

ಬೆಂಗಳೂರು: ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಕೇರಳ, ತೆಲಂಗಾಣ, ಗೋವಾ ಹಾಗೂ ತಮಿಳುನಾಡು ಸೇರಿ ದೇಶದ ಹಲವು ರಾಜ್ಯಗಳಲ್ಲಿ ಮುಂದಿನ ಐದು ದಿನ ತಾಪಮಾನ ಹೆಚ್ಚಳ ಬಗ್ಗೆ ಭಾರತೀಯ ಹವಾಮಾನ ಇಲಾಖೆ( ಐಎಂಡಿ) ಎಚ್ಚರಿಕೆ ನೀಡಿದ ಬೆನ್ನಲ್ಲೇ ಕರ್ನಾಟಕದಲ್ಲೂ ಉಷ್ಣಾಂಶ ಏರಿಕೆ ಕಂಡಿದೆ.
ಇತ್ತೀಚಿಗಷ್ಟೇ ಸಂಭವಿಸಿದ್ದ ಚಂಡಮಾರುತವು ತೇವಾಂಶ ಭರಿತ ಮೋಡಗಳನ್ನು ಸೆಳೆದಿರುವುದು, ಗಾಳಿಯ ವೇಗ ಇಲ್ಲದಿರುವುದು ಹಾಗೂ ವಾತಾವರಣದಲ್ಲಿ ತೀವ್ರ ತೇವಾಂಶ ಕೊರತೆಯಿಂದಾಗಿ ರಾಜ್ಯದಲ್ಲಿ ಬಿಸಿಲಿನ ಝಳ ಮತ್ತೊಮ್ಮೆ ಹೆಚ್ಚಾಗುತ್ತಿದೆ. ಬೆಳಗ್ಗೆ 8 ಗಂಟೆಗೆ ರಣ ಬಿಸಿಲು ಸುಡಲಾರಂಭಿಸಿದೆ. ಇಡೀ ದಿನ ಕಾಣಿಸಿಕೊಳ್ಳುವ ಬಿರುಬಿಸಿಲುಗೆ ಜನರು ತತ್ತರಿಸುವಂತಾಗಿದೆ. ಪ್ರಸ್ತುತ ತಿಂಗಳ ಮೊದಲ ವಾರದಲ್ಲಿ ಸುರಿದ ಮಳೆಯಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಕುಸಿತವಾಗಿತ್ತು. ಆದರೆ, ಚಂಡಮಾರುತ ಬಂದು ಹೋದ ಬಳಿಕ ವಾತಾವರಣದಲ್ಲಿ ದಿಢೀರ್ ಬದಲಾವಣೆಯಾಗಿದ್ದು, ಇಳಿಕೆಯಾಗಿದ್ದ ತಾಪಮಾನ ನಿಧಾನವಾಗಿ ಏರತೊಡಗಿದೆ.
ಈ ತಿಂಗಳ ಮೊದಲ ವಾರ ರಾಯಚೂರು, ವಿಜಯಪುರ, ಕಲಬುರಗಿ, ಬಳ್ಳಾರಿ ಮತ್ತು ಹಂಪೆಯಲ್ಲಿ 36-37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಬುಧವಾರ 40 ಡಿಗ್ರಿ ಅಸುಪಾಸಿನಲ್ಲಿ ಉಷ್ಣಾಂಶ ವರದಿಯಾಗಿದ್ದು, ಈ ಜಿಲ್ಲೆಗಳಲ್ಲಿ ಸರಾಸರಿ 3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆಯಾಗಿದೆ. ಅದೇರೀತಿ, ಮೈಸೂರು, ಮಂಡ್ಯ, ತುಮಕೂರು, ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 33-34 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಈಗ 36-37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ವರದಿಯಾಗಿದ್ದು, ಬಿರು ಬಿಸಿಲು ಹೆಚ್ಚಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಸರಾಸರಿ 2-3 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಳವಾಗುತ್ತಿದೆ.
ಉಷ್ಣ ಮಾರುತ: ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಕೇರಳ, ತೆಲಂಗಾಣ, ಗೋವಾ ಹಾಗೂ ತಮಿಳುನಾಡು ಸೇರಿ ದೇಶದ ಹಲವು ರಾಜ್ಯಗಳಲ್ಲಿ ಉಷ್ಣ ಮಾರುತ ಉಂಟಾಗಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ. ಈ ವೇಳೆ ದೀರ್ಘಕಾಲದವರೆಗೆ ಹೊರೆಗೆ ಕೆಲಸ ಮಾಡುವ ಜನರಲ್ಲಿ ಶಾಖದಿಂದ ದುಷ್ಪಾರಿಣಾಮ ಆಗುವ ಸಾಧ್ಯತೆ ಇದೆ. ಹೀಗಾಗಿ, ಜನರು ಮಧ್ಯಾಹ್ನದ ವೇಳೆ ವಿಶ್ರಾಂತಿ ಪಡೆಯುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ. ತೀವ್ರವಾದ ಬಿಸಿಲಿನ ಸಮಯದಲ್ಲಿ ಮಕ್ಕಳು, ವೃದ್ಧರು ಹಾಗೂ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಮನೆಗಳಿಂದ ಹೊರಗೆ ಹೋಗಬಾರದು. ಅದೇರೀತಿ, ಕರ್ನಾಟಕದಲ್ಲೂ ಬಿಸಿಗಾಳಿ ಬಿಸಲಾರಂಭಿಸಿದೆ. ಇದರಿಂದ, ಜನರ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುವಂತಾಗಿದೆ.
ಎಚ್ಚರ ಅಗತ್ಯ: ಕಳೆದ ತಿಂಗಳು ಮಹಾರಾಷ್ಟ್ರದ ನವಿ ಮುಂಬೈನ ಖಾರ್ಗಾರ್‌ನಲ್ಲಿ ‘ಮಹಾರಾಷ್ಟ್ರ ಭೂಷಣ್’ ಪ್ರಶಸ್ತಿ ಸಮಾರಂಭದಲ್ಲಿ ಬಿಸಿಲು ಬಗೆಯಿಂದ 13 ಮಂದಿ ಮೃತಪಟ್ಟಿದ್ದರು. ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದರು. ಈ ವೇಳೆ ಕೆಲವರು ಸನ್ ಸ್ಟ್ರೋಕ್‌ಗೆ ತುತ್ತಾಗಿ ಪ್ರಾಣ ಬಿಟ್ಟಿದ್ದರು. ಕೆಲವರು ಬಿಸಲು ಬೇಗೆಗೆ ಬಸವಳಿದಿದ್ದರು. ವಿಪರೀತ ಶಾಖದಿಂದಾಗಿ ಅನೇಕ ಮಹಿಳೆಯರು ಸ್ಥಳದಲ್ಲಿಯೇ ಕುಸಿದು ಬಿದ್ದರು. ಕರ್ನಾಟಕದಲ್ಲಿಯೂ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದೆ. ತಾಪಮಾನ ಹೆಚ್ಚಾದಂತೆ ಜನರಿಗೆ ತಲೆನೋವು, ವಾಂತಿ, ನಿರ್ಜಲೀಕರಣ, ಸುಸ್ತು ಮತ್ತು ಬೆವರು ಸೇರಿ ಇತರೆ ಆರೋಗ್ಯ ಸಮಸ್ಯೆಗಳು ಕಾಡಲಿವೆ.