More

    ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ – ಪರಮೇಶ್ವರ್ ಅಸಾಯಕತೆ

    ತುಮಕೂರು: ಹೇಮಾವತಿ ಎಕ್ಸ್‌ಪ್ರೆಕ್ಸ್ ಲಿಂಕ್ ಕೆನಾಲ್ ಯೋಜನೆಯಿಂದ ಜಿಲ್ಲೆಗೆ ಏನೆಲ್ಲಾ ತೊಂದರೆ ಆಗಲಿದೆ ಎಂಬುದನ್ನು ನಾನು ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ಸಂಪುಟ ಸಭೆಯಲ್ಲಿ ಸ್ಪಷ್ಟಪಡಿಸಿದ್ದೆವು. ಆದರೆ, ಸಂಪುಟ ಸಮಿತಿ ನಮ್ಮೊಬ್ಬರದ್ದೇ ಅಲ್ಲವಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅಸಹಾಯಕತೆ ವ್ಯಕ್ತಪಡಿಸಿದರು.

    ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಗೆ ತೊಂದರೆ ಆಗುವ ಬಗ್ಗೆ ಸಚಿವ ಸಂಪುಟದಲ್ಲಿ ವಿಷಯ ಪ್ರಸ್ತಾಪವಾಗಿತ್ತಾದರೂ ಕುಣಿಗಲ್‌ಗೆ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಮಾಡಬಹುದೆಂದು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಇದು ಸರ್ಕಾರದ ತೀರ್ಮಾನ, ನನ್ನ ತೀರ್ಮಾನವಲ್ಲ ಎಂದು ಸ್ಪಷ್ಟಪಡಿಸಿದರು.

    ಗುಬ್ಬಿ ತಾಲೂಕಿನ ಡಿ. ರಾಂಪುರದ ಬಳಿ ಇರುವ 70ನೇ ಕಿ.ಮೀ.ಯಿಂದ ನೇರವಾಗಿ ಕುಣಿಗಲ್‌ಗೆ ಪೈಪ್‌ಲೇನ್ ಮೂಲಕ ನೀರು ತೆಗೆದುಕೊಂಡು ಹೋಗುವ ಯೋಜನೆ ಕಳೆದ 5-6 ವರ್ಷಗಳಿಂದ ಪ್ರಸ್ತಾವನೆಯಲ್ಲಿತ್ತು. ಇದಕ್ಕೆ ಪರ-ವಿರೋಧ ಸಹ ವ್ಯಕ್ತವಾಗಿತ್ತು. ಈ ಬಾರಿ ಸಂಪುಟದಲ್ಲಿ ವಿಷಯ ಮಂಡಿಸಿ, ಸರ್ಕಾರ ಎಕ್ಸ್‌ಪ್ರೆಸ್ ಕೆನಾಲ್ ಮಾಡಬಹುದೆಂದು ತೀರ್ಮಾನ ತೆಗೆದುಕೊಂಡಿದೆ ಎಂದು ಪರಂ ತಿಳಿಸಿದರು.

    ಈ ಮಧ್ಯೆ ರೈತರು ಎಕ್ಸ್‌ಪ್ರೆಸ್ ಕೆನಾಲ್ ಸ್ಥಗಿತಗೊಳಿಸುವಂತೆ ಕಾಮಗಾರಿ ತಡೆದಿದ್ದಾರೆ. ತಹಸೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟು ಸಿಎಂ ಜತೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬರಬೇಕಾಗಿದೆ. ಅಲ್ಲದೆ, ಡಿಸಿಎಂ, ಜಲಸಂಪನ್ಮೂಲ ಸಚಿವರ ಜತೆಯು ಚರ್ಚಿಸಲಾಗುವುದು. ಕಳೆದ ಜಿಪಂ ಕೆಡಿಪಿ ಸಭೆಯಲ್ಲೂ ಸಹ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಸ್ಥಗಿತಗೊಳಿಸುವ ಸಂಬಂಧ ನಿರ್ಣಯ ಕೈಗೊಳ್ಳಲಾಗಿತ್ತು. ಸಭೆಯು ತೀರ್ಮಾನ ಮಾಡಿದಂತೆ ಸಭಾ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದೇವೆ ಸ್ಪಷ್ಟಪಡಿಸಿದರು.

    ತುಮಕೂರು ಜಿಲ್ಲೆಗೆ ಕುಡಿಯುವ ನೀರು ಹಾಗೂ ಕೃಷಿ ಅಚ್ಚುಕಟ್ಟು ಪ್ರದೇಶಗಳಿಗೆ ಗೊರೂರು ಹೇಮಾವತಿ ಅಣೆಕಟ್ಟೆಯಿಂದ ಪ್ರತೀ ವರ್ಷ 25 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆಯಾದರೂ ಈವರೆಗೆ 18 ರಿಂದ 19 ಟಿಎಂಸಿಯಷ್ಟು ನೀರು ನಮ್ಮ ಜಿಲ್ಲೆಗೆ ಈವರೆಗೆ ಹರಿದು ಬಂದಿಲ್ಲ. ಸುಮಾರು 14 ರಿಂದ 15 ಟಿಎಂಸಿ ನೀರು ಬಂದಿರಬಹುದು ಅಷ್ಟೇ. ನಮ್ಮ ಪಾಲಿನ ನೀರನ್ನೇ ಪೂರ್ಣವಾಗಿ ಪಡೆಯಲಾಗಿಲ್ಲ. ಗುಬ್ಬಿ , ತುರುವೇಕೆರೆ, ತಿಪಟೂರು ತಾಲೂಕಿಗೆ ಕುಡಿಯುವ ನೀರಿಗೆ ಹಂಚಿಕೆಯಾಗಿದೆ. ಇಲ್ಲಿಂದ ಮುಂದೆ ಕುಣಿಗಲ್ ಕೆರೆಗೂ ಹೋಗಲು ಅವಕಾಶ ಮಾಡಿಕೊಡಲಾಗಿದೆ. ಮಧ್ಯೆದಲ್ಲಿ ಹೆಬ್ಬೂರಿಗೂ ಏತನೀರಾವರಿ ಮೂಲಕ ನೀರು ಹರಿಸಲು ಅವಕಾಶ ಮಾಡಿಕೊಡಲಾಗಿದೆ. ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ವಿರೋಧ ಹಿನ್ನೆಲೆ ಸಿಎಂ, ಡಿಸಿಎಂ ಜತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts