ಜಿಲ್ಲೆ

ಪುನೀತ್​ ಬಗ್ಗೆ ಅಶ್ಲೀಲ ಪದ ಬಳಸಿ ಅವಮಾನ ಮಾಡಿದ್ದ ಕಿಡಿಗೇಡಿಯ ಬಂಧನ: ಕೀಳು ಮನಸ್ಥಿತಿಗೆ ಬೆಲೆ ತೆರಲೇಬೇಕು

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಟ ಪುನೀತ್​ ರಾಜ್​ಕುಮಾರ್​ ಸಾವಿನ ಬಗ್ಗೆ ಅವಹೇಳನಕಾರಿ ಪೊಸ್ಟ್​ ಮಾಡಿದ್ದ ಕಿಡಿಗೇಡಿಯನ್ನು ಬೆಂಗಳೂರು ಪೊಲೀಸರು ಸೋಮವಾರ (ನವೆಂಬರ್​ 1) ಬಂಧಿಸಿದ್ದಾರೆ.

ರಾಜ್​ಕುಮಾರ್​ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಆತನನ್ನು ನೀವು ನೆನಪಿನಲ್ಲೇ ಇಟ್ಟುಕೊಳ್ಳಿ ಮರೆಯಬೇಡಿ. ನಾವು ಎಣ್ಣೆ ಕುಡಿದು ಬಳಿಕ ಆತನ ಸಮಾಧಿ ಮೇಲೆ ಮೂ** ಮಾಡುತ್ತೇವೆ” ಎಂದು ಕಿಡಿಗೇಡಿಯೊಬ್ಬ ಕಾರಿನಲ್ಲಿ ಕುಳಿತು ಮದ್ಯದ ಬಾಟಲ್​ ಕೈಯಲ್ಲಿ ಹಿಡಿದಿರುವ ಫೋಟೋವನ್ನು ಫೋಸ್ಟ್​ ಮಾಡಿದ್ದ. ಈ ಫೋಟೋವನ್ನು ಸುದೀಪ್​ ಪುತ್ರಿ ಸಾನ್ವಿ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಅಪ್​ಲೋಡ್​ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು. ‘ಜನರಿಗೆ ಮನುಷ್ಯತ್ವ ಇಲ್ಲವೇ? ಮದ್ಯಕ್ಕಾಗಿ ಪುನೀತ್​ ಬಗ್ಗೆ ಇಂಥ ಮನಸ್ಥಿತಿಯೇ?’ ಎಂದು ಪ್ರಶ್ನಿಸಿರುವ ಸಾನ್ವಿ, ‘ಕರ್ನಾಟಕ ಸರ್ಕಾರ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಂಡಿತ್ತು. ಬೆಂಗಳೂರಲ್ಲಿ ವಾಸವಿರುವ ಉತ್ತರ ಭಾರತದವರು ಸ್ವಲ್ಪವಾದರೂ ಪ್ರಜ್ಞಾವಂತಿಕೆ ತೋರಿ’ ಎಂದು ಛಾಟಿ ಬೀಸಿದ್ದರು.

ಕಿಡಿಗೇಡಿಯ ಪೋಸ್ಟ್​ ವೈರಲ್​ ಆಗುತ್ತಿದ್ದಂತೆ ಅವರನ್ನು ಪತ್ತೆ ಹಚ್ಚಿ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದರು. ಈ ವಿಚಾರ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆಯೇ ತನಿಖೆಗೆ ಇಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನು ನಗರ ಪೊಲೀಸ್ ಆಯುಕ್ತ ಕಮಲ್​ ಪಂತ್​ ಖಚಿತಪಡಿಸಿದ್ದಾರೆ.

ಅ.29ರಂದು ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಅಪ್ಪು ಅವರ ಅಂತಿಮ ದರ್ಶನ ಪಡೆಯಲು ಲಕ್ಷಾಂತರ ಮಂದಿ ಕಂಠೀರವ ಸ್ಟೇಡಿಯಂನತ್ತ ಧಾವಿಸುತ್ತಲೇ ಇದ್ದರು. ಅಪ್ಪು ಅಗಲಿಕೆ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರಲ್ಲಿ ಭಾನುವಾರದವರೆಗೂ ಬಾರ್​ ಮತ್ತು ಪಬ್​ಗಳನ್ನ ಬಂದ್​ ಮಾಡುವಂತೆ ಆದೇಶ ಹೊರಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗೆ ಆಸ್ಪದ ಕೊಡಬೇಡಿ. ಪುನೀತ್​ ಅವರನ್ನ ಅತ್ಯಂತ ಗೌರವಯುತವಾಗಿ, ಶಾಂತಿಯುತವಾಗಿ ಕಳುಹಿಸಿ ಕೊಡಲು ಸಹಕರಿಸಿ. ಅಪ್ಪು ಅಗಲಿಕೆ ನೋವಿನಲ್ಲಿ ಅಭಿಮಾನಿಗಳು ತಾಳ್ಮೆ, ಸ್ಥಿಮಿತ ಕಳೆದುಕೊಳ್ಳಬಾರದು. ಕುಡಿದ ಅಮಲಿನಲ್ಲಿ ಕೆಲ ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾದರೆ ಕಷ್ಟ ಎಂದು ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಬಾರ್​ಗಳನ್ನ ಬಂದ್​ ಮಾಡಿಸಿತ್ತು. ಈ ವೇಳೆ ಮದ್ಯಕ್ಕಾಗಿ ಪರದಾಡಿದ್ದ ಉತ್ತರ ಭಾರತ ಮೂಲದ ಕೆವರು ಕೀಳು ಮನಸ್ಥಿತಿ ಪ್ರದರ್ಶಿಸಿದ್ದಾರೆ. ಉತ್ತರ ಭಾರತದಿಂದ ಬಂದು ಬೆಂಗಳೂರಲ್ಲಿ ಉದ್ಯೋಗ ಮಾಡುತ್ತಿರುವ ಕೆಲವರು ಎಣ್ಣೆಗಾಗಿ ಅಲೆದಾಡಿದ್ದಾರೆ. ನಿಷೇಧದ ನಡುವೆ ಕೊನೆಗೂ ಬಿಯರ್​ ಸಿಕ್ಕಿದೆ. ಬಳಿಕ ಕಾರಿನಲ್ಲಿ ಬಿಯರ್​ ಬಾಟಲಿ ಹಿಡಿದು ಫೋಟೋ ಕ್ಲಿಕ್ಕಿಸಿ ಅದನ್ನ ಸೋಷಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡಿದ್ದಾನೆ. ಅಷ್ಟೇ ಅಲ್ಲ ಫೋಟೋ ಜತೆಗೆ ಪುನಿತ್​ ರಾಜ್​ಕುಮಾರ್​ ಬಗ್ಗೆ ಅಶ್ಲೀಲ ಪದಗಳಿಂದ ನಿಂದಿಸಿದ್ದು, ಅದರ ಪರಿಣಾಮ ಇದೀಗ ಕಂಬಿ ಹಿಂದೆ ಬಿದ್ದಿದ್ದಾನೆ. (ದಿಗ್ವಿಜಯ ನ್ಯೂಸ್​)