ನ್ಯೂಸ್

ಅವರನ್ನು ಟೆರರಿಸ್ಟ್ ಅಂತ ಈಗಲೇ ಹೇಳಲು ಸಾಧ್ಯವಿಲ್ಲ: ಗೃಹಸಚಿವ ಪರಮೇಶ್ವರ್

ಬೆಂಗಳೂರು: ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿ ಆಗಿದ್ದರೆನ್ನಲಾದ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಇಂದು ಬೆಂಗಳೂರಿನಲ್ಲಿ ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿಗಳಿಂದ ಹಲವಾರು ರೋಚಕ ಸಂಗತಿಗಳು ಬಹಿರಂಗಗೊಂಡಿವೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಅವರನ್ನು ಟೆರರಿಸ್ಟ್ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಹೆಬ್ಬಾಳ ಠಾಣೆ ವ್ಯಾಪ್ತಿಯಲ್ಲಿ 5 ಜನ ಅಪರಾಧಿಗಳನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಏಳು ಕಂಟ್ರಿಮೇಡ್​ ಪಿಸ್ತೂಲ್, ವಾಕಿ-ಟಾಕಿ, ಆಯುಧಗಳು ಸಿಕ್ಕಿವೆ. ವಿಚಾರಣೆ ಮಾಡಿದಾಗ ಕೇಂದ್ರ ಕಾರಾಗೃಹದ ಜೊತೆ ಸಂಪರ್ಕ ಹೊಂದಿದ್ದೂ ಗೊತ್ತಾಗಿದೆ ಎಂದು ಸಚಿವರು ಹೇಳಿದ್ದಾರೆ.

ಬಂಧಿತರು ಕೆಲವು ಕೃತ್ಯ ಮಾಡುವ ಬಗ್ಗೆ ಮಾಹಿತಿ ಸಿಕ್ಕಿದೆ. ಇದು ಬೆಂಗಳೂರು ಹಾಗೂ ಇತರೆಡೆಗೆ ಅಪಾಯಕಾರಿ ವಿಚಾರ. ಅವರನ್ನು ವಿಚಾರಣೆ ಮಾಡಿ ಟೆರರಿಸ್ಟ್ ಕನೆಕ್ಷನ್ ಇದೆಯಾ ಅಂತ ನೋಡುತ್ತಿದ್ದಾರೆ. ಅದನ್ನು ನೋಡಿ ಕ್ರಮ ಕೈಗೊಳ್ಳುತ್ತೇವೆ. ಅವರನ್ನು ಟೆರರಿಸ್ಟ್ ಅಂತ ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಗೃಹಸಚಿವರು ಪ್ರತಿಕ್ರಿಯಿಸಿದ್ದಾರೆ.

ಅವರು ವಾಕಿಟಾಕಿ ಯಾಕೆ ಉಪಯೋಗಿಸುತ್ತಿದ್ದರು? ಅದನ್ನು ಯಾಕೆ ವಿರೂಪ ಮಾಡಿದ್ದರು ಎನ್ನುವ ನಿಟ್ಟಿನಲ್ಲಿಯೂ ತನಿಖೆ ನಡೆಯಲಿದೆ. ಮೊದಲು ನಮ್ಮ ಪೊಲೀಸರು ತನಿಖೆ ನಡೆಸಿದ ಬಳಿಕ ಎನ್​ಐಎ ತನಿಖೆ ಆಗ್ರಹ ವಿಚಾರ ಎಂದೂ ಪರಮೇಶ್ವರ್ ತಿಳಿಸಿದರು.