ಬೆಂಗಳೂರು: ಭಾರೀ ಮಳೆ ಸುರಿದಾಗ ನಗರದ ಕೆಲವು ಅಂಡರ್ಪಾಸ್ಗಳು ಮೃತ್ಯುಕೂಪಗಳಾಗುತ್ತಿವೆ. ಭಾನುವಾರ (ಮೇ 21) ಕೆ.ಆರ್.ವೃತ್ತದ ಅಂಡರ್ಪಾಸ್ನ ನೀರಿನಲ್ಲಿ ಕಾರು ಸಿಲುಕಿಕೊಂಡು ಅದರಲ್ಲಿದ್ದ ಮಹಿಳಾ ಟೆಕ್ಕಿ ಭಾನುರೇಖಾ ಮೃತಪಟ್ಟಿದ್ದರು. ಅದೃಷ್ಟವಶಾತ್ ಇನ್ನುಳಿದ ಅವರ ಕುಟುಂಬದ ಸದಸ್ಯರ ಪಾರಾಗಿದ್ದರು. ಇದೀಗ ಈ ಅವಘಡದಿಂದ ಬಿಬಿಎಂಪಿ ಎಚ್ಚೆತ್ತುಕೊಂಡಿರುವಂತೆ ಕಾಣುತ್ತಿದೆ.
ಬೆಂಗಳೂರಿನ ಎಲ್ಲ ಅಂಡರ್ಪಾಸ್ ಗಳ ಸದ್ಯದ ಪರಿಸ್ಥಿತಿಯ ಬಗ್ಗೆ ಬಿಬಿಎಂಪಿ ಸಂಪೂರ್ಣ ಮಾಹಿತಿ ಕಲೆಹಾಕಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 53 ಅಂಡರ್ಪಾಸ್ಗಳಿವೆ. ಅದರಲ್ಲಿ 18 ರೈಲ್ವೇ ಬ್ರಿಡ್ಜ್ ಅಂಡರ್ಪಾಸ್ ಹಾಗೂ 35 ರಸ್ತೆ ಅಂಡರ್ಪಾಸ್ಗಳಾಗಿವೆ. ಇದೀಗ ಎಲ್ಲ ಅಂಡರ್ಪಾಸ್ಗಳ ದುರಸ್ತಿ ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ. ಮಳೆ ನೀರು ಸರಾಗವಾಗಿ ಹರಿಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದೆ.
ಅಂಡರ್‌ಪಾಸ್‌ಗಳಲ್ಲಿ ಬಿಬಿಎಂಪಿ ತೆಗೆದುಕೊಳ್ಳಲು ಉದ್ದೇಶಿಸಲಾಗಿರುವ ಪ್ರಮುಖ ಕ್ರಮಗಳು ಈ ಕೆಳಕಂಡಂತಿವೆ
1 . ರಸ್ತೆಯ ಅಕ್ಕ ಪಕ್ಕದಲ್ಲಿ ಬೀಳುವ ಎಲ್ಲಾ ಮಳೆ ನೀರು ಕೆಳಸೇತುವೆಗೆ ಹೋಗದಂತೆ ಕೆಳಸೇತುವೆಯ ಏರುವ ಮತ್ತು ಇಳಿಯುವ ರಾಂಪ್ ಮುಂಭಾಗದಲ್ಲಿ ಪ್ರತ್ಯೇಕ ಚರಂಡಿಯನ್ನು ನಿರ್ಮಿಸಿ ನೇರವಾಗಿ ರಾಜಕಾಲುವೆಗೆ ಸಂಪರ್ಕ ಕಲ್ಪಿಸುವುದು.
2. ರಸ್ತೆಯ ಮೇಲಿನ ಮಳೆ ನೀರು ಕೆಳಸೇತುವೆಗೆ ಹೋಗದಂತೆ ರಾಂಪ್ ಮುಂಭಾಗದಲ್ಲಿ ಪ್ರತ್ಯೇಕವಾಗಿ ಚರಂಡಿಯನ್ನು ನಿರ್ಮಿಸುವ ಜೊತೆಗೆ ಒಂದು ರಸ್ತೆ ಉಬ್ಬರವನ್ನು ಸಹ ನಿರ್ಮಿಸುವುದು.
3. ಕೆಳಸೇತುವೆಯ ಕೆಳಭಾಗದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಗಳನ್ನು ಅಳವಡಿಸುವುದು.
4. Vertical Clearance Gauge Beam ಅನ್ನು ಆಳವಡಿಸಿ ಅತೀ ಪ್ರವಾಹ ಉಂಟಾದ ತುರ್ತು ಸಂಧರ್ಭಗಳಲ್ಲಿ ಒಂದು ಬೂಮ್ ಬ್ಯಾರಿಯರ್ ಅನ್ನು ಸಹ ನಿರ್ಮಿಸುವುದು ಮತ್ತು ಅಗತ್ಯ ಸಂದರ್ಭದಲ್ಲಿ ಬಳಸುವುದು.
5. ಕೆಳಸೇತುವೆಯ ವಾಹನ ನಿರ್ಬಂಧ ಪಡಿಸುವ ಕ್ರಮವನ್ನು ಸಂಚಾರ ಪೋಲಿಸ್ ಇಲಾಖೆಯ ಸಹಯೋಗದಿಂದ ನಿರ್ವಹಣೆ ಮಾಡುವುದು.
15 ದಿನಗಳಲ್ಲಿ ಈ ಎಲ್ಲ ಕ್ರಮಗಳನ್ನು ಪೂರ್ಣಗೊಳಿಸಲು ಬಿಬಿಎಂಪಿ ಆದೇಶಿಸಿದೆ. (ದಿಗ್ವಿಜಯ ನ್ಯೂಸ್)