ಶಾಕಿಂಗ್​ ನ್ಯೂಸ್​- ಸ್ಕೇಟಿಂಗ್ ಶೂ ಮುರಿದಿದ್ದಕ್ಕೆ ಸ್ನೇಹಿತನನ್ನೇ ಕೊಚ್ಚಿ ಕೊಂದ ಬಾಲಕರು!

Murder
Published on

ಕಾಸರಗೋಡು: ಪತ್ತನಂತಿಟ್ಟ ಜಿಲ್ಲೆಯ ಮೊಡುಮಾನ್ ಎಂಬಲ್ಲಿ ಬಾಲಕನೊಬ್ಬನನ್ನು ಸ್ನೇಹಿತರೇ ಅತಿಕ್ರೂರವಾಗಿ ಥಳಿಸಿ ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾರೆ. ಅಂಙೌಡಿಕಲ್ ನಿವಾಸಿ ಸುಧೀಶ್ ಎಂಬುವರ ಪುತ್ರ, 10ನೇ ತರಗತಿ ವಿದ್ಯಾರ್ಥಿ ಎಸ್.ಅಖಿಲ್ (16) ಮೃತಪಟ್ಟವನು. ಸಮಾನ ವಯಸ್ಸಿನ ಆತನ ಇಬ್ಬರು ಸ್ನೇಹಿತರೇ ಕೃತ್ಯವಸೆಗಿದ್ದಾರೆ.

ಅಖಿಲ್ ಹಾಗೂ ಈ ಇಬ್ಬರೂ ಬೇರೆ ಬೇರೆ ಶಾಲೆಯಲ್ಲಿ ಕಲಿಯುತ್ತಿದ್ದು, ಒಬ್ಬಾತ 8 ಹಾಗೂ 9ನೇ ತರಗತಿಯಲ್ಲಿ ಅಖಿಲ್ ಜತೆಯಾಗಿ ಕಲಿತಿದ್ದ. ಒಬ್ಬನ ಸ್ಕೇಟಿಂಗ್ ಶೂ ಅಖಿಲ್ ಕೊಂಡೊಯ್ದಿದ್ದ. ವಾಪಸ್ ತರುವಾಗ ಅದರ ಚಕ್ರ ಕಳಚಿದ ಸ್ಥಿತಿಯಲ್ಲಿತ್ತು. ಇದರ ಬದಲು ಮೊಬೈಲ್ ಕೊಡುವುದಾಗಿ ಅಖಿಲ್ ಮಾತು ಕೊಟ್ಟಿದ್ದ. ಆದರೆ ಅದನ್ನು ಪಾಲಿಸಲು ಆತನಿಗೆ ಸಾಧ್ಯವಾಗಲಿಲ್ಲ.

ಇದರಿಂದ ಸಿಟ್ಟಿಗೆದ್ದ ಆ ಸ್ನೇಹಿತರು ಶಾಲೆ ಸಮೀಪ ಜನವಾಸವಿಲ್ಲದ ಮನೆಯ ಹಿತ್ತಲಿಗೆ ಅಖಿಲ್‌ನನ್ನು ಕರೆದೊಯ್ದು, ಮನೆಯಿಂದ ಕೊಂಡೊಯ್ದಿದ್ದ ಕೊಡಲಿಯಿಂದ ಆತನ ಕತ್ತಿನ ಭಾಗಕ್ಕೆ ಕಡಿದು ಕೊಲೆ ಮಾಡಿದ್ದಾರೆ.

ಮೃತದೇಹವನ್ನು ಅಲ್ಲೇ ಇದ್ದ ಸಣ್ಣ ಹೊಂಡಕ್ಕೆ ಎಸೆದು, ಅದರ ಮೇಲೆ ಮಣ್ಣು ಸುರಿದಿದ್ದಾರೆ. ಮಣ್ಣು ಸುರಿಯುತ್ತಿರುವುದನ್ನು ದೂರದಿಂದ ವ್ಯಕ್ತಿಯೊಬ್ಬರು ನೋಡಿದ್ದು, ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಆಸುಪಾಸಿನ ಜನರೂ ಸ್ಥಳಕ್ಕಾಗಮಿಸಿದ್ದಾರೆ. ಆಗ ಪರಾರಿಯಾಗಲು ಯತ್ನಿಸಿದ ಬಾಲಕರಿಬ್ಬರನ್ನೂ ಸ್ಥಳೀಯರು ಹಿಡಿದು ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಹೊಂಡದಿಂದ ತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಾಲಕರು ಮಾದಕವಸ್ತು ಸೇವಿಸಿರಬಹುದೆಂಬ ಸಂಶಯವೂ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net