಂಬಂಧಿಕರನ್ನು ಬೇರೆ ಮಾಡಿದ್ದಕ್ಕೆ ಹಲವಾರು ಉದಾಹರಣೆಗಳಿವೆ. ಆದರೆ ಪ್ರವಾಹದ ಕಾರಣಕ್ಕೆ ವರ್ಷಗಳ ಬಳಿಕ ತಾಯಿ-ಮಗ ಒಗ್ಗೂಡಿದ ಅತ್ಯಪರೂಪದ ಪ್ರಕರಣವೊಂದು ಇಲ್ಲಿದೆ.

ತಾಯಿ ಹಾಗೂ ಮಗ 35 ವರ್ಷಗಳ ಬಳಿಕ ಮತ್ತೆ ಪರಸ್ಪರ ನೋಡುವಂತಾಗಲು ಪ್ರವಾಹವೇ ಪ್ರಮುಖವಾಗಿ ಕಾರಣವಾಗಿದೆ. ಪಂಜಾಬ್​ನ ಪಟಿಯಾಲಾದಲ್ಲಿ ಈ ಪ್ರಕರಣ ನಡೆದಿದೆ. ಜಗಜಿತ್ ಸಿಂಗ್ ಎಂಬ 37 ವರ್ಷದ ವ್ಯಕ್ತಿ 35 ವರ್ಷಗಳ ಬಳಿಕ ತಾಯಿಯನ್ನು ನೋಡುವಂತಾಗಿದೆ.

ಜಗಜಿತ್ ಸಿಂಗ್​​ಗೆ 2 ವರ್ಷವಿದ್ದಾಗ ತಂದೆ ತೀರಿಹೋಗಿದ್ದು, ತಾಯಿ ಎರಡನೇ ಮದುವೆಯಾಗಿದ್ದರು. ಆ ಬಳಿಕ ಜಗಜಿತ್ ಸಿಂಗ್ ಅಜ್ಜ-ಅಜ್ಜಿ ಆತನನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಬೆಳೆಸಿದ್ದರು. ಅಲ್ಲದೆ ಜಗಜಿತ್ ತಂದೆ-ತಾಯಿ ಅಪಘಾತದಲ್ಲಿ ತೀರಿಹೋಗಿದ್ದರು ಎಂದು ಸುಳ್ಳು ಹೇಳಿದ್ದರು.

ಆದರೆ ಇತ್ತೀಚೆಗೆ ಪಂಜಾಬ್​ನ ಪಟಿಯಾಲದ ಪ್ರವಾಹಪೀಡಿತ ಪ್ರದೇಶಕ್ಕೆ ರಕ್ಷಣಾ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಜಗಜಿತ್ ಆಗಮಿಸಿದ್ದ. ಪಟಿಯಾಲದ ಬೊಹರ್​ಪುರ ಗ್ರಾಮದಲ್ಲಿ ತಾಯಿಯ ತಂದೆ-ತಾಯಿ ಇದ್ದರು ಎಂದು ಸಂಬಂಧಿಕರೊಬ್ಬರು ಹೇಳುತ್ತಿದ್ದುದನ್ನು ನೆನಪಿಸಿಕೊಂಡ ಜಗಜಿತ್ ಆ ಗ್ರಾಮವನ್ನು ಅರಸಿಕೊಂಡು ಹೋಗಿ ವಿಚಾರಿಸಿದ್ದ.

ಬಳಿಕ ತಾನು ಹುಡುಕುತ್ತಿದ್ದ ಮನೆಯ ವಿಳಾಸ ಸಿಕ್ಕಾಗ ಅಲ್ಲಿ ಮಂಚದ ಮೇಲೆ ಮಲಗಿದ್ದ ವೃದ್ಧೆಯೊಬ್ಬಳ ಬಳಿ ವಿಚಾರಿಸಿದಾಗ ಆಕೆಯೇ ತನ್ನ ತಾಯಿಯ ತಾಯಿ ಎಂಬುದು ಗೊತ್ತಾಗಿದೆ. ತನ್ನ ತಾಯಿಯ ತಂದೆ-ತಾಯಿ ಜೀವಂತ ಇದ್ದರು, ಆದರೆ ವೈಮನಸ್ಯದ ಕಾರಣಕ್ಕೆ ನಾವು ಮಾತಾಡುತ್ತಿಲ್ಲ ಎಂದು ಅಜ್ಜ-ಅಜ್ಜಿ ಹೇಳುತ್ತಿದ್ದುದನ್ನು ಜಗಜಿತ್ ಹೇಳಿಕೊಂಡಿದ್ದ.

ತನ್ನ ತಾಯಿಯ ಹೆತ್ತವರ ಕುರಿತು ತಿಳಿದಿದ್ದ ಎಲ್ಲರೂ 2014ರ ಬಳಿಕ ಯಾರೂ ಜೀವಂತ ಇರದ ಕಾರಣ ಹೆಚ್ಚಿನ ವಿಷಯ ಗೊತ್ತಾಗಲಿಲ್ಲ. ಆದರೆ ಸಂಬಂಧಿಯೊಬ್ಬರು ಬೊಹರ್​ಪುರ ಎಂಬ ಗ್ರಾಮದ ಕುರಿತು ಹೇಳುತ್ತಿದ್ದುದು ನೆನಪಿದ್ದರಿಂದ ಹುಡುಕಿಕೊಂಡು ಬಂದೆ ಎಂದ ಜಗಜಿತ್​​ಗೆ ಕೊನೆಗೂ 35 ವರ್ಷಗಳ ಬಳಿಕ ತಾಯಿಯ ದರ್ಶನವಾಗಿದೆ. ಜಗಜಿತ್ ತನ್ನ ಈ ಭಾವುಕ ಕ್ಷಣಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.