More

    ವಿವೇಚನೆಯಿಂದ ನಿರ್ಧರಿಸಿ, ಶೈಕ್ಷಣಿಕ ವರ್ಷ ಆರಂಭಕ್ಕೆ ಹಲವು ತೊಡಕುಗಳು

    ಕರೊನಾ ಸೋಂಕಿನ ಹಾವಳಿ ಶೈಕ್ಷಣಿಕ ವ್ಯವಸ್ಥೆಯನ್ನೇ ಅಲುಗಾಡಿಸಿದೆ. ರಾಜ್ಯದಲ್ಲಂತೂ ಹತ್ತನೇ ತರಗತಿಯ ಮತ್ತು ಪಿಯುಸಿ ದ್ವಿತೀಯ ವರ್ಷದ ಒಂದು ವಿಷಯಕ್ಕೆ ಪರೀಕ್ಷೆ ನಡೆಯುವುದು ಬಾಕಿ ಇದೆ. ಯಾವಾಗ ಪರೀಕ್ಷೆ ವೇಳಾಪಟ್ಟಿ ಪ್ರಕಟಗೊಳ್ಳಲಿದೆ ಎಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಮತ್ತೊಂದೆಡೆ, ಶಾಲೆ, ಕಾಲೇಜುಗಳು ಯಾವಾಗ ಆರಂಭವಾಗಲಿವೆ, ಪ್ರವೇಶಾತಿ ಹೇಗೆ ನಡೆಯಲಿದೆ ಎಂಬ ಕಳವಳವೂ ಪಾಲಕರು ಮತ್ತು ಮಕ್ಕಳನ್ನು ಕಾಡುತ್ತಿದೆ. ಲಾಕ್​ಡೌನ್ ಸಡಿಲಿಕೆಯಾಗಿದ್ದರೂ, ಶಾಲೆ-ಕಾಲೇಜು ಪುನರಾರಂಭಿಸುವ ಸ್ಥಿತಿ ಇನ್ನೂ ಸೃಷ್ಟಿಯಾಗಿಲ್ಲ. ಒಂದು ವೇಳೆ ಅವಸರಕ್ಕೆ ಬಿದ್ದು ಶೈಕ್ಷಣಿಕ ಸಂಸ್ಥೆಗಳು ತೆರೆದು ಅಲ್ಲಿ ಆಕಸ್ಮಾತ್ ಸೋಂಕು ಕಾಣಿಸಿಕೊಂಡರೆ, ನಿಯಂತ್ರಣಕ್ಕೆ ತರುವುದು ತುಂಬ ಕಷ್ಟವಾಗುತ್ತದೆ. ಹಾಗಂತ, ತುಂಬ ದಿನಗಳವರೆಗೆ ಕೈಚೆಲ್ಲಿಯೂ ಕೂಡುವಂತಿಲ್ಲ. ಶೈಕ್ಷಣಿಕ ವ್ಯವಸ್ಥೆ ಮುಂದುವರಿಸುವುದು ಅನಿವಾರ್ಯವೂ ಹೌದು.

    ಕರ್ನಾಟಕದಲ್ಲಿ 1.09 ಕೋಟಿ ಮಕ್ಕಳ ಭವಿಷ್ಯ ನಿರ್ಧಾರಿತವಾಗಬೇಕಿದೆ. ಈ ಪೈಕಿ 65 ಲಕ್ಷ ಮಕ್ಕಳು ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಕ್ಷೇತ್ರದ ವ್ಯಾಪ್ತಿಗೆ ಬರುತ್ತಾರೆ. ಶೈಕ್ಷಣಿಕ ವ್ಯವಸ್ಥೆಯನ್ನು ಕೊಂಚ ನಿಧಾನಿಸಿಯೇ ಪುನರಾರಂಭ ಮಾಡಬೇಕು ಎಂದು ಚಿಂತನೆ ನಡೆಸುತ್ತಿರುವ ಕೇಂದ್ರ ಸರ್ಕಾರ ಪರ್ಯಾಯ ಅವಕಾಶ ಹಾಗೂ ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಶೈಕ್ಷಣಿಕ ರಂಗದ ತಜ್ಞರೊಂದಿಗೆ ಚರ್ಚೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಎರಡು ಸಮಿತಿಗಳನ್ನು ರಚಿಸಿದೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಇವು ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಹಲವು ಪ್ರಶ್ನೆ, ಅನುಮಾನಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿವೆ.

    ಒಂದು ವೇಳೆ ಶಾಲೆ ಆರಂಭಿಸಿದರೂ ಮಾಸ್ಕ್ ಕಡ್ಡಾಯವಾಗಬೇಕು, ತರಗತಿಗಳಲ್ಲಿ ಮಕ್ಕಳ ಸಂಖ್ಯೆ ಶೇಕಡ 50ಕ್ಕೆ ಇಳಿಸಬೇಕು. ಪಠ್ಯವನ್ನು ಸಂಕ್ಷಿಪ್ತ, ಸರಳಗೊಳಿಸಬೇಕು ಎಂಬ ಪ್ರಮುಖ ಸಲಹೆಗಳು ಬಂದಿವೆ. ಒಟ್ಟಾರೆ, ಇದು ತುಂಬ ಸೂಕ್ಷ್ಮವಾದ ವಿಚಾರ. ಹೊಸ ಶೈಕ್ಷಣಿಕ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದಾದರೂ ನಿರ್ಧಾರಕ್ಕೆ ಬರುವ ಒತ್ತಡ ಸರ್ಕಾರದ ಮೇಲಿದೆ. ಪರೀಕ್ಷೆ, ಫಲಿತಾಂಶ ಘೋಷಣೆಯ ಪ್ರಕ್ರಿಯೆಯೂ ನಡೆಯಬೇಕಿದೆ. ಈ ನಿಟ್ಟಿನಲ್ಲಿ ವಿವೇಕಯುತ ನಿರ್ಧಾರ ಕೈಗೊಳ್ಳುವುದು ತುಂಬ ಅತ್ಯಗತ್ಯ. ಶೈಕ್ಷಣಿಕ ವರ್ಷದಲ್ಲಿ ಒಂದಿಷ್ಟು ಏರುಪೇರಾದರೂ, ಅದನ್ನು ನಿರ್ವಹಿಸಲು ಅವಕಾಶಗಳಿವೆ. ಈಗಾಗಲೇ 1ರಿಂದ 9ನೇ ತರಗತಿ ಮಕ್ಕಳಿಗೆ ಪರೀಕ್ಷೆ ನಡೆಸದೆ ಮುಂದಿನ ತರಗತಿಗೆ ಬಡ್ತಿ ನೀಡಲಾಗಿದೆ. ಈಗ ಮುಖ್ಯವಾದ ಆದ್ಯತೆ ಸೋಂಕನ್ನು ನಿಯಂತ್ರಿಸುವುದು. ಸರ್ಕಾರ ಮಕ್ಕಳ ಹಿತರಕ್ಷಣೆಯನ್ನು ಮೊದಲ ಆದ್ಯತೆಯಾಗಿಸುವುದು ಸೂಕ್ತವಾದೀತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts