

ಬೀಜಿಂಗ್: ನಿಯತ್ತಿಗೆ ಉದಾಹರಣೆ ನೀಡುವುದಾದರೆ ಮೊದಲು ಬರುವುದೇ ನಾಯಿಯ ಹೆಸರು. ಕೆಲವರಿಗೆ ಉಪಕಾರ ಮಾಡಿದರೆ ಕನಿಷ್ಠ ಪಕ್ಷ ಧನ್ಯವಾದ ಹೇಳುವ ಸೌಜನ್ಯವನ್ನು ತೋರುವುದಿಲ್ಲ. ಆದರೆ, ಇಲ್ಲೊಂದು ನಾಯಿ ತನ್ನ ಹಸಿವು ನೀಗಿಸಿದವರಿಗೆ ಆನಂದಭಾಷ್ಪದ ಮೂಲಕ ಕೃತಜ್ಞತೆ ಸಲ್ಲಿಸಿದ ವಿಡಿಯೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದ ಜಿಂಗ್ ಹಾಂಕ್ ನಗರದಲ್ಲಿ ಮನಮಿಡಿಯುವ ಘಟನೆ ನಡೆದಿದೆ. ಕಾರನ್ನು ಪಾರ್ಕಿಂಗ್ ಮಾಡಲು ತೆರಳಿದಾಗ ಮಹಿಳೆಯೊಬ್ಬಳ ಕಣ್ಣಿಗೆ ಬೀದಿ ನಾಯಿಯೊಂದು ಕಂಡಿದೆ. ನಾಲಿಗೆಯನ್ನು ಹೊರಚಾಚುತ್ತಾ ಆಹಾರಕ್ಕಾಗಿ ಹುಡುಕುತ್ತಾ ಹಸಿವಿನಿಂದ ಬಳಲುತ್ತಿದ್ದ ನಾಯಿ ಕಾರು ಪಾರ್ಕ್ ಮಾಡಿದ ಮಹಿಳೆಯನ್ನು ನೋಡಿ ಆಕೆಯ ಬಳಿ ಓಡಿಬಂದಿದೆ.
ತನ್ನೆರಡು ಕಾಲಗಳನ್ನು ಮೇಲಕ್ಕೆ ಚಾಚಿ ಬಾಲ ಅಲ್ಲಾಡಿಸುವುದನ್ನು ನೋಡಿದ ಮಹಿಳೆ ತನ್ನ ಕಾರಿನಲ್ಲಿದ್ದ ಬಿಸ್ಕೆಟ್ಗಳನ್ನು ತೆಗೆದು ನಾಯಿಯ ಮುಂದೆ ಇಡುತ್ತಾಳೆ. ಶ್ವಾನ ಎಷ್ಟು ಹಸಿದಿತ್ತು ಎಂದರೆ ತಕ್ಷಣ ಇಡೀ ಬಿಸ್ಕೆಟ್ ಅನ್ನು ತನ್ನ ಹೊಟ್ಟೆಗೆ ಇಳಿಸಿಕೊಂಡಿದೆ. ಅದು ತಿನ್ನುವುದನ್ನು ನೋಡಿದಾಗಲೇ ಶ್ವಾನಕ್ಕೆ ಬಹಳ ಹಸಿವಾಗಿದೆ ಎಂಬುದು ಮಹಿಳೆಯ ಅರಿವಿಗೆ ಬಂದಿದೆ.
ಇತ್ತ ಬಿಸ್ಕೆಟ್ ತಿಂದ ಶ್ವಾನ ಕಣ್ಣೀರು ಸುರಿಸುತ್ತಾ ಹೊಟ್ಟೆ ತುಂಬಿದ ಆನಂದದಿಂದ ಮಹಿಳೆಗೆ ಧನ್ಯವಾದ ಹೇಳಿದೆ. ಇದಾದ ಮರುದಿನವು ಮಹಿಳೆ ತನ್ನ ಕಾರನ್ನು ಅದೇ ಸ್ಥಳದಲ್ಲಿ ಪಾರ್ಕ್ ಮಾಡುವಾಗ ಶ್ವಾನ ನಿನ್ನೆಯದ್ದನ್ನು ನೆನಪಿಸಿಕೊಂಡು ಆಕೆಯ ಬಳಿ ಓಡಿಬಂದಿದೆ. ಈ ಬಾರಿಯೂ ಶ್ವಾನ ತನ್ನೆರಡು ಕಣ್ಣುಗಳಲ್ಲಿ ನೀರು ತುಂಬಿಕೊಂಡೆ ಬಿಸ್ಕೆಟ್ ತಿನ್ನುತ್ತಾ ಮಹಿಳೆಯನ್ನು ನೋಡುತ್ತಾ ಧನ್ಯವಾದ ಹೇಳಿದೆ.
ಇದೇ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರ ಮೆಚ್ಚುಗೆ ಗಳಿಸಿದೆ. ವಿಡಿಯೋ ನೋಡಿದವರು ಹಸಿವಿನಿಂದ ಬಳಲುವ ನಾಯಿ ನೋಡಿದರೆ ದಯವಿಟ್ಟು ಏನಾದರೂ ಆಹಾರ ನೀಡಿ ಎಂದು ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದಾರೆ.