More

    ಲಾಕ್​ಡೌನ್ ವಿಸ್ತರಣೆ?: ರಾಜ್ಯಗಳಿಗೇ ಸವಾಲು ನಿಭಾಯಿಸುವ ಹೊಣೆ ಸಾಧ್ಯತೆ

    ಬೆಂಗಳೂರು: ಕರೊನಾ ಹತ್ತಿಕ್ಕುವ ಉದ್ದೇಶದಿಂದ ದೇಶಾದ್ಯಂತ ಜಾರಿಯಲ್ಲಿರುವ ಲಾಕ್​ಡೌನ್ ಮೇ 17ರ ಬಳಿಕವೂ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ಸೋಮವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನಡೆಸಿದ ವಿಡಿಯೋ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಸುಳಿವು ನೀಡಿದ್ದಾರೆ. ಆದರೆ ಆರ್ಥಿಕ ಪುನಶ್ಚೇತನಕ್ಕೆ ಒತ್ತು ನೀಡುವ ಉದ್ದೇಶದಿಂದ ಲಾಕ್​ಡೌನ್ ವಿಸ್ತರಣೆ ಹೊರತಾಗಿಯೂ ಕಂಟೇನ್ಮೆಂಟ್ ವಲಯಗಳನ್ನು ಹೊರತುಪಡಿಸಿ ಉಳಿದ ಕಡೆ ಮತ್ತಷ್ಟು ವಿನಾಯಿತಿ, ರಿಯಾಯಿತಿ ನೀಡಲು ತೀರ್ವನಿಸಿದ್ದಾರೆ. ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಹೊಣೆಗಾರಿಕೆಯನ್ನು ಅವರು ರಾಜ್ಯಗಳಿಗೇ ನೀಡಿದ್ದಾರೆ.

    ವರದಿ ಯಾಚನೆ : ಕರೊನಾ ನಿಯಂತ್ರಣಕ್ಕಾಗಿ ಮೇ 17ರ ನಂತರವೂ ಲಾಕ್​ಡೌನ್ ಮುಂದುವರಿಸುವ ಕುರಿತಂತೆ ಹಾಗೂ ರಾಜ್ಯಗಳ ಒಟ್ಟಾರೆ ಪರಿಸ್ಥಿತಿ ಕುರಿತಂತೆ ಮೇ 15ರೊಳಗೆ ವರದಿ ನೀಡಲು ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದಾರೆ. ಮೂರನೇ ಹಂತದ ಲಾಕ್​ಡೌನ್ ಕೊನೆಯ ಚರಣಕ್ಕೆ ತಲುಪುತ್ತಿರುವ ಬೆನ್ನಲ್ಲೇ ‘ಲಾಕ್​ಡೌನ್​ವುುಕ್ತ’ ಮುಂದಿನ ಕಾರ್ಯತಂತ್ರದ ಬಗ್ಗೆ ತೀರ್ಮಾನ ಕೈಗೊಳ್ಳುವ ಸಂಬಂಧ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿ ಜತೆ ವಿಚಾರ ವಿನಿಮಯ ನಡೆಸಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಈ ಸಂವಾದದಲ್ಲಿ ಪಾಲ್ಗೊಂಡು ಕರ್ನಾಟಕದ ಸದ್ಯದ ಪರಿಸ್ಥಿತಿ ಮತ್ತು ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.

    ಹೊರ ರಾಜ್ಯದಲ್ಲಿದ್ದವರಿಗೆ ರಾಜ್ಯ ಪ್ರವೇಶಿಸಲು ಅವಕಾಶ ನೀಡಿದಾಗಿನಿಂದ ಹಸಿರು ವಲಯಕ್ಕೂ ಸೋಂಕು ವಿಸ್ತರಣೆಯಾದಂತಾಗಿದೆ ಎಂದು ಸಿಎಂ ಕಳವಳ ವ್ಯಕ್ತಪಡಿಸಿದರು. ಮೂರು ದಿನಗಳಿಂದೀಚೆಗೆ ಗಣನೀಯವಾಗಿ ಸೋಂಕಿತರ ಸಂಖ್ಯೆಯನ್ನು ಉದಾಹರಿಸಿ ವಿಷಯ ಪ್ರಸ್ತಾಪಿಸಿದ ಸಿಎಂ, ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆಯಾದರೂ, ಹೊರ ರಾಜ್ಯದಿಂದ ಬರುವವರಿಂದ ಸಮಸ್ಯೆ ಕಾಣಿಸಿದೆ ಎಂದು ಹೇಳಿದ್ದಾರೆ.

    ಲಾಕ್​ಡೌನ್​ಗೆ ಸಂಪೂರ್ಣ ವಿನಾಯಿತಿ ನೀಡದೆ, ಸೋಂಕಿತರ ಪ್ರದೇಶಕ್ಕೆ ಸೀಮಿತಗೊಳಿಸಬೇಕೆಂದು ಅಭಿಪ್ರಾಯ ನೀಡಿರುವ ಬಿಎಸ್​ವೈ, ಕೇಂದ್ರ ಕೈಗೊಳ್ಳುವ ತೀರ್ವನಕ್ಕೆ ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಕೋವಿಡ್19 ರ ಕುರಿತು ಜನರ ಪೂರ್ವಾಗ್ರಹಗಳನ್ನು ತೊಡೆಯಲು ಇದು ಫ್ಲೂನಂತೆಯೇ ಒಂದು ವೈರಲ್ ಸೋಂಕು; ಆದರೆ ಇತರ ದೀರ್ಘಕಾಲಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅಪಾಯಕಾರಿ ಎಂಬ ಅರಿವು ಮೂಡಿಸಬೇಕು ಎಂದು ಅಭಿಪ್ರಾಯಪಟ್ಟರು. ಲಾಕ್​ಡೌನ್ ಸಡಿಲಿಸಿ ಆರ್ಥಿಕ ಪುನಶ್ಚೇತನಕ್ಕೆ ಒತ್ತುಕೊಡಲೇ ಬೇಕು, ಆರ್ಥಿಕ ನೆರವು ನೀಡಬೇಕೆಂಬುದು ಸಭೆಯ ಒತ್ತಾಯವಾಗಿತ್ತು. ಎಲ್ಲ ರಾಜ್ಯಗಳ ಸಿಎಂಗಳಿಗೂ ಮಾತನಾಡಲು ಅವಕಾಶ ನೀಡಿದ್ದರಿಂದಾಗಿ ವಿಡಿಯೋ ಕಾನ್ಪರೆನ್ಸ್ 6 ಗಂಟೆಗೂ ಹೆಚ್ಚು ಕಾಲ ನಡೆಯಿತು.

    ಮಂಗಳವಾರದಿಂದ ಪ್ರಯಾಣಿಕರ 15 ರೈಲುಗಳ ಸೇವೆ ಆರಂಭಿಸಲಿರುವ ರೈಲ್ವೆ ಇಲಾಖೆಯ ನಿರ್ಧಾರಕ್ಕೆ ನಾಲ್ವರು ಸಿಎಂಗಳು ಆಕ್ಷೇಪ ವ್ಯಕ್ತಪಡಿಸಿದರು.

    ವಿವಿಧ ರಾಜ್ಯಗಳ ಬೇಡಿಕೆಗಳು

    ಆಂಧ್ರಪ್ರದೇಶ- ಅಂತರ ರಾಜ್ಯ ವಸ್ತುಗಳ ಸಾಗಾಟಕ್ಕೆ ನಿರ್ಬಂಧ ಸಡಿಲಗೊಳಿಸಬೇಕು

    ತೆಲಂಗಾಣ- ರೈಲು ಸೇವೆ ಆರಂಭಿಸಬೇಡಿ, ತಪಾಸಣೆ ಕಷ್ಟವಾಗಲಿದೆ

    ಗುಜರಾತ್-ಕಂಟೇನ್​ವೆುಂಟ್ ವಲಯಕ್ಕೆ ಮಾತ್ರ ಲಾಕ್​ಡೌನ್ ಮುಂದುವರಿಸಿ

    ಛತ್ತೀಸ್​ಗಢ- ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಾಗಿ ವಿಂಗಡಿಸಲು ರಾಜ್ಯಗಳಿಗೆ ಅನುಮತಿ ನೀಡಿ

    ತಮಿಳುನಾಡು-ನಮಗೆ ವಿಶೇಷ ಆರ್ಥಿಕ ನೆರವು ಕೊಡಿ, ಜಿಎಸ್ಟಿ ಪಾಲು ಕೊಡಿ

    ಪ.ಬಂಗಾಳ-ಈ ಸಂದಿಗ್ಧ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡಬಾರದು

    ಮಹಾರಾಷ್ಟ್ರ-ಸ್ಥಳೀಯ ರೈಲು ಸಂಚಾರಕ್ಕೆ ಅವಕಾಶ ಕೊಡಿ

    ಕೇರಳ-ಮೆಟ್ರೋ ಜತೆಗೆ ರಾಜ್ಯ ಸಾರಿಗೆ ಬಸ್ಸುಗಳನ್ನು ಓಡಿಸಲು ಅನುಮತಿ ನೀಡಿ

    ದೆಹಲಿ-ನಿರ್ಬಂಧಿತ ವಲಯ ಹೊರತುಪಡಿಸಿ ಉಳಿದ ಕಡೆ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಿ

    ಮೋದಿ ಹೇಳಿದ್ದೇನು?

    1 ಕರೊನಾ ನಿರ್ವಹಣೆಯಲ್ಲಿ ಭಾರತದ ಕ್ರಮಗಳ ಬಗ್ಗೆ ವಿಶ್ವವೇ ನೋಡುತ್ತಿದೆ. ಈ ಹೋರಾಟದಲ್ಲಿ ಇಡೀ ವಿಶ್ವ ನಮ್ಮ ಪ್ರಯತ್ನವನ್ನು ಕೊಂಡಾಡುತ್ತಿದೆ. ಇದರಲ್ಲಿ ನಮ್ಮ ರಾಜ್ಯ ಸರ್ಕಾರಗಳು ಮಹತ್ವದ ಪಾತ್ರ ನಿಭಾಯಿಸಿವೆ. ತಮ್ಮ ಹೊಣೆಗಾರಿಕೆ ಅರಿತು ಆ ಪ್ರಕಾರ ನಡೆದುಕೊಂಡಿವೆ

    2 ಜನ ಎಲ್ಲಿದ್ದಾರೋ ಅಲ್ಲೇ ಇರಬೇಕು ಎಂಬ ಕೋರಿಕೆಗೆ ಬಹಳಷ್ಟು ಸ್ಪಂದನೆ ಸಿಕ್ಕಿದೆ. ಅತೀ ಕಷ್ಟದ ಕಾಲದಲ್ಲಿ ತವರಿಗೆ ಹೋಗುವುದು ಮನುಷ್ಯನ ಸಾಮಾನ್ಯ ಸಂಗತಿ. ಆದ್ದರಿಂದಲೇ ನೀತಿ-ನಿರ್ಧಾರಗಳಲ್ಲಿ ಅಲ್ಪ ಬದಲಾವಣೆ ಮಾಡಿಕೊಂಡು ವಿನಾಯಿತಿ ನೀಡಲಾಯಿತು

    3 ಕರೊನಾ ಸೋಂಕು ಹಳ್ಳಿಗಳಿಗೂ ಹರಡದಂತೆ ನೋಡಿಕೊಳ್ಳಬೇಕಾದ್ದು ಎಲ್ಲರ ಕರ್ತವ್ಯ. ಅದು ದೊಡ್ಡ ಸವಾಲು ಕೂಡ ಹೌದು. ಸೋಂಕು ವ್ಯಾಪಿಸದಂತೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಪ್ರತಿಯೊಬ್ಬರು ಹೆಚ್ಚು ಸ್ಪಷ್ಟತೆ ಹೊಂದಬೇಕಾಗುತ್ತದೆ.

    4 ಸಾಂಕ್ರಾಮಿಕ ಹರಡುವಿಕೆಗೆ ಸಂಬಂಧಿಸಿದಂತೆ ಈಗ ನಾವು ಸ್ಪಷ್ಟತೆ ಹೊಂದಿದ್ದೇವೆ. ಅದರ ಪ್ರಕಾರ ಸೂಚನೆ ನೀಡಲಾಗುತ್ತಿದೆ. ಕಳೆದ ಕೆಲವು ವಾರಗಳಲ್ಲಿ, ಅಧಿಕಾರಿಗಳು ಜಿಲ್ಲಾ ಹಂತದವರೆಗೆ ಕಾರ್ಯನಿರ್ವಹಣೆಯನ್ನು ಕಂಡುಕೊಂಡಿದ್ದಾರೆ.

    5 ನಿಧಾನವಾಗಿಯಾದರೂ ದೇಶದ ಹಲವಾರು ಭಾಗಗಳಲ್ಲಿ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗುತ್ತಿವೆ. ಮುಂದಿನ ದಿನಗಳಲ್ಲಿ, ಈ ಪ್ರಕ್ರಿಯೆ ಮತ್ತಷ್ಟು ವೇಗ ಪಡೆದುಕೊಳ್ಳುತ್ತದೆ.

    6 ಮುಂದಿನ ದಿನಗಳಲ್ಲಿ ಕರೊನಾ ವಿರುದ್ಧದ ಹೋರಾಟವನ್ನು ಹೆಚ್ಚು ಕೇಂದ್ರೀಕರಿಸಬೇಕಾಗಿದೆ ಎಂಬುದು ಸರ್ಕಾರಗಳ ಮನಸ್ಸಿನಲ್ಲಿರಬೇಕು; ಹರಡುವಿಕೆಯನ್ನು ಕಡಿಮೆ ಮಾಡುವುದರತ್ತ ಗಮನಹರಿಸಬೇಕು.

    7 ಪ್ರತಿಯೊಬ್ಬರೂ ಎರಡು ಗಜ ಅಂತರ ಕಾಯ್ದುಕೊಳ್ಳುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾರೆ ಹಾಗೂ ಮಾನದಂಡಗಳನ್ನು ಪಾಲಿಸುತ್ತಾರೆ, ಮುನ್ನೆಚ್ಚರಿಕೆ ವಹಿಸುತ್ತಾರೆ ಎಂಬುದನ್ನು ಸರ್ಕಾರ ಖಾತ್ರಿ ಮಾಡಿಕೊಳ್ಳುತ್ತಿರಬೇಕು.

    ಗೆದ್ದ ಹೃದಯವನ್ನು ಕೋವಿಡ್​ಗೆ ದಾನ ಮಾಡಿದ ಸಾನಿಯಾ ಮಿರ್ಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts