ಲೈಫ್‌ಸ್ಟೈಲ್

ನಿಮ್ಮ ದಿನಚರಿಯಲ್ಲಿ ಈ ಒಂದು ಬದಲಾವಣೆ ಮಾಡಿದ್ರೆ ಸಾಕು ಹೃದಯ, ಲಿವರ್​ ಸದಾ ಆರೋಗ್ಯವಾಗಿರುತ್ತವೆ!

ಹೃದಯ ಮತ್ತು ಕಿಡ್ನಿಯಂತೆ ಯಕೃತ್ತು ಅಥವಾ ಲಿವರ್​ ನಮ್ಮ ದೇಹದಲ್ಲಿ ಪ್ರಮುಖವಾದ ಅಂಗವಾಗಿದೆ. ದೀರ್ಘಾಯುಷ್ಯಕ್ಕೆ ಆರೋಗ್ಯಕರ ಲಿವರ್​ ಕೂಡ ಅತ್ಯಗತ್ಯ. ಇಲ್ಲವಾದಲ್ಲಿ ಮಾರಣಾಂತಿಕ ಕಾಯಿಲೆಗೆ ಬಲಿಯಾಗಬೇಕಾಗುತ್ತದೆ. ಫ್ಯಾಟಿ ಲಿವರ್​ ಇಂದು ಸಾಮಾನ್ಯ ಕಾಯಿಲೆಯಾಗಿದೆ. ಅಲ್ಲದೆ, ಲಿವರ್​ ಸಿರೋಸಿಸ್ ಮತ್ತು ಹೆಪಟೈಟಿಸ್‌ನಂತಹ ಇತರ ಕಾಯಿಲೆಗಳು ಸಹ ಅಪಾಯಕಾರಿ.

ಲಿವರ್​ ಆರೋಗ್ಯಕ್ಕೆ ಹಲವು ಪಾನೀಯಗಳನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ನೋಡಿರಬಹುದು. ಆದರೆ, ಆರೋಗ್ಯ ತಜ್ಞರ ಪ್ರಕಾರ ಫ್ಯಾನ್ಸಿ ಜ್ಯೂಸ್​ಗಳು ಲಿವರ್​ಗೆ ಹಾನಿ ಉಂಟುಮಾಡುತ್ತವೆ. ಅಂದಹಾಗೆ ಲಿವರ್​ ಸ್ವತಃ ನಿರ್ವಿಷಗೊಳಿಸುವ ಅಂಗವಾಗಿದ್ದು, ಅದನ್ನು ನಿರ್ವಿಷಗೊಳಿಸುವ ಅಗತ್ಯವಿಲ್ಲ. ಅನಾರೋಗ್ಯಕರ ಜೀವನಶೈಲಿ ಮತ್ತು ಜಂಕ್ ಫುಡ್‌ನಿಂದಾಗಿ ಲಿವರ್​ ಕಾಯಿಲೆಯು ಜನರಲ್ಲಿ ತುಂಬಾ ಸಾಮಾನ್ಯವಾಗಿದೆ. ಹೀಗಾಗಿ ಲಿವರ್​ ಅನ್ನು ಆರೋಗ್ಯವಾಗಿ ಇಡಲು ಸರಳ ಉಪಾಯವೊಂದು ಇಲ್ಲಿದೆ.

ವೇಗದ ನಡಿಗೆ

ಲಿವರ್​ ಆರೋಗ್ಯಕ್ಕೆ ವೇಗದ ನಡಿಗೆ ತುಂಬಾ ಪರಿಣಾಮಕಾರಿ. ವೇಗದ ನಡಿಗೆ ಅಂದರೆ, 1 ನಿಮಿಷದಲ್ಲಿ 100 ಹೆಜ್ಜೆಗಳನ್ನು ಇಡಬೇಕು ಎಂದರ್ಥ. 1 ಗಂಟೆಯಲ್ಲಿ 3.5 ಮೈಲಿ ದೂರ ಕ್ರಮಿಸಬೇಕು. ಅಷ್ಟು ವೇಗವಾಗಿ ನಡೆಯಬೇಕು.

ಹಲವು ಸಮಸ್ಯೆಗಳಿಗೆ ಪರಿಹಾರ

ನಿತ್ಯವೂ ವೇಗದ ನಡಿಗೆ ಅನುಸರಿಸುವುದರಿಂದ ಗಂಭೀರ ಆರೋಗ್ಯ ಸಮಸ್ಯಗಳಿಂದ ದೂರವಾಗಬಹುದು. ಹೃದಯದ ರೋಗವನ್ನು ತಡೆಯಲು ಪ್ರತಿದಿನ 45 ನಿಮಿಷಗಳ ಕಾಲ ವೇಗದ ನಡಿಗೆ ಅನುಸರಿಸಲು ವೈದ್ಯರು ಸಲಹೆ ನೀಡುತ್ತಾರೆ. ಟೈಪ್​ 2 ಮಧುಮೇಹ ನಿಯಂತ್ರಣಕ್ಕೂ ಇದರ ಸಲಹೆ ನೀಡಲಾಗುತ್ತದೆ. ಇದಿಷ್ಟೇ ಅಲ್ಲದೆ, ನಿತ್ಯವೂ ವೇಗದ ನಡಿಗೆಯಿಂದ ತೂಕವನ್ನು ಸಹ ಕಡಿಮೆ ಮಾಡಿಕೊಳ್ಳಬಹುದು.

ಸುಲಭ ವ್ಯಾಯಾಮ

ಯಾರಾದರೂ ತೆಗೆದುಕೊಳ್ಳಬಹುದಾದ ಸುಲಭವಾದ ವ್ಯಾಯಾಮಗಳಲ್ಲಿ ವಾಕಿಂಗ್ ಕೂಡ ಒಂದಾಗಿದೆ. ಇದು ಸರಳವಾಗಿದೆ ಮತ್ತು ಎಲ್ಲಿ ಬೇಕಾದರೂ ಮಾಡಬಹುದು. ಇದು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಕಾರ್ಡಿಯೋ ವ್ಯಾಯಾಮವಾಗಿದ್ದು, ತಪ್ಪದೇ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯಕರ ಜೀವನ ನಿಮ್ಮದಾಗುತ್ತದೆ. (ಏಜೆನ್ಸೀಸ್​)