ಜಿಲ್ಲೆ

ಸದನದಲ್ಲಿ ಪ್ರತಿಧ್ವನಿಸಿದ ‘ವಿಜಯವಾಣಿ’ ವರದಿ; ಕುವೆಂಪು ವಿವಿ ಕರ್ಮಕಾಂಡ ತನಿಖೆಗೆ ಆಗ್ರಹ

ಬೆಂಗಳೂರು: ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಹಗರಣಗಳ ಕುರಿತು ‘ಅಂತ್ಯವಿಲ್ಲದ ಕುವೆಂಪು ವಿವಿ ಕರ್ಮಕಾಂಡ’ ಶೀರ್ಷಿಕೆಯಡಿ ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿ ಸೋಮವಾರ ವಿಧಾನಪರಿಷತ್ತಿನಲ್ಲಿ ಪ್ರತಿಧ್ವನಿಸಿತು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಡಿ.ಎಸ್.ಅರುಣ್, ಕುವೆಂಪು ವಿವಿಯಲ್ಲಿ ನಿರಂತರವಾಗಿ ಹಗರಣಗಳು ಬಯಲಿಗೆ ಬರುತ್ತಿದ್ದರೂ ತಿದ್ದಿಕೊಳ್ಳುವ ಪ್ರಯತ್ನಗಳು ನಡೆಯುತ್ತಿಲ್ಲ. ಬದಲಿಗೆ ಪ್ರಮಾದಗಳ ಮೇಲೆ ಪ್ರಮಾದಗಳು ನಡೆಯುತ್ತಿವೆ. ಕುವೆಂಪು ವಿವಿಯಿಂದ ಹೊರಬೀಳುವ ಎಲ್ಲಾ ಆದೇಶಗಳಿಗೂ ಕಾಂಚಾಣವೇ ನಿರ್ಣಾಯಕವಾಗುತ್ತಿದೆ ಎಂದು ಆರೋಪಿಸಿದರು.

‘ವಿದ್ಯಾರ್ಥಿಯ ಲ್ಯಾಪ್‌ಟಾಪ್ ಕಳವು ಮಾಡಿದ ಪ್ರೊಫೆಸರ್‌ಗೆ ಯಾವುದೇ ಉನ್ನತ ಹುದ್ದೆ ಕೊಡಬಾರದು’ ಎಂದು ಸಿಂಡಿಕೇಟ್ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಉಲ್ಲಂಘಿಸಿ ಅವರಿಗೆ ಆಯಕಟ್ಟಿನ ಹುದ್ದೆ ಕಲ್ಪಿಸಿರುವುದು ಹಾಗೂ ರಿಜಿಸ್ಟ್ರಾರ್ ಹುದ್ದೆಗೆ ಹಿರಿಯ ಪ್ರಾಧ್ಯಾಪಕರೊಬ್ಬರನ್ನು ಸೂಚಿಸಲು ಸರ್ಕಾರದಿಂದ ಪತ್ರ ಬರೆದಿದ್ದರೂ ಉದ್ದೇಶಪೂರ್ವಕವಾಗಿ ಆ ಪತ್ರವನ್ನು ಗೌಪ್ಯವಾಗಿಟ್ಟು ಪ್ರೊ.ವಿ. ಕೃಷ್ಣ ಅವರಿಗೆ ಸಿಗಬೇಕಾದ ಕುಲಸಚಿವ ಹುದ್ದೆಯಲ್ಲಿ ಡಾ. ಗೀತಾ ಅವರನ್ನೇ ಮುಂದುವರೆಸಿ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಲಾಗಿದೆ. ಇದರ ಹಿಂದೆ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಅವರ ಪಾತ್ರವಿದ್ದು ಇವರ ಅವಧಿ ಆಗಸ್ಟ್ ವೇಳೆಗೆ ಅಂತ್ಯಗೊಳ್ಳಲಿದೆ. ಈಗಿನ ಪ್ರಭಾರ ಕುಲಸಚಿವರನ್ನು (ಆಡಳಿತ), ಪ್ರಭಾರ ಕುಲಪತಿ ಹಾಗೂ ಲ್ಯಾಪ್‌ಟಾಪ್ ಕಳವು ಆರೋಪಿಯನ್ನು ಪ್ರಭಾರ ಕುಲಸಚಿವ ಹುದ್ದೆಗೆ ತಂದು ಕೂರಿಸುವ ವ್ಯವಸ್ಥಿತ ಕೊಡುಕೊಳ್ಳುವಿಕೆಯ ವ್ಯವಹಾರ ಬೆಳವಣಿಗೆಗಳು ನಡೆದಿರುವುದು ವರದಿಯಾಗಿದೆ. ಡಾ. ಗೀತಾ ಅವರನ್ನು ಪ್ರಭಾರ ಕುಲಸಚಿವರನ್ನಾಗಿ ಮಾಡದಿರುವುದು ಅವರು ಕುಲಪತಿಗಳ ಎಲ್ಲ ನಿಯಮಬಾಹಿರ ಆದೇಶಗಳಿಗೆ ಆಕ್ಷೇಪ ಎತ್ತದೆ ಚಾಚೂ ತಪ್ಪದೇ ಪಾಲನೆ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಅವರ ಅವಧಿಯ ಭ್ರಷ್ಟಾಚಾರ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ನಿವೃತ್ತ ಶಿಕ್ಷಕರೊಬ್ಬರು ಸಿಂಡಿಕೇಟ್ ಸದಸ್ಯರಿಗೆ ಪತ್ರ ಬರೆದಿದ್ದು, ಕುವೆಂಪು ವಿಶ್ವವಿದ್ಯಾಲಯಕ್ಕೆ ಗ್ರಹಣ ಹಿಡಿದಂತಾಗಿದೆ. ಈ ವಿಚಾರ ಈಗಾಗಲೇ ಉನ್ನತ ಶಿಕ್ಷಣ ಸಚಿವರ ಗಮನಕ್ಕೂ ಬಂದಿದೆ. ಲ್ಯಾಪ್‌ಟಾಪ್ ಕಳವು ಮಾಡಿರುವ ಪ್ರೊಫೆಸರ್‌ಗೆ ಯಾವುದೇ ಆಡಳಿತಾತ್ಮಕ ಹುದ್ದೆ ನೀಡಬಾರದು. ಮೂರು ವರ್ಷ ಯಾವುದೇ ಸಂಶೋಧನಾ ವಿದ್ಯಾರ್ಥಿಗೆ ಗೈಡ್ ಆಗಲು ಅವಕಾಶ ನೀಡಬಾರದು. ಸಿಂಡಿಕೇಟ್ ಸಭೆಯ ನಿರ್ಣಯಕ್ಕೆ ವಿರುದ್ಧವಾಗಿ ನೇಮಕಗೊಂಡಿರುವ ಡಾ. ಗೀತಾ ಅವರನ್ನು ತಕ್ಷಣ ಕುಲಸಚಿವೆಯ ಪ್ರಭಾರ ಹುದ್ದೆಯಿಂದ ಬಿಡುಗಡೆ ಮಾಡಿ, ನಿವೃತ್ತ ಶಿಕ್ಷಕರು ಮಾಡಿರುವ ಆರೋಪಗಳ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸಿ ಕ್ರಮ ಕೈಗೊಳ್ಳಬೇಕು ಎಂದು ಡಿ.ಎಸ್. ಅರುಣ್ ಒತ್ತಾಯಿಸಿದರು.