ನ್ಯೂಸ್

ಎಲ್ಲರೂ ಬೇಲಿ ಹಾರುತ್ತಿದ್ದಾರೆ ಎಂದ ಖುಷ್​​ಬೂ; ಉಡುಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಹೀಗಂದಿದ್ದೇಕೆ?

ಬೆಂಗಳೂರು: ಉಡುಪಿ ಕಾಲೇಜಿನ ಹಾಸ್ಟೆಲ್​ ಟಾಯ್ಲೆಟ್​ನಲ್ಲಿ ಮೊಬೈಲ್​ಫೋನ್​ ಇಟ್ಟು ವಿಡಿಯೋ ಮಾಡಿದ್ದ ಪ್ರಕರಣ ಇನ್ನೂ ಗಂಭೀರವಾಗಿದ್ದು, ನಿತ್ಯವೂ ಏನಾದರೊಂದು ಬೆಳವಣಿಗೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್​ಬೂ ಇದೀಗ ಇನ್ನೊಂದು ಹೇಳಿಕೆ ನೀಡಿರುವುದು ಗಮನ ಸೆಳೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ನಟಿ ಖುಷ್​ಬೂ ಉಡುಪಿಗೆ ಭೇಟಿ ನೀಡಿದ್ದು, ಎಸ್​ಪಿ-ಡಿಸಿ ಹಾಗೂ ಕಾಲೇಜಿನ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಿದ್ದರು. ಆ ಬಳಿಕ ಅವರು ನೀಡಿದ್ದ ಹೇಳಿಕೆಗಳಿಗೆ ವ್ಯಾಪಕ ಟೀಕೆ, ಆಕ್ಷೇಪಗಳು ವ್ಯಕ್ತವಾಗಿದ್ದವು.

ಆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಖುಷ್​ಬೂ ಗುಪ್ತವಾಗಿ ರೆಕಾರ್ಡ್ ಮಾಡಲಾಗಿದೆ ಎಂಬ ವದಂತಿಗಳಿವೆ ಎಂಬಿತ್ಯಾದಿ ಆಗಿ ಮಾತನಾಡಿದ್ದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವ್ಯಕ್ತಿಯೊಬ್ಬರು, ಖುಷ್​ಬೂ ಹೇಳಿಕೆ ಇರುವ ಮಾಧ್ಯಮದ ವಿಡಿಯೋ ಕೋಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.

ಇದಕ್ಕೆ ನಟಿ ಖುಷ್​ಬೂ ಪ್ರತಿಕ್ರಿಯೆ ನೀಡಿ ತಮ್ಮ ಅನಿಸಿಕೆಯನ್ನು ಟ್ವೀಟ್ ಮಾಡಿದ್ದಾರೆ. ಸಮಸ್ಯೆ ಏನು ಎಂಬ ಬಗ್ಗೆ ಯಾಕೆ ಎಲ್ಲರೂ ಕಣ್ಮುಚ್ಚಿ ಕುಳಿತಿದ್ದಾರೆ ಇದು ಮೊಬೈಲ್​ಫೋನ್​ನಲ್ಲಿ ತೆಗೆದ ವೀಡಿಯೊದ ಬಗ್ಗೆ. ಆವರಣದಲ್ಲಿ ಪತ್ತೆಯಾದ ಗುಪ್ತ ಕ್ಯಾಮೆರಾ ಮತ್ತು ನಕಲಿ ವೀಡಿಯೊಗಳ ವದಂತಿಗಳು ತನಿಖೆಗೆ ಅಡ್ಡಿಯಾಗಿವೆ ಎಂದಿರುವ ಖುಷ್​ಬೂ ಎಲ್ಲರೂ ಬೇಲಿ ಹಾರುವುದನ್ನು ನೋಡುವುದಕ್ಕೆ ತುಂಬಾ ಬೇಸರವಾಗುತ್ತಿದೆ ಎಂದಿದ್ದಾರೆ. ತನಿಖೆಗಳು ನಡೆಯುತ್ತಿವೆ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ ಮತ್ತು ಇದರಲ್ಲಿ ನಿಮಗೆ ಎಲ್ಲಿ ತೀರ್ಮಾನ ಕಾಣಿಸುತ್ತಿದೆ ಎಂದು ಕೇಳಿದ್ದಾರೆ.