More

    ರಾಜ್ಯೋತ್ಸವ ಪ್ರಶಸ್ತಿಗೆ ಇನ್ನು ಅರ್ಜಿ ಬೇಕಿಲ್ಲ; ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ; ಪ್ರಶಸ್ತಿ ಮೊತ್ತ ಐದು ಲಕ್ಷ ರೂ.ಗೆ ಏರಿಕೆ

    ಬೆಂಗಳೂರು: ಅರ್ಹರಿಂದ ಅರ್ಜಿ ಸ್ವೀಕರಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂಪ್ರದಾಯ ಕೈಬಿಟ್ಟು ರಾಜ್ಯೋತ್ಸವ ಪ್ರಶಸ್ತಿ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸೋಮವಾರ ಘೋಷಿಸಿದರು. 66ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ 66 ಸಾಧಕರು ಹಾಗೂ 10 ಸಂಘ-ಸಂಸ್ಥೆಗಳಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯೋತ್ಸವ ಪ್ರಶಸ್ತಿಗೆ ಈಗಾಗಲೆ ಉತ್ತಮ ಗೌರವವಿದೆ. ಈ ಮೌಲ್ಯವನ್ನು ಮತ್ತಷ್ಟು ಹೆಚ್ಚಳ ಮಾಡಬೇಕಿದೆ. ಪ್ರಶಸ್ತಿ ಬೇಕು ಎಂದು ಇನ್ನು ಮುಂದೆ ಯಾರೂ ಅರ್ಜಿ ನೀಡುವ ಅಗತ್ಯವಿಲ್ಲ. ಆಯ್ಕೆ ಸಮಿತಿ ಸ್ವತಃ ಶೋಧನೆ ಮಾಡಿ, ಅರ್ಹರನ್ನು ಗುರುತಿಸಿ ನೀಡಿದಾಗ ಪ್ರಶಸ್ತಿ ಮೌಲ್ಯ ಹೆಚ್ಚಾಗುತ್ತದೆ. ಆಯ್ಕೆ ಎಂಬುದು ಶೋಧನೆಯಿಂದ ಆಗಬೇಕೆ ಹೊರತು ಅರ್ಜಿಯಿಂದಲ್ಲ ಎಂದರು.

    60 ವರ್ಷ ಮೀರಿದವರಿಗೆ ಮಾತ್ರ ಪ್ರಶಸ್ತಿ ಎಂದು ಸರ್ಕಾರವೇ ಈ ಹಿಂದೆ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದೆ. ವಯಸ್ಸಿನ ಆಧಾರದಲ್ಲಿ ಪ್ರಶಸ್ತಿ ನೀಡುವುದು ಸರಿಯಲ್ಲ ಎಂಬ ಭಾವನೆಯಿದೆ. ವಯಸ್ಸಿಗೆ ಮಿತಿ ವಿಧಿಸದೆ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲು ನ್ಯಾಯಾಲಯದಲ್ಲಿ ಪ್ರಯತ್ನ ಮಾಡಲಾಗುತ್ತದೆ. ಜತೆಗೆ, ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿ ಮೊತ್ತವನ್ನು 1 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಳ ಮಾಡುತ್ತೇವೆ. ಇಲ್ಲಿ ಮೊತ್ತ ಮುಖ್ಯವಲ್ಲ, ಈ ಪ್ರಶಸ್ತಿಗೆ ಸರ್ಕಾರ ಎಷ್ಟು ಗೌರವ ನೀಡುತ್ತಿದೆ ಎಂಬುದನ್ನು ಅರಿಯಬೇಕು. ಮುಂದಿನ ವರ್ಷದಿಂದ ರಾಜ್ಯೋತ್ಸವವನ್ನು ಜನೋತ್ಸವವನ್ನಾಗಿ ಮಾಡಲಾಗುತ್ತದೆ ಎಂದು ಹೇಳಿದರು.

    ನಿಸ್ವಾರ್ಥಿಗಳೂ ಇದ್ದಾರೆ: ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿ, ರಾಜ್ಯೋತ್ಸವವನ್ನು ಈ ಬಾರಿ ಹೇಗೆ ಆಚರಿಸಬೇಕೆಂದು ಆಲೋಚಿಸಿ ಎಂದು ಸಚಿವನಾಗುವ ಮುನ್ನವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಅದಕ್ಕೆ ಅನುಗುಣವಾಗಿ ರಾಜ್ಯೋತ್ಸವಕ್ಕೆ 1 ವಾರ ಮೊದಲಿನಿಂದಲೆ ಅನೇಕ ಕಾರ್ಯಕ್ರಮಗಳನ್ನು ಇಲಾಖೆ ಹಾಗೂ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಮಾಡಿದ್ದೇವೆ. ಯಾದಗಿರಿಯ ಪೌರಕಾರ್ವಿುಕ ಮಹಿಳೆಯೊಬ್ಬರಿಗೆ ಪ್ರಶಸ್ತಿಗೆ ವಿವರ ನೀಡುವಂತೆ ಕರೆ ಮಾಡಿದಾಗ, ನನಗಿಂತಲೂ ಉತ್ತಮ ಕೆಲಸ ಮಾಡಿರುವ ಮತ್ತೊಬ್ಬ ಮಹಿಳೆಗೆ ನೀಡುವಂತೆ ಅವರು ಹೇಳಿದರು. ಪ್ರಶಸ್ತಿಗೆ ಹಾತೊರೆಯುವವರ ನಡುವೆ ಇಂಥ ನಿಸ್ವಾರ್ಥಿಗಳೂ ಇದ್ದಾರೆ ಎನ್ನುವುದು ತಿಳಿಯಿತು ಎಂದು ಸ್ಮರಿಸಿದರು. ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ, ಸಂಸದ ಉಮೇಶ್ ಜಾಧವ್, ಕಂದಾಯ ಸಚಿವ ಆರ್.ಅಶೋಕ್, ಶಾಸಕ ಉದಯ್ ಆರ್. ಗರುಡಾಚಾರ್ ಮತ್ತಿತರರು ಉಪಸ್ಥಿತರಿದ್ದರು.

    ವಯೋಮಿತಿಗೆ ಆಕ್ಷೇಪ…: ರಾಜ್ಯೋತ್ಸವದ ಮೌಲ್ಯವನ್ನು ಹೆಚ್ಚಳ ಮಾಡುವ ಪ್ರಯತ್ನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 3 ಘೊಷಣೆ ಮಾಡಿದರು. ಪ್ರಶಸ್ತಿ ಮೌಲ್ಯವನ್ನು 5 ಲಕ್ಷ ರೂ.ಗೆ ಹೆಚ್ಚಳ, ಅರ್ಜಿಯನ್ನು ಪಡೆಯದೆ ಸಮಿತಿಯಿಂದಲೇ ಸಾಧಕರನ್ನು ಹುಡುಕಿ ಪ್ರಶಸ್ತಿ ನೀಡುವುದು ಹಾಗೂ 60 ವರ್ಷ ದಾಟಿದವರಿಗೆ ಮಾತ್ರ ಪ್ರಶಸ್ತಿ ಎಂಬ ನಿಯಮವನ್ನು ತೆರವುಗೊಳಿಸುವುದಾಗಿ ಹೇಳಿದರು. ಮೊದಲೆರಡು ಅಭಿಪ್ರಾಯಗಳ ಕುರಿತು ಯಾವುದೇ ಭಿನ್ನಾಭಿಪ್ರಾಯ ಇಲ್ಲವಾದರೂ ವಯೋಮಿತಿ ಕುರಿತು ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಮೊದಲನೆಯದಾಗಿ ಈ ಪ್ರಮಾಣಪತ್ರವನ್ನು ನ್ಯಾಯಾಲಯದಲ್ಲಿ ಸಲ್ಲಿಸಿರುವುದರಿಂದ ಈಗ ಮತ್ತೆ ನ್ಯಾಯಾಲಯದ ಮನವೊಲಿಸಬೇಕು. ಅದಕ್ಕಿಂತಲೂ ಮುಖ್ಯವಾಗಿ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಾಧನೆ ತೋರಿದವರಿಗೆ ವಯೋಮಿತಿಯನ್ನು ಸಡಿಲಿಸಲು ಈಗಾಗಲೆ ಇರುವ ಮಾರ್ಗಸೂಚಿಯ 9ನೇ ಅಂಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹಾಗೇನಾದರೂ ವಯೋಮಿತಿ ಸಡಿಲಿಕೆ ಮಾಡಿದರೆ, ಪ್ರಶಸ್ತಿ ಈ ಹಿಂದಿನಂತೆ ಅಧಃಪತನಕ್ಕೆ ಒಳಗಾಗುತ್ತದೆ. ಬಹುಶಃ ಮುಖ್ಯಮಂತ್ರಿ ಅವರಿಗೆ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ಹಿರಿಯ ಕಲಾವಿದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪುನೀತ್​ಗೆ ನಮನ: ಕಾರ್ಯಕ್ರಮದ ಆರಂಭಕ್ಕೂ ಮುನ್ನ ದಿವಂಗತ ಪುನೀತ್ ರಾಜ್​ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮೌನ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುಳಾ ಶ್ರದ್ಧಾಂಜಲಿ ಸಲ್ಲಿಸಿದರು. ಕಾರ್ಯಕ್ರಮದ ನಡುವೆ ಪೊ›. ದೊಡ್ಡರಂಗೇಗೌಡ ರಚಿಸಿ, ಅಜಯ್ ವಾರಿಯರ್ ಹಾಡಿರುವ ವಿಡಿಯೋ ಚಿತ್ರೀಕರಣಗೊಂಡ ನಮ್ಮ ಕನ್ನಡ ಗೀತೆಯನ್ನು ಲೋಕಾರ್ಪಣೆ ಮಾಡಲಾಯಿತು.

    ಆರಂಭವಾಗಲಿ ಕರ್ನಾಟಕ ಪರ್ವ: ಸಮಾಜದ ಎಲ್ಲ ರಂಗಗಳಲ್ಲಿ ಕನ್ನಡಿಗರೇ ಮುಂಚೂಣಿ ಯಲ್ಲಿರುವಂತೆ ಕರ್ನಾಟಕಕ ಪರ್ವಕ್ಕೆ ನಾವೆಲ್ಲರೂ ಸೇರಿ ಚಾಲನೆ ನೀಡೋಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕರೆ ನೀಡಿದರು. ಜೀವನ ನಡೆಸಲು ಅನೇಕ ಆಯ್ಕೆಗಳಿದ್ದರೂ ಸಮಾಜ ಸೇವೆಯನ್ನೇ ಜೀವನದ ಉಸಿರಾಗಿಸಿಕೊಂಡ ಅಮೂಲ್ಯ ಮುತ್ತು-ರತ್ನಗಳನ್ನು ಆಯ್ಕೆ ಮಾಡಲಾಗಿದೆ. ಮಾತನಾಡುವುದು ಬಹಳ ಸುಲಭ. ಆದರೆ, ಒಂದು ಗುರಿಯನ್ನು ಅರಸಿ ಜೀವನ ಮಾಡುವುದು ಬಹಳ ಕಷ್ಟ. ಸಮಾಜದಿಂದ ಪಡೆದುಕೊಂಡಿದ್ದನ್ನು ತಿರುಗಿ ನೀಡಿದಾಗ ಮಾತ್ರ ನಮ್ಮ ಬದುಕಿನ ಬ್ಯಾಲೆನ್ಸ್ ಶೀಟ್ ಸಮತೋಲನವಾಗುತ್ತದೆ ಎಂದು ಸಿಎಂ ಹೇಳಿದರು.

    • ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಸೋಮವಾರ ನಗರದ ನೆಹರು ಮೈದಾನದಲ್ಲಿ ಜರುಗಿದ ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಾಡಿತು. ಘಟನೆ ಕುರಿತಂತೆ ತನಿಖೆಗೆ ಆದೇಶ ನೀಡಲಾಗಿದೆ. ಸಚಿವ ಎಸ್.ಅಂಗಾರ ಧ್ವಜಾರೋಹಣ ನೆರವೇರಿಸಿದ್ದರು.
    • ಕನ್ನಡ ರಾಜ್ಯೋತ್ಸವ ದಿನದಂದೇ ಬೆಳಗಾವಿಯಲ್ಲಿ ಕರಾಳ ದಿನ ಆಚರಿಸುತ್ತಿದ್ದ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಪುಂಡರಿಗೆ ನಗರ ಪೊಲೀಸರು ಮೂಗುದಾರ ಹಾಕಿದ್ದಾರೆ. ಮೆರವಣಿಗೆ ನಡೆಸಲು ಪೊಲೀಸರು ಅನುಮತಿ ನೀಡದ್ದರಿಂದ ಹಿಂದೆ ಸರಿದ ಎಂಇಎಸ್ ಕಾರ್ಯಕರ್ತರು, ನಗರದ ಮರಾಠಾ ಮಂದಿರದಲ್ಲಿ ಧರಣಿ ನಡೆಸಿ, ಸಭೆ ನಡೆಸಿದರು.
    ರಾಜ್ಯೋತ್ಸವ ಪ್ರಶಸ್ತಿಗೆ ಇನ್ನು ಅರ್ಜಿ ಬೇಕಿಲ್ಲ; ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ; ಪ್ರಶಸ್ತಿ ಮೊತ್ತ ಐದು ಲಕ್ಷ ರೂ.ಗೆ ಏರಿಕೆ
    ಸ್ವಾತಂತ್ರ್ಯೊತ್ಸವ ಅಮೃತ ಮಹೋತ್ಸವ ವಿಶೇಷ ಪ್ರಶಸ್ತಿಯನ್ನು ಅದಮ್ಯ ಚೇತನ ಪ್ರತಿಷ್ಠಾನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಸ್ವೀಕರಿಸಿದರು.

    ಸಲಹೆ ಸಮಿತಿಯಲ್ಲಿರುವವರಿಗೆ ನಾವು ಕಣ್ಣಿಗೆ ಬಿದ್ದಿರುತ್ತೇವೆ. ಆ ಸಾಧನೆ ಕಣ್ಣಿಗೆ ಬೀಳಲು ಅನೇಕರ ಪ್ರಯತ್ನ ಇರುತ್ತದೆ. ಅವರೆಲ್ಲರ ಪ್ರಯತ್ನದ ಫಲವಾಗಿ ಈ ಗೌರವ ಸಿಕ್ಕಿದೆ. ಹೊಸ ರೀತಿಯಲ್ಲಿ ನೋಡುವ ಅಭ್ಯಾಸ ಮಾಡಿಕೊಳ್ಳಬೇಕು ಎಂಬ ಸಿಎಂ ಮಾತಿಗೆ ಬೆಂಬಲವಿದೆ.

    | ಪ್ರಕಾಶ್ ಬೆಳವಾಡಿ

    ಕಲಾವಿದರು ಅರವತ್ತು ವರ್ಷ ಬದುಕುವುದೇ ಕಷ್ಟ. ವಯಸ್ಸು ಕಡಿಮೆ ಮಾಡಬೇಕು ಎಂದು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಬೇಕೆಂದಿದ್ದೆ. ಅವರೇ ಆ ನಿಟ್ಟಿನಲ್ಲಿ ಆಲೋಚನೆ ಮಾಡಿರುವುದು ಸಂತಸ ತಂದಿದೆ.

    | ಗಂಗಾವತಿ ಪ್ರಾಣೇಶ್

    ಭಾರತದ ಪರಂಪರೆಯ ಮೌಲ್ಯ ಸತ್ಯ. ಸತ್ಯಕ್ಕೆ ಯಾವಾಗಲೂ ಗೆಲುವು ಸಿಗಬೇಕು, ನಮ್ಮ ಪ್ರಯಾಣ ಅಸತ್ಯದಿಂದ ಸತ್ಯದೆಡೆಗೆ ಪ್ರಯಾಣಿಸಬೇಕು. ಇದು ಎಲ್ಲ ಸಾಧಕರಿಗೆ ಸಂದ ಗೌರವ.

    | ಅಜ್ಜಂಪುರ ಮಂಜುನಾಥ್

    ಅನಂತಸ್ವಾಮಿ ಧಾಟಿಯಲ್ಲಿ ನಾಡಗೀತೆ: ಗಾಯಕಿ ದೀಪಿಕಾ ಶ್ರೀಕಾಂತ್ ಅವರ ತಂಡ ಕಾರ್ಯಕ್ರಮಕ್ಕೆ ಮುನ್ನ ನಡೆಸಿಕೊಟ್ಟ ಗೀತಗಾನ ಮನಸೂರೆಗೊಂಡಿತು. ಕಾರ್ಯಕ್ರಮದ ಆರಂಭದಲ್ಲಿ ದಿ. ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಯನ್ನು ಹಾಡಲಾಯಿತು. ಆದರೆ, ಈ ವರ್ಷವೂ ನಾಡಗೀತೆಗೆ ಅಧಿಕೃತ ಮಾನ್ಯತೆ ಸಿಗಲಿದೆ ಎಂಬ ನಿರೀಕ್ಷೆ ಹಾಗೆಯೇ ಉಳಿಯಿತು.

    ಅನಕ್ಷರಸ್ಥ ಕೈದಿಗಳಿಗೆ ಅಕ್ಷರ ಆಂದೋಲನ

    ಚಿಕ್ಕಮಗಳೂರು: ರಾಜ್ಯದ 50 ಜೈಲುಗಳಲ್ಲಿರುವ 6 ಸಾವಿರ ಮಂದಿ ಅನಕ್ಷರಸ್ಥ ಕೈದಿಗಳಿಗೆ ಕಾರಾಗೃಹ ಇಲಾಖೆಯಿಂದ ಕನ್ನಡ ರಾಜ್ಯೋತ್ಸವ ದಿನದಿಂದಲೇ ಅಕ್ಷರ ಕಲಿಸಿಕೊಡುವ ಆಂದೋಲನಾ ಆರಂಭಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಈವರೆಗೂ ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿ ಕೈದಿಗಳಿಗೆ ಸೂಚನೆಗಳನ್ನು ಕೊಡಲಾಗುತ್ತಿತ್ತು. ಇನ್ನು ಮುಂದೆ ಕನ್ನಡದಲ್ಲಿ ಸೂಚನೆ ಕೊಡುವ ಪದ್ಧತಿ ಜಾರಿಗೆ ತರಲಾಗಿದೆ. ಒಂದು ವರ್ಷದ ಹಿಂದಿನಿಂದಲೂ ಕನ್ನಡದಲ್ಲಿ ತರ್ಜುಮೆ ಮಾಡಿ ತಯಾರು ಮಾಡಲಾಗಿತ್ತು. ಗೃಹ ಸಚಿವನಾದ ನಂತರ ಜಾರಿಗೆ ತರಲೇಬೇಕೆಂದು ಸರ್ಕಾರದಿಂದ ಆದೇಶ ಹೊರಡಿಸಿ ಅನುಷ್ಠಾನ ಮಾಡಲಾಗಿದೆ ಎಂದರು.

    ರಾಜ್ಯೋತ್ಸವ ಪ್ರಶಸ್ತಿಗೆ ಇನ್ನು ಅರ್ಜಿ ಬೇಕಿಲ್ಲ; ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ; ಪ್ರಶಸ್ತಿ ಮೊತ್ತ ಐದು ಲಕ್ಷ ರೂ.ಗೆ ಏರಿಕೆ
    ಮುರ್ಡೆಶ್ವರದ ನೇತ್ರಾಣಿ ಅಡ್ವೆಂಚರ್ಸ್ ತಂಡವು ಮುರ್ಡೆಶ್ವರದ ನೇತ್ರಾಣಿ ಗುಡ್ಡದ ಬಳಿ ಸಮುದ್ರದ 10 ಮೀಟರ್ ಆಳದಲ್ಲಿ ಕನ್ನಡ ಬಾವುಟ ಪ್ರದರ್ಶಿಸುವ ಮೂಲಕ ರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದೆ. ಅಡ್ವೆಂಚರ್ಸ್ ಮುಖ್ಯಸ್ಥ ಗಣೇಶ ಹರಿಕಾಂತ ಸಾಹಸಕ್ಕೆ ಕನ್ನಡಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts