

ತುಮಕೂರು: ರಾಜ್ಯದಲ್ಲಿ ಕಾಡಿನಿಂದ ನಾಡಿಗೆ ಚಿರತೆಗಳು ಬರುತ್ತಿರುವ ಪ್ರಕರಣ ದಿನವೂ ಅಲ್ಲೊಂದು ಇಲ್ಲೊಂದರಂತೆ ಕೇಳಿ ಬರುತ್ತಿದೆ. ಹೀಗಾಗಿ ಬೆಂಗಳೂರಿನ ಕೆಲವು ಭಾಗದವರೂ ಸೇರಿದಂತೆ ರಾಜ್ಯದ ಹಲವೆಡೆ ಜನರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.
ಮೂರ್ನಾಲ್ಕು ದಿನಗಳ ಹಿಂದೆ ರಾಜಧಾನಿ ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ಪಾರ್ಕಿಂಗ್ ಸ್ಥಳಕ್ಕೂ ಚಿರತೆ ಬಂದು ಹೋದ ಪ್ರಕರಣ ನಡೆದಿದೆ. ಇದೀಗ ಬಾಲಕಿಯೊಬ್ಬಳು ಚಿರತೆಯಿಂದ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಪ್ರಸಂಗ ನಡೆದಿದೆ.
ತುಮಕೂರು ಜಿಲ್ಲೆಯ ಚಿಕ್ಕಬೆಳ್ಳಾವಿಯಲ್ಲಿ ಮಂಗಳವಾರ ಸಂಜೆ ಈ ಪ್ರಕರಣ ನಡೆದಿದ್ದು, ಲೇಖನ ಎಂಬ ಏಳು ವರ್ಷದ ಬಾಲಕಿ ಚಿರತೆಗೆ ಬಲಿಯಾಗುವುದರಿಂದ ಪಾರಾಗಿದ್ದಾಳೆ. ವಿಶೇಷವೆಂದರೆ ಈಕೆಯ ತಂದೆಯೇ ಇವಳನ್ನು ರಕ್ಷಿಸಿದ್ದಾರೆ. ತಂದೆ ರಾಕೇಶ್ ಚಿರತೆಯನ್ನೇ ಎದುರಿಸಿ ಮಗಳನ್ನು ರಕ್ಷಣೆ ಮಾಡಿಕೊಂಡಿದ್ದಾರೆ.
ಮಂಗಳವಾರ ಸಂಜೆ ಮನೆಯ ಅಂಗಳದಲ್ಲಿ ಲೇಖನ ಆಟ ಆಡುತ್ತಿದ್ದಾಗ ಚಿರತೆ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ತಂದೆ ರಾಕೇಶ್ ಚಿರತೆಯನ್ನು ಎದುರಿಸಿ ಜೋರಾಗಿ ಕೂಗಿ, ದೊಣ್ಣೆಯಿಂದ ಬೆದರಿಸಿದ್ದಾರೆ. ಆಗ ಚಿರತೆ ಬಾಲಕಿಯನ್ನು ಬಿಟ್ಟು ಹೋಗಿದೆ. ಆಕೆಯ ಕಾಲಿಗೆ ಪರಚಿದ ಗಾಯಗಳಾಗಿವೆ. ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.