

ಕಾಬೂಲ್: ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಆ್ಯಂಡ್ ಸಿರಿಯಾ (ಐಎಸ್ಐಎಸ್) ಉಗ್ರ ಸಂಘಟನೆಯ ಪ್ರಮುಖ ನಾಯಕರಾದ ಜಿಯಾ ಉಲ್ ಹಕ್ ಮತ್ತು ಇನ್ನಿಬ್ಬರು ಪ್ರಮುಖರನ್ನು ಆಫ್ಘನ್ ಭದ್ರತಾ ಪಡೆ ಸೆರೆ ಹಿಡಿದಿದೆ. ಅಫ್ಘಾನಿಸ್ತಾನದ ನ್ಯಾಷನಲ್ ಡೈರೆಕ್ಟರೇಟ್ ಆಫ್ ಸೆಕ್ಯುರಿಟಿ (ಎನ್ಡಿಎಸ್) ಈ ವಿಷಯವನ್ನು ಮಂಗಳವಾರ ದೃಢೀಕರಿಸಿದೆ.
ಆಫ್ಘನ್ ಪೊಲೀಸ್, ಎನ್ಡಿಎಸ್ನ ವಿಶೇಷ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಐಎಸ್ಐಎಸ್ನ ಕಮಾಂಡರ್ ಜಯಾ ಉಲ್ ಹಕ್ ಮತ್ತು ಇತರೆ ಇಬ್ಬರು ಉನ್ನತ ನಾಯಕರನ್ನು ಬಂಧಿಸಲಾಗಿದೆ. ಜಿಯಾ ಉಲ್ ಹಕ್ ಹೊರ ಜಗತ್ತಿನಲ್ಲಿ ಅಬು ಉಮರ್ ಖೊರಸಾನಿ ಎಂದೂ ಗುರುತಿಸಲ್ಪಟ್ಟಿದ್ದಾನೆ. ಈತ ಆಫ್ಘನ್ ಪ್ರಜೆಯಾಗಿದ್ದು, ಏಷ್ಯಾ ಪೂರ್ವ ಮತ್ತು ದಕ್ಷಿಣ ಪ್ರಾಂತ್ಯದ ನಾಯಕ. ಈತನನ್ನು ಕಾಬೂಲ್ ನಗರದ ಪಿಡಿ8 ಪ್ರದೇಶದ ಕಾರ್ತ್ ಏ ನವ್ವಾದಿಂದ ಬಂಧಿಸಲಾಗಿದೆ. ಇನ್ನಿಬ್ಬರು ಉಗ್ರರು ಇದೇ ಉಗ್ರ ಸಂಘಟನೆಯ ಸಾರ್ವಜನಿಕ ಸಂಪರ್ಕ ಮತ್ತು ಗುಪ್ತಚರ ವಿಭಾಗದ ಮುಖ್ಯಸ್ಥರು. ಅವರನ್ನು ಬೇರೆಡೆಯಿಂದ ಬಂಧಿಸಲಾಗಿತ್ತು ಎಂದು ಎನ್ಡಿಎಸ್ ತಿಳಿಸಿದೆ.
ಆಫ್ಘನ್ ಗುಪ್ತಚರ ವಿಭಾಗದ ಅಧಿಕಾರಿಗಳು ಐಎಸ್ಐಎಸ್ ಮತ್ತು ಹಕ್ಕಾನಿ ನೆಟ್ವರ್ಕ್ ಜತೆಗೂಡಿದ ಜಂಟಿ ಉಗ್ರ ಸಂಘಟನೆಯ ಸಂಚಿನ ಮಾಹಿತಿ ಸಿಕ್ಕಿತ್ತು. ಈ ಖಚಿತ ಮಾಹಿತಿ ಮೇರೆಗೆ ಕಾಬೂಲ್ನ ಸ್ಪೆಷಲ್ ಫೋರ್ಸಸ್ ಆಫ್ ದ ನೇಷನಲ್ ಸೆಕ್ಯುರಿಟಿ ಮೂರು ನಿಖರ ಕಾರ್ಯಾಚರಣೆ ನಡೆಸಿ ಈ ಉಗ್ರ ನೆಲೆಗಳನ್ನು ಐದು ದಿನಗಳ ಹಿಂದೆ ನಾಶ ಪಡಿಸಿದೆ. ಇದೇ ದಯೇಶ್ ಮತ್ತು ಹಕ್ಕಾನಿ ನೆಟವರ್ಕ್ ಒಳಗೊಂಡ ಗುಂಪಿನ ಕಮಾಂಡರ್ ಸನಾತುಲ್ಲಾ ನೇತೃತ್ವದ ತಂಡ ಅಧ್ಯಕ್ಷ ಘನಿ ಅವರ ಉದ್ಘಾಟನಾ ಸಮಾರಂಭವೊಂದರ ಮೇಲೆ ರಾಕೆಟ್ ದಾಳಿ ನಡೆಸಿತ್ತು. ಅಲ್ಲದೇ, ಕಾಬೂಲ್ನಲ್ಲಿ ಸಿಖ್ ದೇಗುಲದ ಮೇಲಿನ ದಾಳಿ, ಪಶ್ಚಿಮ ಕಾಬೂಲ್ನ ರಾಜಕಾರಣಿಗಳ ಸಭೆ ಮೇಲಿನ ದಾಳಿ ಮತ್ತು ಇತರೆ ಎರಡು ರಾಕೆಟ್ ದಾಳಿಗಳನ್ನೂ ಇದೇ ಗುಂಪು ಮಾಡಿತ್ತು. ಐಎಸ್ಐಎಸ್ ಮತ್ತು ಹಕ್ಕಾನಿ ನೆಟ್ವರ್ಕ್ ಸೆಂಟರ್ಗಳ ಜಂಟಿ ನೆಲೆಗಳನ್ನು ಗುರುತಿಸಿ ನಾಶಗೊಳಿಸುವ ಎನ್ಡಿಎಸ್ನ ಪ್ರಯತ್ನ ಇನ್ನೂ ಮುಂದುವರಿಯಲಿದೆ ಎಂದು ಎನ್ಡಿಎಸ್ ಖಚಿತ ಪಡಿಸಿದೆ.
ಕಾಬೂಲ್ನಲ್ಲಿ ಟಾರ್ಗೆಟೆಡ್ ಕಿಲ್ಲಿಂಗ್ ನಡೆಯುತ್ತಿದ್ದು, ಅದರ ಹಿಂದೆಯೂ ಇದೇ ಉಗ್ರರ ಕೈವಾಡವಿದೆ. ಕಳೆದ ತಿಂಗಳು ಆಫ್ಘನ್ ರಕ್ಷಣಾ ಪಡೆಗಳು ಐಎಸ್ಐಎಸ್ ಸಂಘಟನೆಯ ಹಲವು ಪ್ರಮುಖ ನಾಯಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಏಪ್ರಿಲ್ 22ರಂದು ಐಎಸ್ಐಎಸ್ನ ಖೊರಸಾನ್ ವಿಭಾಗದ ಟಾಪ್ ಕಮಾಂಡರ್ ಪಾಕಿಸ್ತಾನದ ಮುನಿಬ್ ಮೊಹಮ್ಮದ್ ನನ್ನು ಬಂಧಿಸಿತ್ತು. ಅದಕ್ಕೂ ಮುನ್ನ, ಇನ್ನೂ ಕೆಲವು ಪ್ರಮುಖ ನಾಯಕರನ್ನು ಅದು ಬಂಧಿಸಿತ್ತು. (ಏಜೆನ್ಸೀಸ್)