

ಬೆಂಗಳೂರು: ಕರೊನಾದಿಂದ ನೆಲಕಚ್ಚಿದ ಚಿನ್ನಾಭರಣಗಳ ಮಾರಾಟ ಉದ್ಯಮ ಸದ್ಯ ಯಥಾಸ್ಥಿತಿಗೆ ಮರಳಿದೆ. ಈ ದೀಪಾವಳಿ ಸಂದರ್ಭದಲ್ಲಿ ಅಂದಾಜು 2 ಸಾವಿರ ಕೋಟಿ ರೂ.ವಹಿವಾಟು ನಡೆಯುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಸಣ್ಣ ಮತ್ತು ಕಾಪೋರೇಟ್ ವಲಯ ಸೇರಿ 1 ಲಕ್ಷಕ್ಕೂ ಹೆಚ್ಚು ಚಿನ್ನಾಭರಣ ಅಂಗಡಿಗಳಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಬೇಡಿಕೆ ಕುಸಿತ ಹಿನ್ನೆಲೆಯಲ್ಲಿ ಪ್ರತಿ ಗ್ರಾಂ ಚಿನ್ನದ ಮೇಲೆ 100 ರೂ. ನಿಂದ 200 ರೂ.ವರೆಗೆ ಇಳಿಕೆಯಾಗಿದೆ. ಇದೇ ಸಂದರ್ಭದಲ್ಲಿ ದೀಪಾವಳಿ ಹಬ್ಬ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ಲಕ್ಷ್ಮೀ ನಾಣ್ಯ, ಬಳೆ ಮತ್ತು ನೆಕ್ಲೇಸ್ ಸೇರಿ ವಿವಿಧ ಚಿನ್ನಾಭರಣಗಳ ಖರೀದಿಗೆ ಮುಂದಾಗಿದ್ದಾರೆ.
ಹಗುರ ಆಭರಣಗಳ ಖರೀದಿ: ಇತ್ತೀಚಿನ ದಿನಗಳಲ್ಲಿ ಲೈಟ್ವೇಯ್ಟ್ ಆಭರಣ ಖರೀದಿಯ ಟ್ರೆಂಡ್ ಜೋರಾಗಿದೆ. ಆದ್ದರಿಂದ, ಗ್ರಾಹಕರು ಹಗುರ ತೂಕದ ಆಭರಣಗಳನ್ನು ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಈ ಹಿಂದೆ 50 ಗ್ರಾಂ ತೂಕದ ಬಳೆ, ನೆಕ್ಲೇಸ್ ಮತ್ತು ಸರಗಳು ಸೇರಿ ಇನ್ನಿತರ ವಿನ್ಯಾಸದ ಆಭರಣಗಳು ಬರುತ್ತಿದ್ದವು. ಈಗ ಮಾರುಕಟ್ಟೆಗಳಲ್ಲಿ ಕಡಿಮೆ ತೂಕ ಹೊಂದಿರುವ ಆಭರಣಗಳು ಬರುತ್ತಿದ್ದು, ನೋಡುವುದಕ್ಕೂ ಚೆಂದವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು 10 ಗ್ರಾಂ ತೂಕವಿರುವ ಆಭರಣಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಸಾಮಾನ್ಯವಾಗಿ ಶೇ.60 ಗ್ರಾಹಕರು, 10 ಗ್ರಾಂನಿಂದ 50 ಗ್ರಾಂವರೆಗೆ ಚಿನ್ನ ಖರೀದಿಸಿದರೆ, ಶೇ.20 ಗ್ರಾಹಕರು 100 ಗ್ರಾಂವರೆಗೆ ಹಾಗೂ ಇನ್ನುಳಿದವರು ಕಾಲು ಕೆಜಿಯಿಂದ ಅರ್ಧ ಕೆಜಿ ವರೆಗೆ ಖರೀದಿಸುತ್ತಾರೆ. ಪ್ರಸ್ತುತ 22 ಕ್ಯಾರೆಟ್ ಚಿನ್ನ ಗ್ರಾಂಗೆ 4,450 ರೂ, 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 4,785 ರೂ ಇದೆ.
6 ಸಾವಿರ ರೂ.ಇಳಿಕೆ: ಚಿನ್ನದಂತೆ ಬೆಳ್ಳಿ ದರವೂ ಇಳಿಕೆಯಾಗಿದೆ. ಕಳೆದ ಅಕ್ಷಯ ತೃತೀಯ ದಿನದಂದು ಪ್ರತಿ ಕೆಜಿ ಬೆಳ್ಳಿಗೆ 72,500 ರೂ.ಇತ್ತು. ಈಗ 65,600 ರೂ.ಇದ್ದು, ಅಂದಾಜು 6 ಸಾವಿರ ರೂ.ಕಡಿಮೆಯಾಗಿದೆ.
ಶೇ.70 ಸಣ್ಣ ವ್ಯಾಪಾರಿಗಳು: ದೇಶದಲ್ಲಿ ಶೇ.30 ಕಾಪೋರೇಟ್ ಅಥವಾ ಬೃಹತ್ ಆಭರಣ ಮಳಿಗೆಗಳು ಇದ್ದರೆ, ಶೇ.70 ಸಣ್ಣ ಮಳಿಗೆಗಳಿವೆ. ಗ್ರಾಮೀಣ ಹಾಗೂ ಸಣ್ಣಪುಟ್ಟ ನಗರಗಳಲ್ಲಿ ಬಹುತೇಕರು ವಂಶಪಾರಂಪರ್ಯವಾಗಿ ಈ ವೃತ್ತಿಯನ್ನು ನಡೆಸುತ್ತಿದ್ದಾರೆ. ಅಕ್ಷಯಾ ತೃತೀಯ, ದಸರಾ ಮತ್ತು ದೀಪಾವಳಿ ದಿನಗಳಲ್ಲಿ ಚಿನ್ನಾಭರಣಗಳ ವ್ಯಾಪಾರ ತುಸು ಹೆಚ್ಚಿರುತ್ತದೆ.
ಹಾಲ್ಮಾರ್ಕ್ ನಿಯಮ: ಪರಿಶುದ್ಧತೆ ಮತ್ತು ಗುಣಮಟ್ಟವನ್ನು ದೃಢೀಕರಿಸಲು ಈಗಾಗಲೇ ದೇಶದಲ್ಲಿ ಹಾಲ್ಮಾರ್ಕ್ ನಿಯಮ ಜಾರಿಗೆ ಬಂದಿದೆ. ಅಲ್ಲದೆ, ಭಾರತೀಯ ಮಾನಕ ಮಂಡಳಿ (ಬಿಐಎಸ್) ವರ್ಗೀಕೃತ ಚಿನ್ನಾಭರಣಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ(ಯುಐಡಿ) ನೀಡುವ ಯೋಜನೆ ಅನುಷ್ಠಾನಕ್ಕೆ ತಂದಿದೆ. ಇದರಿಂದ, ಚಿನ್ನಾಭರಣಗಳ ಮಳಿಗೆಗಳಲ್ಲಿ ಚಿನ್ನ ಖರೀದಿಸುವ ವೇಳೆ ಮಾಲೀಕರು ಗ್ರಾಹಕರಿಗೆ ಮೋಸ ಮಾಡಲು ಸಾಧ್ಯವಿಲ್ಲ. ಪ್ರತಿ ವರ್ಷ ಶ್ರೀಮಂತರು ಹಾಗೂ ರಾಜಕೀಯ ಮುಖಂಡರು ಚಿನ್ನಾಭರಣಗಳ ಮೇಲೆ ನೂರಾರು ಕೋಟಿ ರೂ. ಕಪು್ಪ ಹಣ ಹೂಡಿಕೆ ಮಾಡಿ ಬಿಳಿ ಮಾಡಿಕೊಳ್ಳಲಾಗುತ್ತದೆ. ಪ್ರತಿ ವರ್ಷ ನೂರಾರು ನಕಲಿ ಚಿನ್ನ ಪ್ರಕರಣಗಳು ಹಾಗೂ ಕಳ್ಳತನ ಪ್ರಕರಣಗಳು ನಡೆಯುತ್ತಿದೆ. ಕಳ್ಳರು ಕದ್ದ ಚಿನ್ನವನ್ನು ಮಾರಾಟ ಮಾಡುತ್ತಿರುತ್ತಾರೆ. ಆದ್ದರಿಂದ ಚಿನ್ನಗಳಿಗೆ ಶಾಶ್ವತವಾಗಿ ಸಂಖ್ಯೆ ನೀಡುವುದರಿಂದ ಈ ಎಲ್ಲದಕ್ಕೂ ತಡೆ ಬೀಳುವ ಜತೆಗೆ ಸುಲಭವಾಗಿ ಆಭರಣಗಳನ್ನು ಗುರುತಿಸಲು ಅನುಕೂಲವಾಗಲಿದೆ. ಚುನಾವಣೆಗಳ ಸಂದರ್ಭದಲ್ಲಿ ವಿವಿಧ ಪಕ್ಷಗಳ ರಾಜಕೀಯ ಅಭ್ಯರ್ಥಿಗಳು ಕಳ್ಳಮಾರ್ಗದಲ್ಲಿ ಕೆಜಿ ಗಟ್ಟಲೆ ಚಿನ್ನಾಭರಣಗಳನ್ನು ಖರೀದಿಸಿ ಮತದಾರರಿಗೆ ಹಂಚುತ್ತಾರೆ. ಈ ವೇಳೆ ಚಿನ್ನಾಭರಣ ವರ್ತಕರು ನಕಲಿ ಬಿಲ್ ತಯಾರಿಸಿ ಇವರಿಗೆ ನೀಡುತ್ತಾರೆ. ಸರ್ಕಾರಕ್ಕೂ ತೆರಿಗೆ ವಂಚಿಸುತ್ತಿರುವ ಆರೋಪಗಳಿವೆ. ಆದ್ದರಿಂದಈ ಎಲ್ಲ ಅಕ್ರಮಗಳನ್ನು ತಡೆಯಲು ಹಾಲ್ವಾರ್ಕ್ ಹಾಗೂ ಯುಐಡಿ ಯೋಜನೆ ಜಾರಿಗೆ ಬಂದಿದೆ.
ವಿವಿಧ ಕೊಡುಗೆ ಘೋಷಣೆ: ಕರೊನಾ 2ನೇ ಅಲೆ ನಿಯಂತ್ರಣಕ್ಕಾಗಿ ಲಾಕ್ಡೌನ್ ಹೇರಿದ್ದ ಸಂದರ್ಭದಲ್ಲಿ ಅಕ್ಷಯ ತೃತೀಯಾ ದಿನ ಬಂದಿತ್ತು. ಆ ವೇಳೆ ಕಾಪೋರೇಟ್ ವಲಯದ ಜ್ಯುವೆಲರಿ ಅಂಗಡಿಗಳು ಶೇ.20 ಆನ್ಲೈನ್ನಲ್ಲಿ ವಹಿವಾಟು ನಡೆಸಿರುವುದನ್ನು ಬಿಟ್ಟರೆ ಅಷ್ಟೇನೂ ವಹಿವಾಟು ಇರಲಿಲ್ಲ. ಇದರಿಂದ ಒಂದೇ ದಿನದಲ್ಲಿ ರಾಜ್ಯಾದ್ಯಂತ ಅಂದಾಜು 700 ಕೋಟಿ ರೂ.ನಷ್ಟವಾಯಿತು. ಸದ್ಯ ಕರೊನಾ ಪ್ರಕರಣಗಳು ಇಳಿದಿರುವ ಹಿನ್ನೆಲೆಯಲ್ಲಿ ಎಲ್ಲ ಉದ್ಯಮಗಳು ಸಾಮಾನ್ಯ ಸ್ಥಿತಿಗೆ ಮರಳಿದ್ದು ಹಾಗೂ ದೀಪಾವಳಿ ಸಂದರ್ಭದಲ್ಲಿ ಹೆಚ್ಚಿನ ಚಿನ್ನಾಭರಣಗಳ ಖರೀದಿ ಪ್ರಕ್ರಿಯೆ ನಡೆಯುವುದರಿಂದ ಗ್ರಾಹಕರನ್ನು ಸೆಳೆಯಲು ಕಾಪೋರೇಟ್ ವಲಯದ ಜ್ಯುವೆಲರಿ ಮಳಿಗೆಗಳು, ಈಗಾಗಲೆ ಚಿನ್ನ ಮತ್ತು ವಜ್ರಾಭರಣಗಳ ಖರೀದಿಯ ಮೇಲೆ ವಿಶೇಷ ಆಫರ್ಗಳನ್ನು ಘೋಷಿಸಿವೆ. ಚಿನ್ನಾಭರಣ ಮಾರಾಟ ಮೇಳ ಮತ್ತು ಪ್ರದರ್ಶನಗಳನ್ನು ಏರ್ಪಡಿಸಿವೆ. ಇದಕ್ಕಾಗಿ ಹತ್ತಾರು ಕೋಟಿ ರೂ.ಮೀಸಲಿಟ್ಟಿವೆ.
| ಬಿ.ರಾಮಾಚಾರಿ ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ.