

ಚೆನ್ನೈ: ಒಂದು ಕಾಲದಲ್ಲಿ ಸೆಲೆಬ್ರಿಟಿಗಳ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಕಾಲಿವುಡ್ ಅಂಗಳದಲ್ಲಿ ತಲ್ಲಣ ಸೃಷ್ಟಿಸಿದ್ದ ತಮಿಳುನಾಡಿನ ರೇಡಿಯೋ ಜಾಕಿ ಹಾಗೂ ಗಾಯಕಿ ಸುಚಿತ್ರಾ ಕಾರ್ತಿಕ್ ಇದೀಗ ಮತ್ತೆ ಕ್ಯಾಮೆರಾ ಮುಂದೆ ಬಂದಿದ್ದು, ತನ್ನ ಗಂಭೀರ ಆರೋಪಗಳಿಂದ ಮತ್ತೆ ತಮಿಳು ಸಿನಿರಂಗದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿ ಮಾಡುತ್ತಿದ್ದಾರೆ. ಅಕ್ರಮ ಸಂಬಂಧ ಮತ್ತು ಕಾಲಿವುಡ್ನ ಡ್ರಗ್ಸ್ ಪಾರ್ಟಿಗಳ ಬಗ್ಗೆ ಮಾತನಾಡುವ ಮೂಲಕ ಬಿಸಿ ಬಿಸಿ ಚರ್ಚೆಗೆ ಆಹ್ವಾನ ಮಾಡಿಕೊಟ್ಟಿದ್ದಾರೆ.
2017ರಲ್ಲಿ ಸುಚಿ ಲೀಕ್ಸ್ ಪ್ರಕರಣ ಬಹಳ ಸುದ್ದಿ ಮಾಡಿತ್ತು. ಇದೀಗ ಅದೇ ಹೆಸರಿನಲ್ಲಿ ಸುಚಿ ಮತ್ತೊಮ್ಮೆ ತಮಿಳು ಸಿನಿ ಉದ್ಯಮದ ಮೇಲೆ ಬಾಂಬ್ ಸಿಡಿಸಿದ್ದಾರೆ. ಮತ್ತೊಮ್ಮೆ ನಟ ಧನುಷ್, ನಾಯಕ ಹಾಗೂ ಸಂಗೀತ ನಿರ್ದೇಶಕ ಜಿ.ವಿ ಪ್ರಕಾಶ್ ಕುಮಾರ್ ಮತ್ತು ತ್ರಿಷಾ ಅವರ ಬಗ್ಗೆ ಸಂಚಲನಾತ್ಮಕ ಕಾಮೆಂಟ್ಗಳನ್ನು ಮಾಡಿದ್ದಾರೆ.
ಧನುಷ್ ಮತ್ತು ಐಶ್ವರ್ಯಾ ವಿಚ್ಛೇದನದ ಬಗ್ಗೆ ಮಾತನಾಡುತ್ತಾ, ಇಬ್ಬರೂ ತಮ್ಮ ದಾಂಪತ್ಯ ಜೀವನದಲ್ಲಿ ಪರಸ್ಪರ ಮೋಸ ಮಾಡಿಕೊಂಡಿದ್ದಾರೆ. ಹೊರಗಡೆ ಬೇರೆ ಬೇರೆ ಸಂಬಂಧ ಇತ್ತು ಎಂದು ಆರೋಪಿಸಿದ್ದಾರೆ. ಅಲ್ಲದೆ, ಧನುಷ್ ಓರ್ವ ಸಲಿಂಗಕಾಮಿ ಎಂದಿದ್ದಾರೆ. ಇತ್ತೀಚೆಗೆ ಸೈಂಧವಿ ಮತ್ತು ಜಿ.ವಿ. ಪ್ರಕಾಶ್ ಕುಮಾರ್ ನಡುವಿನ ದಾಂಪತ್ಯ ಜೀವನ ಮುರಿದುಬಿತ್ತು. ಇಬ್ಬರು ಡಿವೋರ್ಸ್ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಚಿತ್ರಾ, ಪ್ರಕಾಶ್ ಕೂಡ ಸಲಿಂಗಕಾಮಿ ಎಂದಿದ್ದಾರೆ. ಧನುಷ್ ಮತ್ತು ಪ್ರಕಾಶ್ ಇಬ್ಬರೂ ಒಂದೇ ಕೋಣೆಯಲ್ಲಿ ಇರುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಹುಭಾಷಾ ನಟಿ ತ್ರಿಷಾ ಬಗ್ಗೆಯೂ ಗಂಭೀರ ಆರೋಪ ಮಾಡಿರುವ ಸುಚಿತ್ರಾ, ಸುಚಿ ಲೀಕ್ಸ್ ಹೆಸರಿನಲ್ಲಿ ಬಿಡುಗಡೆಯಾಗಿರುವ ಎಲ್ಲ ಫೋಟೋಗಳನ್ನು ನೀಡಿದ್ದೇ ತ್ರಿಷಾ ಎಂದಿದ್ದಾರೆ. ಆ ಫೋಟೋಗಳು ವೈರಲ್ ಆದ ನಂತರ ತ್ರಿಷಾ ತನ್ನ ಪ್ಲೇಟ್ ಬದಲಿಸಿದರು. ಅಮಲಾ ಪಾಲ್ ಮತ್ತು ತ್ರಿಷಾ ಜೊತೆಗಿನ ಧನುಷ್ ಖಾಸಗಿ ಫೋಟೋಗಳು ಲೀಕ್ ಆಗಿದ್ದರಿಂದ ಧನುಷ್ ಮತ್ತು ಐಶ್ವರ್ಯಾ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ ಎಂದು ಸುಚಿತ್ರಾ ಹೇಳಿದ್ದಾರೆ. ಸುಚಿತ್ರಾ ತನ್ನ ಮಾಜಿ ಪತಿ ಕಾರ್ತಿಕ್ ವಿರುದ್ಧವೂ ಆರೋಪ ಮಾಡಿದ್ದಾರೆ. ಆತನೂ ಕೂಡ ಸಲಿಂಗಕಾಮಿ ಎಂದಿದ್ದಾರೆ. ಆದರೆ, ಸುಚಿತ್ರಾ ಅವರ ಕಾಮೆಂಟ್‌ಗಳಿಗೆ ಕಾರ್ತಿಕ್ ಪ್ರತಿಕ್ರಿಯೆ ನೀಡಿದ್ದು, ಆಕೆಯ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದಿದ್ದಾರೆ.
ಏನಿದು ಸುಚಿ ಲೀಕ್ಸ್ ಪ್ರಕರಣ?
2017ರಲ್ಲಿ ಸುಚಿತ್ರಾ ಅವರ ಟ್ವಿಟರ್ ಪೇಜ್ನಿಂದ ಕಾಲಿವುಡ್ ಸೆಲೆಬ್ರಿಟಿಗಳ ಕೆಲವೊಂದು ಅಶ್ಲೀಲ ವಿಡಿಯೋ ಮತ್ತು ಫೋಟೋಗಳು ಹೊರಬಿದ್ದ ಬಳಿಕ ಭಾರೀ ವಿವಾದವೇ ಸೃಷ್ಟಿಯಾಗಿತ್ತು. ಇದನ್ನು ಸುಚಿ ಲೀಕ್ಸ್ ಪ್ರಕರಣ ಎಂದೇ ಕರೆಯಲಾಗಿದೆ. ಈ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದಂತೆ ನನ್ನ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು ಎಂದು ಸುಚಿತ್ರಾ ಸ್ಪಷ್ಟನೆ ನೀಡಿದ್ದರು. ಆದರೆ, ಅದು ಉದ್ದೇಶಪೂರ್ವಕವಾಗಿಯೇ ಲೀಕ್ ಮಾಡಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿದ್ದವು. ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ಅವರ ಸಹಾಯಕರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡರು ಎಂದು ಸುಚಿತ್ರಾ ಆರೋಪಿದ್ದರು. ಅಲ್ಲದೆ, ಧನುಷ್ ಅವರು ನನಗೆ ಡ್ರಗ್ಸ್ ನೀಡಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡುವ ಮೂಲಕ ಕಾಲಿವುಡ್ ಇಂಡಸ್ಟ್ರಿಯಲ್ಲಿನ ಕಾಸ್ಟಿಂಗ್ ಕೌಚ್ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದರು.
ಟ್ವಿಟರ್ ಖಾತೆಯಲ್ಲಿ ಧನುಷ್, ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ಮತ್ತು ನಟಿಯರಾದ ಆಂಡ್ರಿಯಾ ಜೆರೆಮಿಯಾ, ತ್ರಿಷಾ, ಅಮಲಾ ಪೌಲ್ ಹಾಗೂ ಸಂಚಿತಾ ಶೆಟ್ಟಿ ಅವರ ಕೆಲ ಫೋಟೋಗಳು ಮತ್ತು ವಿಡಿಯೋಗಳು ಜಾಗತಿಕ ಗಮನವನ್ನು ಸೆಳೆದವು. ಈ ಪ್ರಕರಣ ಕಾಲಿವುಡ್ನಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿ, ಕೊನೆಗೆ ತಣ್ಣಗಾಯಿತು.
ಇದೀಗ ಸುಚಿತ್ರಾ ಅವರು ಮರಳಿ ಬಂದಿದ್ದು, ತಮಿಳು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸುಚಿತ್ರಾ ಅವರು ಆಡಿರುವ ಮಾತುಗಳು ಮತ್ತೆ ವಿವಾದದ ಸ್ವರೂಪ ಪಡೆದುಕೊಂಡಿದೆ. (ಏಜೆನ್ಸೀಸ್)