ನ್ಯೂಸ್

ಆ 22ರ ಯುವತಿ ಕೆಮ್ಮುತ್ತಲೇ ಇದ್ಳು- ಆಸ್ಪತ್ರೆಗೆ ದಾಖಲಾದರೆ ಕೆಮ್ಮಿನ ಇತಿಹಾಸ ಕೇಳಿ, ಕಾರಣ ನೋಡಿ ಅಲ್ಲಿದ್ದವರಿಗೆಲ್ಲ ಶಾಕ್ !

ಬೀಜಿಂಗ್​: ಕರೊನಾ ಸೋಂಕು ಜಗತ್ತಿನಾದ್ಯಂತ ವ್ಯಾಪಿಸಿದೆ. ಯಾರು ಕೆಮ್ಮಿದ್ರೂ, ಸೀನಿದ್ರೂ ಸಂದೇಹದಿಂದಲೇ ನೋಡ್ತಾರೆ. ಅಂಥದ್ದರಲ್ಲಿ ಆಕೆ ಕೆಮ್ಮುತ್ತಲೇ ಇದ್ಳು- ಇದಕ್ಕೊಂದು ಪರಿಹಾರ ಕಾಣಬೇಕು ಎಂದು ಆಸ್ಪತ್ರೆಗೆ ದಾಖಲಾದರೆ ಎಲ್ಲರಿಗೂ ಶಾಕ್​!

ಇದು ಚೀನಾದಲ್ಲಿ ನಡೆದ ಘಟನೆ. ಆಕೆಗೆ 22 ವರ್ಷ ವಯಸ್ಸು. ಡಾಕ್ಟರ್ ಎದುರು ಆಕೆ ಕೆಮ್ಮಿನ ಕಥೆಯನ್ನು ಅನಾವರಣಗೊಳಿಸಿದಳು. ಆ ಕೆಮ್ಮಿಗೆ 14 ವರ್ಷಗಳ ಇತಿಹಾಸ. ಹಾಗಾಗಿ ಕರೊನಾ ಅಲ್ಲ ಎಂಬುದು ಖಾತರಿ ಆಯಿತು.

ಆಕೆಗೆ ಏಳೋ ಎಂಟೋ ವರ್ಷ ಇರುವಾಗ ಒಂದು ದಿನ ಇದ್ದಕ್ಕಿದ್ದಂತೆ ಶುರುವಾದ ಕೆಮ್ಮು ನಿಲ್ಲಲೇ ಇಲ್ಲ. ಅನೇಕ ಬಾರಿ ಆಸ್ಪತ್ರೆಗೆ ಹೋದರೂ ಕೆಮ್ಮು ಮಾತ್ರ ನಿಯಂತ್ರಣಕ್ಕೆ ಬರಲೇ ಇಲ್ಲ. ಅದನ್ನು ಜೀವನದ ಭಾಗವಾಗಿ ತೆಗೆದುಕೊಳ್ಳಲು ಆಕೆಯ ಮನಸ್ಸು ಒಪ್ಪಲಿಲ್ಲ. ಹೀಗಾಗಿ ನಿರಂತರವಾಗಿ ಆಸ್ಪತ್ರೆಗೆ ಹೋಗುತ್ತಲೇ ಇದ್ದಳು. ಎಷ್ಟೇ ಆ್ಯಂಟಿ ಬಯಾಟಿಕ್ ಔಷಧ ತೆಗೆದುಕೊಂಡರೂ ಕೆಮ್ಮು ನಿಲ್ಲಲಿಲ್ಲ.

ಕೊನೆಗೆ ತೀರಾ ಇತ್ತೀಚೆಗೆ ಹೈಪರ್​ಹಿಡ್ರೋಸಿಸ್​ ಆಪರೇಷನ್ ಮಾಡಿಸಬೇಕು ಎಂಬ ನಿರ್ಧಾರಕ್ಕೆ ಆಕೆ ಬಂದಿದ್ದಳು. ಡಾಕ್ಟರ್​ಗಳು ಇದಕ್ಕಾಗಿ ಕೆಲವು ಟೆಸ್ಟ್​ಗಳನ್ನು ಮಾಡಲು ಮುಂದಾಗಿದ್ದರು. ಉಸಿರಾಟದ ಸಮಸ್ಯೆ ಗಮನಿಸಿದ ಗುವಾಂಗ್​ಝೂ ಯೂನಿವರ್ಸಿಟಿಯ ಕಾರ್ಡಿಯೋಥೊರಾಸಿಕ್​ ಸರ್ಜರಿ ವಿಭಾಗದ ಡೆಪ್ಯುಟಿ ಚೀಫ್​ ವಾಂಗ್ ಜಿಯೋಂಗ್​ ಅವರು ಆಕೆಯ ಸಿಟಿ ಸ್ಕ್ಯಾನ್ ಮಾಡಿಸಲು ಶಿಫಾರಸು ಮಾಡಿದರು.

ಇದರಂತೆ, ಶ್ವಾಸಕೋಶದ ಸ್ಕ್ಯಾನ್ ರಿಪೋರ್ಟ್​ನಲ್ಲಿ ಯಾವುದೋ ವಸ್ತು ಇರುವುದು ಗೋಚರಿಸಿತ್ತು. ಸರ್ಜನ್ ಯಾಂಗ್ ಮಿಂಗ್ ಅವರು ಆಕೆಗೆ ಬ್ರೋಂಕೊಸ್ಕೋಪಿ ನಡೆಸಲು ನಿರ್ಧರಿಸಿದರು. ಮೂವತ್ತು ನಿಮಿಷಗಳ ಈ ಪ್ರಕ್ರಿಯೆಯಲ್ಲಿ ಒಂದು ಟ್ಯೂಬ್​, ಸಣ್ಣ ಕ್ಯಾಮೆರಾ, ಲೈಟ್ ಅನ್ನು ಬಾಯಿಯ ಮೂಲಕ ಶ್ವಾಸಕೋಶದೊಳಕ್ಕೆ ಬಿಟ್ಟು ಅದೇನು ಎಂಬುದನ್ನು ಪತ್ತೆ ಹಚ್ಚಿದರು.

ಆ ನಿಗೂಢ ವಸ್ತುವನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆಯನ್ನೂ ಪೂರೈಸಿದರು. ಆ ವಸ್ತುವನ್ನು ಹೊರತೆಗೆದು ಶುಚಿಗೊಳಿಸಿದ ಬಳಿಕ ಅದೇನು ಎಂಬುದನ್ನು ಪರಿಶೀಲಿಸಲಾಯಿತು. ಕೊನೆಗೆ ಅದು ಚಿಕನ್ ಬೋನ್ ಎಂಬುದು ದೃಢವಾಯಿತು. ಎರಡು ಸೆಂಟಿ ಮೀಟರ್ ಇದ್ದ ಇತ್ತದು. ಬಾಲ್ಯದಲ್ಲಿ ಅಕಸ್ಮಾತ್ ಆಗಿ ಆ ಚಿಕನ್ ಬೋನ್​ ಪೀಸ್​ ಶ್ವಾಸಕೋಶಕ್ಕೆ ಹೋಗಿತ್ತು. ಅದುವೇ ಕೆಮ್ಮಿಗೆ ಕಾರಣವಾಯಿತು ಎಂಬುದನ್ನು ಅರಿತು ಆ ಯುವತಿಯೂ ಸೇರಿ ಎಲ್ಲರಿಗೂ ಶಾಕ್​!.