ನ್ಯೂಸ್

'ಡಿ.ಕೆ.ಶಿವಕುಮಾರ್ ಕಾಣೆಯಾಗಿದ್ದಾರೆ, ದಯವಿಟ್ಟು ಹುಡುಕಿಕೊಡಿ': ಪೋಸ್ಟರ್ ಹರಿಬಿಟ್ಟ ಬಿಜೆಪಿ

Ravikanth Kundapura

ಬೆಂಗಳೂರು: ಬಿಜೆಪಿ ಆಡಳಿತವಿದ್ದಾಗ ಆ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಬಂದಾಗ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಆಗ ಅವರ ಫೋಟೋದೊಂದಿಗೆ ಪೇಟಿಎಂ ಮಾದರಿಯಲ್ಲಿ ಪೇಸಿಎಂ ಎಂಬ ಪೋಸ್ಟರ್ ರಚಿಸಿ ಕಾಂಗ್ರೆಸ್​ ಎಲ್ಲೆಡೆ ಅಂಟಿಸಿ, ಹರಿಬಿಟ್ಟು ಸಂಚಲನ ಸೃಷ್ಟಿಸಿತ್ತು.

ಇದೀಗ ಅದೇ ಮಾದರಿಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ತಿರುಗಿಬಿದ್ದಿದ್ದು, ಉಪ ಮುಖ್ಯಮಂತ್ರಿ ಅವರನ್ನೇ ಕಾಣೆ ಆಗಿಸಿದೆ. ಅರ್ಥಾತ್, 'ಡಿ.ಕೆ.ಶಿವಕುಮಾರ್​ ಕಾಣೆಯಾಗಿದ್ದಾರೆ, ದಯವಿಟ್ಟು ಹುಡುಕಿಕೊಂಡಿ' ಎಂದು ಕಾಣೆಯಾದವರ ಜಾಹೀರಾತು ಮಾದರಿಯಲ್ಲಿ ಪೋಸ್ಟರ್​ ರಚಿಸಿ ಹರಿಬಿಟ್ಟು ತಿರುಗೇಟು ನೀಡಿದೆ.

"ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ‘ದೊಡ್ಡಮಟ್ಟದಲ್ಲಿ ಸಹಕರಿಸಿದ’ ಋಣವನ್ನು ತೀರಿಸಲು ಹಾಗೂ ಲೋಕಸಭಾ ಚುನಾವಣೆಯ ಬಳಿಕ ಸಿಎಂ ಕುರ್ಚಿಗೆ ಲಾಬಿ ಮಾಡಲು, ಕಾವೇರಿಯನ್ನು ಸ್ಟಾಲಿನ್‌ ನಾಡಿಗೆ ಬೇಕಾಬಿಟ್ಟಿಯಾಗಿ ಹರಿಬಿಟ್ಟು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್​ ನಾಪತ್ತೆಯಾಗಿದ್ದಾರೆ, ದಯವಿಟ್ಟು ಹುಡುಕಿಕೊಡಿ.." ಎಂದು ಡಿ.ಕೆ.ಶಿವಕುಮಾರ್ ಫೋಟೋ ಇರುವ ಪೋಸ್ಟರ್​ನೊಂದಿಗೆ ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ಮೂಲಕ ಕಾಂಗ್ರೆಸ್​-ಬಿಜೆಪಿ ನಡುವಿನ ಸಂಘರ್ಷ ಮತ್ತೊಂದು ಮಜಲಿಗೆ ತಲುಪಿದ್ದು, ಎರಡೂ ಪಕ್ಷಗಳು ಪರಸ್ಪರ ದೋಷಾರೋಪಣೆಗೆ ವಿಭಿನ್ನ, ವಿನೂತನ ತಂತ್ರಗಳನ್ನು ಹೆಣೆಯುತ್ತಿವೆ. ಪರಿಣಾಮವಾಗಿ, ರಾಜಕೀಯ ಆರೋಪ-ಪ್ರತ್ಯಾರೋಪಗಳು ತೀವ್ರವಾಗಿ ವ್ಯಕ್ತವಾಗುತ್ತಿದ್ದು, ಇದಕ್ಕೆ ಆಯಾಪಕ್ಷಗಳ ಬೆಂಬಲಿಗರೂ ದನಿಗೂಡಿಸುತ್ತಿರುವ ಮೂಲಕ, ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗುತ್ತಿದೆ.