ವಿಜಯವಾಡ: ಅಧಿಕಾರ ದುರ್ಬಳಕೆ ಪ್ರಕರಣಗಳು ನಮ್ಮ ದೇಶದಲ್ಲಿ ಹೊಸದೇನಲ್ಲ. ಒಬ್ಬರ ಅಧಿಕಾರವನ್ನು ಇಡೀ ಕುಟುಂಬ ದುರ್ಬಳಕೆ ಮಾಡಿಕೊಳ್ಳುವ ಸಾಕಷ್ಟು ಘಟನೆಗಳನ್ನು ಕಂಡಿದ್ದೇವೆ. ಅಂಥದ್ದೇ ಮತ್ತೊಂದು ಘಟನೆ ಇದೀಗ ಆಂಧ್ರ ಪ್ರದೇಶದಲ್ಲಿ ವರದಿಯಾಗಿದೆ.
ಆಂಧ್ರದ ಉಪಮುಖ್ಯಮಂತ್ರಿ ಮಗನೊಬ್ಬ ತನ್ನ ಸ್ನೇಹಿತರ ಜತೆಗೂಡಿ ವೇಗದ ಕಾರು ಚಾಲನೆ ಮಾಡಿದ್ದಲ್ಲದೆ, ಕಾರು ತಡೆದ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿರುವ ಘಟನೆ ಸೋಮವಾರ ರಾತ್ರಿ ವಿಶಾಖಪಟ್ಟಣದ ಬೀಚ್ ರಸ್ತೆಯಲ್ಲಿ ನಡೆದಿದೆ.
ಡಿಸಿಎಂ ಧರ್ಮನಾ ಕೃಷ್ಣದಾಸ್ ಪುತ್ರ ರಾಮ್ ಭರತ್ ತಮ್ಮ ಸ್ನೇಹಿತರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾರೆ. ರಾಮ್ ಸ್ನೇಹಿತರು ಕಾರು ತಡೆದ ಪೇದೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅದೇ ಸಮಯದಲ್ಲಿ ರಾಮ್ ಕಾರಿನಲ್ಲಿದ್ದರು ಎಂದು ತಿಳಿದುಬಂದಿದೆ. ಹಲ್ಲೆ ಮಾಡಿರುವವರ ವಿರುದ್ಧ ಸಂತ್ರಸ್ತ ಪೇದೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಸಹ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಡಿಸಿಎಂ ಧರ್ಮನಾ ಗಮನಕ್ಕೂ ಬಂದಿದೆ. ಇದೀಗ ಯಾವುದೇ ಪ್ರಕರಣವನ್ನು ದಾಖಲಿಸದೇ ಸಂಧಾನದ ಮೂಲಕ ಪ್ರಕರಣವನ್ನು ಪೊಲೀಸರು ಇತ್ಯರ್ಥ ಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್)