ವಿಶಾಖಪಟ್ಟಣಂ: ನನ್ನಿಷ್ಟದ ಬಟ್ಟೆ ಧರಿಸಲು ಬಿಡುತ್ತಿಲ್ಲ ಎಂದು ಆರೋಪಿಸಿ ಬಾಲಕನೊಬ್ಬ ತನ್ನ ಮಲತಾಯಿ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಆಂಧ್ರ ಪ್ರದೇಶದ ಎಲ್ಲೂರು ಜಿಲ್ಲೆಯ ಕೊತ್ತಪೇಟೆಯಲ್ಲಿ ನಡೆದಿದೆ.
ಬಾಲಕ ದಿನೇಶ್ ಅವರ ತಾಯಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಅವರ ತಂದೆ ಮರು ಮದುವೆ ಆಗಿದ್ದು, ಅಂದಿನಿಂದ ದಿನೇಶ್ಗೆ ಸಮಸ್ಯೆಗಳು ಆರಂಭವಾಗಿವೆಯಂತೆ. ಆಗಾಗ ದಿನೇಶ್ ಅವರ ಮಲತಾಯಿ ಕಿರುಕುಳ ನೀಡುತ್ತಿದ್ದಾರೆ ಎಂದು ಬಾಲಕ ಆರೋಪಿಸಿದ್ದಾನೆ.
ಇತ್ತೀಚೆಗೆ ದಿನೇಶ್ ಸ್ನೇಹಿತನ ಹುಟ್ಟುಹಬ್ಬ ಆಚರಣೆ ನಡೆಯಿತು. ಈ ಸಮಾರಂಭಕ್ಕೆ ತೆರಳಲು ದಿನೇಶ್ ಸಿದ್ಧತೆ ಮಾಡಿಕೊಳ್ಳುತ್ತಿದ್ದನು. ಬಿಳಿ ಶರ್ಟ್ ಕೊಡುವಂತೆ ಮಲತಾಯಿಯನ್ನು ಕೇಳಿದ್ದಾನೆ. ಆದರೆ, ಆಕೆ ಬಟ್ಟೆ ಕೊಡಲು ನಿರಾಕರಿಸಿದ್ದಲ್ಲದೆ, ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹೋಗದಂತೆ ಬೆದರಿಕೆ ಹಾಕಿದ್ದಾಳೆ. ಇದರಿಂದ ಬೇಸರಗೊಂಡ ಬಾಲಕ ಬಟ್ಟೆ ಧರಿಸದೇ ಕೇವಲ ಟವೆಲ್ನಲ್ಲೇ ಸೀದಾ ಎಲ್ಲೂರು ಟೌನ್ ಪೊಲೀಸ್ ಠಾಣೆಗೆ ತೆರಳಿ ಮಲತಾಯಿಯ ವಿರುದ್ಧ ದೂರು ನೀಡಿದ್ದಾನೆ.
ಬಾಲಕನ ಮಾತು ಕೇಳಿ ಪೊಲೀಸರೇ ಒಂದು ಕ್ಷಣ ಹುಬ್ಬೇರಿಸಿದರು. ಬಳಿಕ ಸರ್ಕಲ್ ಇನ್ಸ್ಪೆಕ್ಟರ್ ಪಿ. ಚಂದ್ರಶೇಖರ್ ಅವರು ತಕ್ಷಣ ಬಾಲಕನ ಪಾಲಕರನ್ನು ಠಾಣೆಗೆ ಕರೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ದಿನೇಶ್ ಕಡೆಗಿನ ನಿಮ್ಮ ವರ್ತನೆಯನ್ನು ಬದಲಸಿಕೊಳ್ಳಿ ಎಂದು ಮಲತಾಯಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಹಾಗೇ ಪಾಲಕರ ಜೊತೆ ವಿನಯದಿಂದ ಮಾತನಾಡುವಂತೆ ದಿನೇಶ್ಗೆ ಪೊಲೀಸರು ಹೇಳಿ ಕಳುಹಿಸಿದ್ದಾರೆ. (ಏಜೆನ್ಸೀಸ್)