More

    ಮೋದಿಗೆ ಫ್ರಾನ್ಸ್​ನ ಅತ್ಯುನ್ನತ ಗೌರವ: ಗ್ರ್ಯಾಂಡ್​ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ಪ್ರದಾನ; ಈ ಗೌರವ ಪಡೆದ ಮೊದಲ ಭಾರತೀಯ ಪ್ರಧಾನಿ

    ಪ್ಯಾರಿಸ್: ಫ್ರಾನ್ಸ್​ನ ಅತ್ಯುನ್ನತ ನಾಗರಿಕ ಮತ್ತು ಮಿಲಿಟರಿ ಗೌರವವಾದ ‘ಗ್ರಾ್ಯಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್’ ಅನ್ನು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಶುಕ್ರವಾರ ಪ್ರದಾನ ಮಾಡಿದರು. ಈ ಗೌರವ ಪಡೆದ ಮೊದಲ ಭಾರತೀಯ ಪ್ರಧಾನಿ ಎಂಬ ಖ್ಯಾತಿಗೆ ಮೋದಿ ಪಾತ್ರರಾಗಿದ್ದಾರೆ.

    ಪ್ಯಾರಿಸ್​ನ ಎಲಿಸಿ ಅರಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಈ ಗೌರವ ಸ್ವೀಕರಿಸಿದರು. ಇದುವರೆಗೆ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ, ಕಿಂಗ್ ಚಾರ್ಲ್ಸ್, ವೇಲ್ಸ್ ರಾಜಕುಮಾರ, ಜರ್ಮನಿಯ ಮಾಜಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಇನ್ನಿತರ ಜಾಗತಿಕ ಗಣ್ಯರು ಈ ಗೌರವಕ್ಕೆ ಭಾಜನರಾಗಿದ್ದು, ಇದೀಗ ಮೋದಿ ಅವರು ಈ ಗಣ್ಯರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಫ್ರಾನ್ಸ್​ನ ಈ ಗೌರವನ್ನು ನಾನು ಅತ್ಯಂತ ನಮ್ರತೆಯಿಂದ ಸ್ವೀಕರಿಸುತ್ತೇನೆ. ಇದು ಭಾರತದ 140 ಕೋಟಿ ಜನರಿಗೆ ಸಿಕ್ಕ ಗೌರವವಾಗಿದೆ. ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ಫ್ರೆಂಚ್ ಸರ್ಕಾರ ಮತ್ತು ಇಲ್ಲಿನ ಜನರಿಗೆ ಧನ್ಯವಾದ ಸಲ್ಲಿಸುತ್ತೇನೆ. ಇದು ಅವರ ಆಳವಾದ ಪ್ರೀತಿಯನ್ನು ತೋರಿಸುತ್ತದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಇದು ಭಾರತ-ಫ್ರಾನ್ಸ್ ಬಾಂಧವ್ಯ ಮತ್ತು ಬದ್ಧತೆಗೆ ಸಿಕ್ಕ ಮನ್ನಣೆಯಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ.

    ಫ್ರಾನ್ಸ್​​ನಲ್ಲೂ ಯುಪಿಐ ಬಳಕೆ

    ಯುನಿಫೈಡ್ ಪೇಮೆಂಟ್ಸ್ ಇಂಟರ್ಫೆಸ್ (ಯುಪಿಐ) ಬಳಸಲು ಭಾರತ ಮತ್ತು ಫ್ರಾನ್ಸ್ ಒಪ್ಪಿಕೊಂಡಿವೆ. ಇನ್ನು ಫ್ರಾನ್ಸ್ನಲ್ಲೂ ಭಾರತೀಯರು ಯುಪಿಐ ಮೂಲಕ ಪಾವತಿ ಮಾಡಲು ಅವಕಾಶ ಸಿಗಲಿದೆ. ಇದು ಭಾರತೀಯ ಆವಿಷ್ಕಾರಗಳಿಗೆ ಹೊಸ ಮಾರುಕಟ್ಟೆಯನ್ನು ತೆರೆಯಲಿದೆ ಎಂದೇ ವಿಶ್ಲೇಷಿಸಲಾಗಿದೆ. ‘ಶೀಘ್ರದಲ್ಲೇ ಭಾರತೀಯ ಪ್ರವಾಸಿಗರು ಐಫೆಲ್ ಟವರ್ ಕೌಂಟರ್​ನಲ್ಲಿ ಯುಪಿಐ ಬಳಸಿ ರೂಪಾಯಿ ಮೂಲಕ ಪಾವತಿ ಮಾಡಲು ಸಾಧ್ಯವಾಗಲಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಯುಪಿಐ ಸೇವೆಗಳನ್ನು ಒದಗಿಸುವ ಭಾರತದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೆರೇಷನ್ ಆಫ್ ಇಂಡಿಯಾ – ಫ್ರಾನ್ಸ್​ನ ಆನ್​ಲೈನ್ ಪಾವತಿ ವ್ಯವಸ್ಥೆ ಲೈರಾ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ. 2023ರಲ್ಲಿ ಯುಪಿಐ ಬಳಕೆಗೆ ಸಿಂಗಾಪುರ ಒಪ್ಪಿಗೆ ನೀಡಿತ್ತು. ಯುಎಇ, ಭೂತಾನ್ ಮತ್ತು ನೇಪಾಳ ಈಗಾಗಲೇ ಯುಪಿಐ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಯುರೋಪಿಯನ್ ದೇಶಗಳು ಮತ್ತು ಪಶ್ಚಿಮ ಏಷ್ಯಾದಲ್ಲೂ ಯುಪಿಐ ವಿಸ್ತರಿಸಲು ಮಾತುಕತೆ ನಡೆಯುತ್ತಿದೆ.

    ಏನಿದು ಗೌರವ?: 1802ರಲ್ಲಿ ನೆಪೋಲಿಯನ್ ಬೋನಪಾರ್ಟೆ ‘ದಿ ಲೀಜನ್ ಆಫ್ ಆನರ್’ ಅನ್ನು ಸ್ಥಾಪಿಸಿದ್ದ. ಪುರಸ್ಕಾರದ ರಿಬ್ಬನ್ ಕೆಂಪು ಬಣ್ಣದ್ದಾಗಿದೆ. ಬ್ಯಾಡ್ಜ್ ಓಕ್ ಮತ್ತು ಲಾರೆಲ್ ಮಾಲೆಯ ಮೇಲೆ ಐದು ನಕ್ಷತ್ರ ಇದೆ. ಮೊದಲು ಫ್ರೆಂಚ್ ಪ್ರಜೆಗಳಿಗೆ ಮಾತ್ರ ಈ ಪ್ರಶಸ್ತಿ ಸೀಮಿತವಾಗಿತ್ತು. ಈಗ ಫ್ರಾನ್ಸ್​ಗೆ ಸೇವೆ ಸಲ್ಲಿಸುವ ಅಥವಾ ಅದರ ಆದರ್ಶಗಳನ್ನು ಎತ್ತಿಹಿಡಿಯುವ ವಿದೇಶಿ ಪ್ರಜೆಗಳಿಗೂ ನೀಡಲಾಗುತ್ತಿದೆ.

    ಬಾಸ್ಟಿಲ್ ಡೇ ಪರೇಡ್​ನಲ್ಲಿ ಮೋದಿ: ಫ್ರೆಂಚ್ ರಾಷ್ಟ್ರೀಯ ದಿನಾಚರಣೆ ಹಿನ್ನೆಲೆಯಲ್ಲಿ ಶುಕ್ರವಾರ ಪ್ಯಾರಿಸ್​ನಲ್ಲಿ ನಡೆದ ಬಾಸ್ಟಿಲ್ ಡೇ ಪರೇಡ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಗೌರವ ಅತಿಥಿಯಾಗಿ ಪಾಲ್ಗೊಂಡರು. ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಸಹಿತ ಹಲವು ಗಣ್ಯರು ಇದ್ದರು. ಭಾರತೀಯ ವಾಯುಪಡೆಯ ರಫೇಲ್ ಫೈಟರ್ ಜೆಟ್​ಗಳು ವಿಶೇಷ ಪ್ರದರ್ಶನ ನೀಡಿದವು. ‘ಸಾರೆ ಜಹಾಂ ಸೆ ಅಚ್ಚಾ’ ರಾಗದ ಜತೆ ಭಾರತೀಯ 269 ಯೋಧರು ಪಥಸಂಚಲನ ನಡೆಸಿದರು. ಈ ತುಕಡಿಯ ನೇತೃತ್ವವನ್ನು ಸಿಡಿಆರ್ ವ್ರತ್ ಬಾಘೕಲ್ ವಹಿಸಿದ್ದರು. ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರನ್​ಗೆ ಭಾರತೀಯ ತುಕಡಿಗೆ ಗೌರವ ವಂದನೆ ಸಲ್ಲಿಸಿತು. 1789ರಲ್ಲಿ ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಬಾಸ್ಟಿಲ್ ಜೈಲು ದಾಳಿಯ ನೆನಪಿಗಾಗಿ ಫ್ರೆಂಚ್ ರಾಷ್ಟ್ರೀಯ ದಿನ ಅಥವಾ ಬಾಸ್ಟಿಲ್ ದಿನವನ್ನು ಆಚರಣೆ ಮಾಡಲಾಗುತ್ತದೆ.

    5 ವರ್ಷದ ಅಧ್ಯಯನ ವೀಸಾ: ಫ್ರಾನ್ಸ್​ನಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಭಾರತೀಯ ವಿದ್ಯಾರ್ಥಿಗಳಿಗೆ 5 ವರ್ಷಗಳ ದೀರ್ಘಾವಧಿಯ ಅಧ್ಯಯನ ವೀಸಾ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೊಷಿಸಿದ್ದಾರೆ. ಈ ಹಿಂದೆ ಫ್ರಾನ್ಸ್​ನಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಭಾರತೀಯ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಕೆಲಸದ ವೀಸಾಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು. 2021-22ರ ಶೈಕ್ಷಣಿಕ ಅವಧಿಯಲ್ಲಿ ಫ್ರಾನ್ಸ್​ನಲ್ಲಿ ಸುಮಾರು 6,000 ಭಾರತೀಯ ವಿದ್ಯಾರ್ಥಿಗಳಿದ್ದಾರೆ.

    • ಭಾರತ-ಫ್ರಾನ್ಸ್ ಬಾಂಧವ್ಯ, ಬದ್ಧತೆಗೆ ಸಿಕ್ಕ ಮನ್ನಣೆ
    • ಫಾನ್ಸ್​ನಲ್ಲಿ ಭಾರತದ ಹೊಸ ಕಾನ್ಸುಲೇಟ್ ಸ್ಥಾಪನೆ
    • ಪರೇಡ್​ನಲ್ಲಿ ಮೊಳಗಿದ ಸಾರೇ ಜಹಾಂ ಸೆ ಅಚ್ಛಾ
    • ಭಾರತೀಯ 269 ಯೋಧರ ಆಕರ್ಷಕ ಪಥಸಂಚಲನ
    • ಪ್ರಧಾನಿ ಮೋದಿ, ಅಧ್ಯಕ್ಷ ಮ್ಯಾಕ್ರನ್​ಗೆ ಗೌರವ ವಂದನೆ

    ಹೊಸ ದೂತಾವಾಸ: ಫ್ರೆಂಚ್ ಅಧ್ಯಕ್ಷರು ಮತ್ತು ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್ ಎಲಿಸಿ ಅರಮನೆಯಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಮೋದಿ ಭಾಗಿಯಾದರು. ನಂತರ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಫ್ರಾನ್ಸ್​ನ ಮಾರ್ಸಿಲ್ಲೆಯಲ್ಲಿ ಹೊಸ ಭಾರತೀಯ ದೂತಾವಾಸ ಕಚೇರಿ ತೆರೆಯುವುದಾಗಿ ಮೋದಿ ಘೊಷಿಸಿದರು.

    ಚೀನಾಕ್ಕೆ ಪರೋಕ್ಷ ಚಾಟಿ: ಭಾರತದ ಪ್ರಗತಿಯಲ್ಲಿ ಫ್ರಾನ್ಸ್ ಪ್ರಮುಖ ಪಾಲುದಾರ ದೇಶ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಎಲಿಸಿ ಅರಮನೆಯಲ್ಲಿ ದ್ವಿಪಕ್ಷೀಯ ಸಭೆ ನಡೆಸಿದ ನಂತರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸಲು ಕಟ್ಟುನಿಟ್ಟಿನ ಕ್ರಮ ಅಗತ್ಯ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಮತ್ತು ಫ್ರಾನ್ಸ್ ವಿಶೇಷ ಜವಾಬ್ದಾರಿಯನ್ನು ಹೊಂದಿವೆ. ಎಲ್ಲಾ ಸಂಘರ್ಷಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕು ಎಂದು ಅವರು ಪ್ರತಿಪಾದಿಸಿದರು. ಪರೋಕ್ಷವಾಗಿ ಅವರು ಚೀನಾಗೆ ತಿರುಗೇಟು ನೀಡಿದರು. ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದು, ದೀರ್ಘಾವಧಿಯ ವೀಸಾ ವಿತರಣೆ, ವಿಶ್ವವಿದ್ಯಾನಿಲಯ ಪಾಲುದಾರಿಕೆ ಕೋವಿಡ್ ಸಾಂಕ್ರಾಮಿಕದ ಪರಿಣಾಮಗಳು ಸೇರಿ ಹಲವು ವಿಷಯಗಳ ಕುರಿತು ಮೋದಿ ಮತ್ತು ಮ್ಯಾಕ್ರನ್ ಚರ್ಚೆ ನಡೆಸಿದರು. ಭಾರತ ಮತ್ತು ಫ್ರಾನ್ಸ್ ನಡುವಿನ ವಿಶೇಷ ಬಾಂಧವ್ಯ ಇಂದು ಸ್ಪಷ್ಟವಾಗಿದೆ. ಮುಂದಿನ 25 ವರ್ಷಗಳವರೆಗಿನ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ಎರಡೂ ದೇಶಗಳ ನಡುವೆ ಬೆಳೆಯುತ್ತಿರುವ ಪಾಲುದಾರಿಕೆಗೆ ಇದು ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಫ್ರಾನ್ಸ್ ವಿವಿಗಳಿಗೆ ಆಹ್ವಾನ: ಫ್ರಾನ್ಸ್​ನಲ್ಲಿರುವ ಭಾರತೀಯರಿಗೆ ಹೊಸದಾಗಿ ದೀರ್ಘಾವಧಿ ವೀಸಾಗಳನ್ನು ನೀಡಲು ಮ್ಯಾಕ್ರನ್ ಆಡಳಿತ ನಿರ್ಧಾರ ಕೈಗೊಂಡಿರುವುದನ್ನು ಪ್ರಧಾನಿ ಸ್ವಾಗತಿಸಿದರು. ಭಾರತದಲ್ಲಿ ಕ್ಯಾಂಪಸ್​ಗಳನ್ನು ತೆರೆಯಲು ಫ್ರೆಂಚ್ ವಿಶ್ವವಿದ್ಯಾಲಯಗಳನ್ನು ಆಹ್ವಾನಿಸಿದರು. ಈ ಕ್ರಮ ಎರಡೂ ರಾಷ್ಟ್ರಗಳ ನಡುವಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಇನ್ನಷ್ಟು ಉತ್ತಮಗೊಳಿಸಲು ನೆರವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

    ಮಿಲಿಟರಿ ಸಂಬಂಧಕ್ಕೆ ಬಲ: ‘ನಮ್ಮ ರಫೇಲ್ ಜೆಟ್​ಗಳು ಫ್ರಾನ್ಸ್​ನ ರಾಷ್ಟ್ರೀಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿವೆ. ಭಾರತದ ನೌಕಾಪಡೆ ಹಡಗುಗಳು ಫ್ರೆಂಚ್ ಬಂದರುಗಳಲ್ಲಿವೆ. ಇದು ಮಿಲಿಟರಿ ಸಂಬಂಧ ಬಲಪಡಿಸುತ್ತಿರುವುದನ್ನು ಎತ್ತಿ ತೋರಿಸುತ್ತದೆ. ನವೀಕರಿಸಬಹುದಾದ ಶಕ್ತಿ, ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್​ಗಳು ಮತ್ತು ಡಿಜಿಟಲ್ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಅಗತ್ಯ ಇದೆ ಎಂದು ಪ್ರಧಾನಿ ಹೇಳಿದರು.

    ಈತ ಗಂಡಸಿಯ ಸಾಹಸಿ: ಚಿರತೆಯನ್ನು ಹಿಡಿದು ಬೈಕ್​ಗೆ ಕಟ್ಟಿಕೊಂಡು ಹೋಗಿ ಅರಣ್ಯ ಇಲಾಖೆಗೆ ಒಪ್ಪಿಸಿದ!

    ಯಂಗ್​ ಆಗಿಯೇ ಇರಲು ಕೋಟ್ಯಂತರ ರೂ. ಖರ್ಚು ಮಾಡಿದ, ಮಗನ ರಕ್ತ ತನ್ನ ದೇಹಕ್ಕೆ ಸೇರಿಸಿಕೊಂಡ: ಕೊನೆಗೆ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts