ನ್ಯೂಸ್

ಎಸಿಪಿ ವೆಂಕಟೇಶ್ ಪ್ರಸನ್ನ ವಿರುದ್ಧ ಸಾಕ್ಷ್ಯ: ಪಾತಕಿ ರವಿ ಪೂಜಾರಿ ಜತೆ ಸ್ನೇಹ ಆರೋಪ

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಜತೆ ಎಸಿಪಿ ವೆಂಕಟೇಶ್ ಪ್ರಸನ್ನ ಸ್ನೇಹ ಆರೋಪ ಪ್ರಕರಣಕ್ಕೆ ದಿನಕ್ಕೊಂದು ತಿರುವು ಪಡೆಯುತ್ತಿದೆ. 4 ವರ್ಷಗಳ ಹಿಂದೆ ರವಿ ಪೂಜಾರಿ ಬಲಗೈ ಬಂಟ ಭೂಗತ ಪಾತಕಿ ಕಲಿಯೋಗೇಶ್ ದುಬೈನಲ್ಲಿ ಏರ್ಪಡಿಸಿದ್ದ ಪಾರ್ಟಿಯಲ್ಲಿ ಎಸಿಪಿ ವೆಂಕಟೇಶ್ ಭಾಗವಹಿಸಿದ್ದ ಸಂಗತಿ ಬೆಳಕಿಗೆ ಬಂದಿದೆ. ಇದಕ್ಕೆ ಪೂರಕವಾಗಿ ಸಿಸಿಬಿ ಪೊಲೀಸರು ಸಾಕ್ಷ್ಯ ಸಂಗ್ರಹಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದ ರವಿ ಪೂಜಾರಿಯನ್ನು ಬಂಧಿಸಿದ ಪೊಲೀಸರು, ರಾಜ್ಯಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಪೂಜಾರಿ ಮತ್ತು ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ನಡುವೆ ಸ್ನೇಹ ಇರುವುದು ಬೆಳಕಿಗೆ ಬಂದಿತು. ಈ ಬಗ್ಗೆಯೂ ಪ್ರತ್ಯೇಕ ತನಿಖೆಗೆ ಸರ್ಕಾರ ಸೂಚನೆ ನೀಡಿತ್ತು. ಸಿಸಿಬಿಯ ಪ್ರತ್ಯೇಕ ತಂಡ ತನಿಖೆ ಕೈಗೊಂಡಾಗ ಹಲವು ವಿಚಾರ ತನಿಖಾಧಿಕಾರಿಗಳಿಗೆ ಗೊತ್ತಾಗಿದೆ.

ಪೂಜಾರಿ ಸಹಚರ ಮಂಗಳೂರಿನ ದಿನೇಶ್ ಶೆಟ್ಟಿ, ದುಬೈನಲ್ಲಿ ತಲೆಮರೆಸಿಕೊಂಡಿರುವ ವಿಶ್ವನಾಥ್ ಕೊರಂಗು ಶೆಟ್ಟಿ (ಇ ಮೇಲ್ ಹೇಳಿಕೆ) ಹಾಗೂ ಮಂಗಳೂರು ಸಿಸಿಬಿ ಘಟಕದ ಮುಖ್ಯಪೇದೆಯೊಬ್ಬ ಬೆಂಗಳೂರು ಸಿಸಿಬಿ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ರಿಯಲ್​ಎಸ್ಟೇಟ್ ಹಾಗೂ ಹೋಟೆಲ್ ಉದ್ಯಮಿಗಳು ಸೇರಿ ಶ್ರೀಮಂತರಿಗೆ ಬೆದರಿಕೆ ಒಡ್ಡಿ ಸುಲಿಗೆ ಮಾಡುತ್ತಿದ್ದ ರವಿ ಪೂಜಾರಿ ಮತ್ತು ಕಲಿ ಯೋಗೇಶ್ ಜತೆ ಎಸಿಪಿ ನಿರಂತರ ಸಂಪರ್ಕದಲ್ಲಿದ್ದರು. ಸರ್ಕಾರದ ಅನುಮತಿ ಪಡೆಯದೆ ದುಬೈಗೆ ಬಂದಿದ್ದ ಎಸಿಪಿಗೆ ಕಲಿಯೋಗೇಶ್ ಪಾರ್ಟಿ ಆಯೋಜಿಸಿದ್ದ. ಅದಕ್ಕೆ ತಗುಲಿದ 16 ಲಕ್ಷ ರೂ. ವೆಚ್ಚವನ್ನು ನಾನೇ ಭರಿಸಿದ್ದೇನೆ ಎಂದು ವಿಶ್ವನಾಥ್ ಶೆಟ್ಟಿ ಬೆಂಗಳೂರು ಸಿಸಿಬಿ ಪೊಲೀಸರಿಗೆ ಹೇಳಿರುವುದಾಗಿ ತಿಳಿದುಬಂದಿದೆ. ದುಬೈ ಪ್ರವಾಸ ಮತ್ತು ಪೂಜಾರಿ ಜತೆ ಸ್ನೇಹದ ಕುರಿತು ಎಸಿಪಿಗೆ ಸಹಾಯಕರಾಗಿದ್ದ ಮುಖ್ಯಪೇದೆ ಹಾಗೂ ರಶೀದ್ ಮಲಬಾರಿ ವಕೀಲ ನೌಷದ್ ಕೊಲೆ ಪ್ರಕರಣದ ಆರೋಪಿ ದಿನೇಶ್ ಶೆಟ್ಟಿ ಸಹ ಸಾಕ್ಷ್ಯ ಹೇಳಿಕೆ ನೀಡಿದ್ದಾನೆ. ರವಿ ಪೂಜಾರಿ ಗ್ಯಾಂಗ್​ನಿಂದ ಉದ್ಯಮಿಗಳಿಗೆ ಬೆದರಿಕೆ ಕರೆ ಬಂದಾಗ ತಾವೇ ನಿಂತು ಪ್ರಸನ್ನ ಬಗೆಹರಿಸುತ್ತಿದ್ದರು. ವಕೀಲ ನೌಷಾದ್ ಕೊಲೆ ಹಾಗೂ ಬಿಜೆಪಿ ನಾಯಕರ ಕೊಲೆಗಳ ಬಗ್ಗೆ ಪ್ರಸನ್ನಗೆ ಮಾಹಿತಿ ಇದ್ದರೂ ತಡೆಯಲು ಯತ್ನಿಸಿಲ್ಲ ಎಂದು ದಿನೇಶ್ ಶೆಟ್ಟಿ ಉಲ್ಲೇಖಿಸಿದ್ದಾನೆ.

2015ರಲ್ಲಿ ಪೊಲೀಸರಿಗೆ ಸೆರೆಯಾಗುವ ಮುನ್ನ ಬನ್ನಂಜೆ ರಾಜನಿಂದ ಕೂಡ ಪ್ರಸನ್ನ ಸಹಾಯ ಪಡೆದಿದ್ದರು. ಬಂಧನದ ನಂತರ ಬನ್ನಂಜೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ಕೊಟ್ಟಿದ್ದರು ಎಂದು ವಿಶ್ವನಾಥ್ ಶೆಟ್ಟಿ ಹೇಳಿದ್ದಾನೆ. ಈ ಎಲ್ಲರ ಹೇಳಿಕೆ ಲಿಖಿತವಾಗಿ ಪಡೆದಿದ್ದು, ತನಿಖೆ ಮುಂದುವರಿದಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ನ್ಯಾಯಾಂಗ ಬಂಧನದಲ್ಲಿ ಪೂಜಾರಿ: ರಾಜ್ಯದಲ್ಲಿ 97 ಪ್ರಕರಣಗಳಲ್ಲಿ ಬೇಕಾಗಿದ್ದ ರವಿ ಪೂಜಾರಿಯನ್ನು ವಿಚಾರಣೆ ನಡೆಸುತ್ತಿದ್ದ ಸಿಸಿಬಿ ಪೊಲೀಸರು, ಕರೊನಾ ಸೋಂಕು ಹಿನ್ನೆಲೆಯಲ್ಲಿ ತನಿಖೆ ನಿಲ್ಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.