ಬೆಂಗಳೂರು: ಸೋಷಿಯಲ್ ಮೀಡಿಯಾ ಬಳಕೆದಾರರು ಆಗಾಗ ಏನಾದರೂ ಒಂದು ಸಮಸ್ಯೆಗೆ ಒಳಗಾಗುವುದು ಸಹಜ. ಹಾಗೇ ಫೇಸ್ಬುಕ್ನಲ್ಲೀಗ 'ಬ್ಯಾಕ್ ಪೇನ್' ಕಾಣಿಸಿಕೊಂಡಿದೆ. ಅರ್ಥಾತ್, ಫೇಸ್ಬುಕ್ನಲ್ಲಿ ಬ್ಯಾಕ್ ಬಟನ್ ಕೆಲಸ ಮಾಡದ್ದರಿಂದ ಬಳಕೆದಾರರು ನೋವು ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಕೆಲವರು ವಿಶೇಷ ಬೇಡಿಕೆಯನ್ನೂ ಸಲ್ಲಿಸಿದ್ದಾರೆ.
ಸೋಷಿಯಲ್ ಮೀಡಿಯಾ ಆ್ಯಪ್ಗಳ ಪೈಕಿ ಮುಂಚೂಣಿಯಲ್ಲಿರುವ ಫೇಸ್ಬುಕ್ನಲ್ಲಿ ಯಾವುದಾದರೂ ಒಂದು ಪೋಸ್ಟ್ ನೋಡಲು ಕ್ಲಿಕ್ ಮಾಡಿದ ನಂತರ ಪುನಃ ಟೈಮ್ಲೈನ್ಗೆ ಮರಳಲು ಫೋನ್ನಲ್ಲಿನ ಬ್ಯಾಕ್ ಬಟನ್ ಒತ್ತಿದರೆ ಸಾಕು. ಆದರೆ ಕಳೆದ ಕೆಲವು ದಿನಗಳಿಂದ ಫೇಸ್ಬುಕ್ ಬಳಕೆದಾರರು ಬ್ಯಾಕ್ ಬಟನ್ ಅದುಮಿದರೂ ಅದು ಕೆಲಸ ಮಾಡದಂತಾಗಿದೆ.
ಇದನ್ನೂ ಓದಿ: 10 ಸಾವಿರ ಮಂದಿಗೆ ಉಚಿತವಾಗಿ ಸಿಗಲಿದೆ ಟೆಲಿಗ್ರಾಂ ಪ್ರೀಮಿಯಂ ಸಬ್ಸ್ಕ್ರಿಪ್ಷನ್: ನೀವು ಮಾಡಬೇಕಾದ್ದೇನು?
ಬಹಳಷ್ಟು ಮಂದಿ ತಮ್ಮ ಫೋನ್ನಲ್ಲೇ ಏನೋ ಸಮಸ್ಯೆ ಆಗಿದೆ ಎಂದು ರಿಸ್ಟಾರ್ಟ್ ಇತ್ಯಾದಿ ಮಾಡಿ ತಲೆಕೆಡಿಸಿಕೊಂಡಿದ್ದರು. ಆದರೆ ಇದು ಫೋನ್ ಸಮಸ್ಯೆ ಅಲ್ಲ ಎಂಬುದು ಬಳಿಕ ಖಚಿತಗೊಂಡಿದೆ. ಫೇಸ್ಬುಕ್ ಆ್ಯಪ್ನಲ್ಲಿ ಮಾತ್ರ ಮಾಮೂಲಿ ಆಗಿರುವ ಕೆಳಗಿನ ಬ್ಯಾಕ್ ಬಟನ್ ವರ್ಕ್ ಆಗುತ್ತಿಲ್ಲ. ಆದರೆ ಮೇಲಿರುವ ಬ್ಯಾಕ್ ಬಟನ್ ಒತ್ತಿದರೆ ಟೈಮ್ಲೈನ್ಗೆ ಮರಳಲು ಸಾಧ್ಯವಾಗುತ್ತಿದೆ. ಈ ಸಮಸ್ಯೆ ಬೇರೆ ಆ್ಯಪ್ಗಳ ಬಳಕೆ ವೇಳೆ ಕಂಡುಬಂದಿಲ್ಲ.
ಈ ಬಗ್ಗೆ ಹಲವಾರು ಬಳಕೆದಾರರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಮೊದಲಿದ್ದಂತೆ ನಮಗೆ ಬಾಟಮ್ನಲ್ಲಿ ಇರುವ ಬ್ಯಾಕ್ ಬಟನ್ ಬೇಕು, ಬ್ಯಾಕ್ ಬಟನ್ ಮೇಲಿರುವುದು ಬೇಡ ಎಂದು ಆಗ್ರಹಿಸಿದ್ದಾರೆ. ಅದಾಗ್ಯೂ ಈ ಸಮಸ್ಯೆ ಯಾಕಾಯಿತು, ಏನು ಎಂದು ಫೇಸ್ಬುಕ್ ಅಥವಾ ಅದರ ಮಾತೃಸಂಸ್ಥೆ ಮೆಟಾದಿಂದ ಯಾವುದೇ ಮಾಹಿತಿ ಅಪ್ಡೇಟ್ ಆಗಿಲ್ಲ.