ನ್ಯೂಸ್

ಮದುವೆಗೆ ಬಟ್ಟೆ ಖರೀದಿಸಲು ತೆರಳಿದ ವಧುವನ್ನು ಮಾರ್ಗ ಮಧ್ಯೆಯೇ ಹೊತ್ತೊಯ್ದ ಜವರಾಯ!

ಹೈದರಾಬಾದ್​: ಜನವರಿ 29ರಂದು ತೆಲಂಗಾಣದ ಮೆಹಬೂಬಬಾದ್​ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ದುರ್ಮರಣ ಹೊಂದಿದ್ದಾರೆ. ವಿಷಾದನೀಯ ಸಂಗತಿಯೆಂದರೆ ಮೃತರು ವಿವಾಹ ಸಮಾರಂಭಕ್ಕೆಂದು ಬಟ್ಟೆ ಖರೀದಿಸಲು ತೆರಳಿದ್ದ ವೇಳೆಯೇ ದುರ್ಘಟನೆ ಸಂಭವಿಸಿದ್ದು, ಹಸೆಮಣೆ ಏರಬೇಕಿದ್ದ ವಧುವೂ ಸಹ ದುರಂತ ಸಾವಿಗೀಡಾಗಿದ್ದಾಳೆ.

ಅಪಘಾತವು ಮೆಹಬೂಬಬಾದ್​ನ ಗುಡುರ್​ ಮಂಡಲದ ಮರ್ರಿಮಿತ್ತ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮದುವೆಗೆ ಬಟ್ಟೆ ತರಲೆಂದು ಆಟೋ ರಿಕ್ಷಾದಲ್ಲಿ ತೆರಳಿದ್ದರು. ಮಾರ್ಗ ಮಧ್ಯೆ ಎದುರುಗಡೆಯಿಂದ ವೇಗವಾಗಿ ಜವರಾಯನಂತೆ ಬಂದ ಲಾರಿ ಆಟೋಗೆ ಡಿಕ್ಕಿ ಹೊಡೆದು ವಧು ಸೇರಿದಂತೆ ಒಂದೇ ಕುಟುಂಬದ ಆರು ಮಂದಿಯ ಪ್ರಾಣ ಹೊತ್ತೊಯ್ದಿದಿದೆ.

ಮೃತರನ್ನು ವಧು ಪರಿಮಳಾ, ತಂದೆ ಜತೊತ್​ ಕಾಸ್ನಾ, ತಾಯಿ ಜತೂತ್​ ಕಲ್ಯಾಣಿ, ಸಹೋದರ ಜತೂತ್​ ಪ್ರದೀಪ್​ ಮತ್ತು ಸಂಬಂಧಿಕರಾದ ಜತೂತ್​ ಪ್ರಸಾದ್​, ಅವರ ಮಗಳು ಜತೂತ್​ ದಿವ್ಯಾ ಮತ್ತು ಆಟೋ ಚಾಲಕ ಜತೂತ್​ ರಾಮು ಎಂದು ಗುರುತಿಸಲಾಗಿದೆ.

ಮೃತ ಕುಟುಂಬವೂ ಗುಡುರ್​ ಮಂಡಲದ ಎರ್ರಕುಂಟಾ ತಾಂಡಾ ಮೂಲದವರು. ಪರಿಮಳಾ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಬಟ್ಟೆ ಖರೀದಿಸಲೆಂದು ಬಾಡಿಗೆ ಆಟೋ ಮೂಲಕ ಕುಟುಂಬ ನರಸಂಪೇಟ್​ ಪಟ್ಟಣಕ್ಕೆ ತೆರಳಿದ್ದರು. ಮಾರ್ಗ ಮಧ್ಯೆ ಎದರುಗಡೆಯಿಂದ ವೇಗವಾಗಿ ಬಂದ ಲಾರಿ ನೋಡನೋಡುತ್ತಿದ್ದಂತೆ ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಪರಿಮಳಾ ಸೇರಿ ಆರು ಮಂದಿಯು ಸಹ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ದುರಂತದ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಆಘಾತ ವ್ಯಕ್ತಪಡಿಸಿ, ಮೃತರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ದುಃಖ ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬದವರಿಗೆ ನೀಡಲೆಂದು ಪ್ರಾರ್ಥಿಸಿದ್ದಾರೆ. ಅಲ್ಲದೆ, ಅಪಘಾತ ಹೇಗೆ ಸಂಭವಿಸಿತು? ಎಂದು ತನಿಖೆಗೆ ಆದೇಶಿಸಿದ್ದು, ಗಾಯಗೊಂಡವರ ಚಿಕಿತ್ಸೆಗೆ ಅಗತ್ಯ ನೆರವು ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. (ಏಜೆನ್ಸೀಸ್​)